×
Ad

ರಾಯಚೂರು: ಪ್ರಯಾಣಿಕರೊಂದಿಗೆ ವಾಗ್ವಾದ; ಕೆಎಸ್ಸಾರ್ಟಿಸಿ ಬಸ್ ನ ಗ್ಲಾಸ್ ಒಡೆದ ಕಾನ್‌ಸ್ಟೇಬಲ್‌

Update: 2025-06-06 11:15 IST

ರಾಯಚೂರು: ಬಸ್ ಸೀಟಿಗಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಹೆಡ್‌ ಕಾನ್‌ಸ್ಟೇಬಲ್‌ ಒಬ್ಬ ಕೆಎಸ್ಸಾರ್ಟಿಸಿ ಬಸ್ಸಿನ ಮುಂಭಾಗದ ಗ್ಲಾಸ್ ಒಡೆದಿರುವ ಘಟನೆ ದೇವದುರ್ಗ ತಾಲೂಕಿನ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ದೇವದುರ್ಗ ಪಟ್ಟಣದದಿಂದ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ  ಕರ್ತವ್ಯ ಮುಗಿಸಿಕೊಂಡು ರಾಯಚೂರಿಗೆ ತೆರಳುತ್ತಿದ್ದ ಕಾನ್‌ಸ್ಟೇಬಲ್‌ ಶ್ರೀನಿವಾಸ ಎಂಬಾತ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ವಯೋವೃದ್ಧ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಕಂಡಕ್ಟರ್ ಕಂ ಡ್ರೈವರ್ ಸುರೇಶ ಬಾಬು ಮತ್ತು ಬಸ್ಸಿನಲ್ಲಿ ಇದ್ದ ಸುಮಾರು 40 ಕ್ಕೂ ಹೆಚ್ಚು ಜನ ಪ್ರಯಾಣಿಕರು ಬುದ್ದಿವಾದ ಹೇಳಿದ್ದಾರೆ. ಆದರೆ ಪ್ರಯಾಣಿಕರ ಮೇಲೆ ರೇಗಾಡಿದ ಕಾನ್‌ಸ್ಟೇಬಲ್‌, ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಬೆಂಕಿಯಿಂದ ಸುಟ್ಟು ಹಾಕಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಕಾನ್‌ಸ್ಟೇಬಲ್‌ ಶ್ರೀನಿವಾಸ ಬಸ್ಸಿನ ಮುಂಭಾಗದ ಗ್ಲಾಸ್‌ಗೆ ಕಲ್ಲಿನಿಂದ ಹೊಡೆಯುವುದನ್ನು ಸ್ಥಳೀಯರು ಮೊಬೈಲ್ ಮೂಲಕ‌ ವಿಡಿಯೋ ಚಿತ್ರೀಕರಿಸಿದ್ದಾರೆ.

ಹೊಸ ಬಸ್ ಆದ ಕಾರಣ ಬಸ್ಸಿನ ಮುಂಭಾಗದಲ್ಲಿ ಸಿಸಿ ಟಿವಿ ಅಳವಡಿಸಲಾಗಿತ್ತು. ತಡೆ ರಹಿತ ಬಸ್ ಆಗಿರುವುದರಿಂದ ನಿರ್ವಾಹಕ ಕಂ ಚಾಲಕ ಸುರೇಶ ಬಾಬು ಬಸ್ಸನ್ನು ಪೋಲಿಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ. ಈ ವೇಳೆ ತನ್ನ ವಿರುದ್ಧ ದೂರು ನೀಡಲು ಮುಂದಾದ ಸಾರಿಗೆ ನೌಕರ ಸುರೇಶ ಬಾಬು ಮತ್ತು ಪ್ರಯಾಣಿಕರನ್ನು ಪೊಲೀಸ್ ಠಾಣೆ ಎದುರುಗಡೆ ಬಸ್ಸಿನಲ್ಲಿ ಸುಡುತ್ತೇನೆ ಎಂದು ಕಾನ್‌ಸ್ಟೇಬಲ್‌ ಬೆದರಿಕೆ ಹಾಕಿದ್ದಾನೆ. ಇದಲ್ಲದೇ ಪೋಲಿಸರು ತಮ್ಮ ಸಿಬ್ಬಂದಿ ಎಂದು ಕಾನ್‌ಸ್ಟೇಬಲ್‌ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನು ತಿಳುವಳಿಕೆ ಮತ್ತು ಕಾನೂನು ವ್ಯವಸ್ಥೆ ಕಾಪಾಡುವ ಪೊಲೀಸರೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಸರ್ಕಾರಿ ಬಸ್ ಧ್ವಂಸಗೊಳಿಸಿರುವ ಬಗ್ಗೆ ಪೋಲಿಸರಿಗೆ ಬೆರೆ ಕಾನೂನು ಇದೆಯೇ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಪೋಲಿಸ್ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಯಾಣಿಕರು ಹಾಗೂ ಚಾಲಕ ಕಂ ನಿರ್ವಾಹಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ  ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಸಂಧಾನಕ್ಕೆ ಪ್ರಯತ್ನಿಸಿ ಇಲಾಖೆಯ ಗೌರವ ಕಾಪಾಡಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಕಾನ್‌ಸ್ಟೇಬಲ್‌ ಶ್ರೀನಿವಾಸ ಹಿಂದೆ ಕರ್ತವಲೋಪದಿಂದ 4 ಬಾರಿ ಅಮಾನತುಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News