ರಾಯಚೂರು: ಬೀದಿ ಬದಿ ವ್ಯಾಪಾರಸ್ಥರಿಗೆ ಪರಿಹಾರ ಕಲ್ಪಿಸಲು ಒತ್ತಾಯ
ರಾಯಚೂರು: ಬೀದಿ ಬದಿಯ ವ್ಯಾಪಾರಿಗಳ ತೆರವು ಕಾರ್ಯಾಚರಣೆಯಿಂದ ಜೀವನೋಪಾಯಕ್ಕೆ ಸಮಸ್ಯೆಯಾದವರಿಗೆ ರಕ್ಷಣೆ ನೀಡಬೇಕು ಹಾಗೂ ಪೊಲೀಸರ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿ ಬೀದಿ ಬದಿಯ ವ್ಯಾಪಾರಸ್ಥರು ಸಿಂಧನೂರು ಡಿವೈಎಸ್ಪಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಿಂಧನೂರು ನಗರದ ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ಮಾರ್ಗದ ರಸ್ತೆ ಸೇರಿದಂತೆ ಇನ್ನಿತರೆ ಸರ್ಕಾರಿ ಜಾಗಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದ ಸಾವಿರಾರು ವ್ಯಾಪಾರಸ್ಥರನ್ನು 2025 ಫೆಬ್ರವರಿ 04ರಂದು ಏಕಾಏಕಿ ತೆರವುಗೊಳಿಸಿದ್ದರಿಂದ ಅವರನ್ನು ಅವಲಂಬಿಸಿದ ಸಾವಿರಾರು ಕುಟುಂಬಗಳು ಕಂಗಾಲಾಗಿವೆ. ನಗರದಲ್ಲಿ ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅಷ್ಟು ಕುಟುಂಬಗಳ ಮೇಲೆ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಿದಂತಾಗಿದೆ ಎಂದು ದೂರಿದರು.
ಬೀದಿ ಬದಿ ವ್ಯಾಪಾರ ಮಾಡಿ, ಅದರಿಂದ ಬಂದ ಅಲ್ಪಸ್ವಲ್ಪ ಆದಾಯದಿಂದ ಉಪ ಜೀವನ ನಡೆಸುತ್ತಿರುವ ಕುಟುಂಬಗಳು ತೆರವು ಕಾರ್ಯಾಚರಣೆಯಿಂದ ಉದ್ಯೋಗವನ್ನು ಕಳೆದುಕೊಂಡು, ಅಕ್ಷರಶಃ ಬೀದಿಗೆ ಬಿದ್ದಿವೆ. ನಗರದ ಪ್ರಮುಖ ರಸ್ತೆ ಬದಿಗಳಲ್ಲಿನ ಬೀದಿ ವ್ಯಾಪಾರಿಗಳು ಮುನಿಸಿಪಲ್, ಪಿಡಬ್ಲ್ಯುಡಿ, ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಅಧಿಕಾರಿಗಳಿಂದ ಕಿರುಕುಳದ ನಡುವೆಯೂ ಬಡವರಿಗೆ, ಮಧ್ಯಮ ವರ್ಗದವರಿಗೆ ಉತ್ತಮ ಸರಕು-ಸೇವೆಗಳನ್ನು ಒದಗಿಸುತ್ತಾ ಬಂದಿದ್ದರೂ, ಇತ್ತೀಚೆಗೆ ಜಿಲ್ಲಾ, ತಾಲೂಕು ಆಡಳಿತ ಹಾಗೂ ನಗರಸಭೆಯಿಂದ ತೆರವು ಕಾರ್ಯಾಚರಣೆ ನಡೆಸಿ, ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿರುವುದು ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ಬೀದಿ ವ್ಯಾಪಾರದ ನಿಯಂತ್ರಣ ಕಾಯ್ದೆ (2014) ಯನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ಯಾವುದೇ ಕಾರಣಕ್ಕೂ ಪೊಲೀಸ್ ಕಿರುಕುಳ ನೀಡಬಾರದು ಎಂದು ಸಂಚಾಲಕರಾದ ನಾಗರಾಜ ಪೂಜಾರ್ ಆಗ್ರಹಿಸಿದರು.
ಬೀದಿ ವ್ಯಾಪಾರಿಗಳಿಗೆ ಅವರ ಹಕ್ಕಾದ ಬೀದಿ ವ್ಯಾಪಾರ ಮಾಡಲು ಅಧಿಕಾರಿಗಳು ಅಡ್ಡಿಯಾಗಿರುವುದು ಕಾಯ್ದೆಯ ವಿರೋಧಿ ಕ್ರಮವಾಗಿದೆ. ಇಲ್ಲಿನ ಬೀದಿ ವ್ಯಾಪಾರಿಗಳಿಗೆ ಸರ್ಕಾರವೇ ಗುರುತಿನ ಚೀಟಿ ನೀಡಿ, ಅವರಿಂದ ಲಕ್ಷಾಂತರ ರೂಪಾಯಿ ತೆರಿಗೆ ವಸೂಲಿ ಮಾಡಿ, ಇಂದು ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡದಂತೆ ಅಡ್ಡಿಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ.
ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು/ಸ್ಥಳಾಂತರಿಸಲು ನೋಟಿಸ್ ನೀಡುವುದು ಸಿಂಧನೂರು ಸಿಎಂಸಿ ಹಾಗೂ ಪಟ್ಟಣ ವ್ಯಾಪಾರ ಸಮಿತಿಗೆ ಮಾತ್ರ ಅಧಿಕಾರವಿದೆ. ಬೀದಿ ವ್ಯಾಪಾರಿಗಳ ಕಾನೂನಿನ ಕಲಂ 18ರ ಪ್ರಕಾರ ಆಯಾ ನಗರಸಭೆಯಲ್ಲಿನ ಪಟ್ಟಣ ವ್ಯಾಪಾರ ಸಮಿತಿ ಈ ಕುರಿತು ಕ್ರಮ ತೆಗೆದುಕೊಳ್ಳಬಹುದೇ ಹೊರತು, ಬೇರೆ ಯಾವ ಅಧಿಕಾರಿಗಳೂ ಅವರನ್ನು ಸ್ಥಳಾಂತರಿಸುವಂತಿಲ್ಲ. ಹಾಗಾಗಿ ಲೋಕೋಪಯೋಗಿ ಇಲಾಖೆಯಿಂದ ಬೀದಿ ವ್ಯಾಪಾರಸ್ಥರಿಗೆ ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಾಗರಾಜ ಪೂಜಾರ್ ಸಂಚಾಲಕರು, ಟಿ. ಹುಸೇನಸಾಬ, ಮಂಜುನಾಥ ಗಾಂಧಿನಗರ, ವಾಸಿಮ್, ಬಸವರಾಜ ಬಾದರ್ಲಿ, ಶಾಮೀದ ನೂರಾರು ಸಂಖ್ಯೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಇದ್ದರು.