ರಾಯಚೂರು: ಜೆಡಿಎಸ್ ಶಾಸಕಿ ವಿರುದ್ಧ ಭೀಮ್ ಆರ್ಮಿಯಿಂದ ದೂರು
ರಾಯಚೂರು: ದೇವದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದರೆ, ಶಾಸಕರ ಬೆಂಬಗಲಿರು ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು ರಾಯಚೂರಿನಲ್ಲಿ ಎಸ್‌ಪಿ ಪುಟ್ಟಮಾದಯ್ಯ ಅವರಿಗೆ ದೂರು ನೀಡಿದ್ದಾರೆ.
ಪಟ್ಟಣದಲ್ಲಿರುವ ಪ್ರವಾಸಿ ಮಂದಿರಕ್ಕೆ ಶಾಸಕರ ಕಾರ್ಯಾಲಯವೆಂದು ನಾಮಫಲಕ ಹಾಕಿದ್ದಾರೆಂದು ದೂರು ನೀಡಿ, ಸಾಮಾಜಿಕ ಜಾಲತಾಣದಲ್ಲಿ ಇದರ ಸಂಬಂಧ ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಪೋಸ್ಟ್ ಹಾಕಿದ್ದರು. ಅಲ್ಲದೆ ಈ ಹಿಂದೆ ಶಾಸಕರು ಪಾದಯಾತ್ರೆ ನಡೆಸಿದ ವೇಳೆ ಶಾಸಕಿ ಪುತ್ರಿ ಗೌರಿ ಜಿ.ನಾಯಕ್ ಇದ್ದ ಕಾರು ಅಮಾಯಕ ವ್ಯಕ್ತಿಗೆ ಢಿಕ್ಕೆ ಹೊಡೆದಿತ್ತು. ಈ ಬಗ್ಗೆ ಧ್ವನಿ ಎತ್ತಿ ಸಂತ್ರಸ್ಥರಿಗೆ ನ್ಯಾಯ ಒದಗಿಸಲಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ವಿಶ್ವನಾಥ ಬಲ್ಲಿದವ್ ಅವರಿಗೆ ಶಾಸಕಿ ಬೆಂಬಲಿಗರು ಫೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಪುತ್ರಿ ಗೌರಿ ಜಿ.ನಾಯಕ್ ಫೇಸ್‌ಬುಕ್ ನಕಲಿ ಖಾತೆ ಮೂಲಕ ವಿಶ್ವನಾಥ ಬಲ್ಲಿದವ್‌ಗೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ದಾಖಲೆ ಸಮೇತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೇಸ್ ದಾಖಲು ಮಾಡಿಕೊಳ್ಳುತ್ತಿಲ್ಲ. ಪರಿಶೀಲನೆ ನಡೆಸಿ ಜೀವ ಬೆದರಿಕೆ ಹಾಕಿದ ಶಾಸಕರ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸಬೇಕು. ಬೆದರಿಕೆ ಹಾಕುವ ನಕಲಿ ಫೇಸ್‌ಬುಕ್ ಖಾತೆಗಳನ್ನು ಪರಿಶೀಲಿಸಿ ಕ್ರಮಜರುಗಿಸಬೇಕೆಂದು ಭೀಮ್ ಆರ್ಮಿ ನಿಯೋಗ ಒತ್ತಾಯಿಸಿದೆ.
ಈ ವೇಳೆ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್, ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ್, ತಾಲೂಕು ಪ್ರಧಾನ ಕಾರ್ಯದರ್ಶಿ ಮೋಹನ್ ಬಲ್ಲಿದವ್, ಬಾಬಾ ಖಾನ್ ಸೇರಿದಂತೆ ಇತರರು ಸ್ಥಳದಲ್ಲಿದ್ದರು.