ರಾಯಚೂರು: ಬೆಳೆ ಹಾನಿ ಪರಿಹಾರ ನೀಡಲು ಒತ್ತಾಯಿಸಿ ರೈತರ ಧರಣಿ
ರಾಯಚೂರು: ಜಿಲ್ಲೆಯಲ್ಲಿ ಸುರಿದ ಸತತ ಮಳೆಗೆ ರೈತರ ವಿವಿಧ ಬೆಳೆ, ತರಕಾರಿ, ತೋಟಗಾರಿಕೆ ಬೆಳೆ ಹಾನಿಯಾಗಿದ್ದು ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಮುಖಂಡರು ಧರಣಿ ನಡೆಸಿದರು.
ರಾಯಚೂರಿನ ಎಪಿಎಂಸಿಯಿಂದ ಗಂಜ್ ರಸ್ತೆ ಮಾರ್ಗವಾಗಿ ಹಳೆಯ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಹತ್ತಿ,ಭತ್ತ, ಸೂರ್ಯಕಾಂತಿ, ಸಜ್ಜೆ, ಈರುಳ್ಳಿ, ತೊಗರಿ, ನವಣೆ, ಈರುಳ್ಳಿ ಹಾಗೂ ಇತರೆ ತರಕಾರಿ ಬೆಳೆಗಳು ಹಾನಿಯಾಗಿದ್ದು ಇದ್ದಬದ್ದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಕೂಡಲೇ ಸರಕಾರ ಬೆಳೆ ಹಾನಿ ಪರಿಹಾರ ನೀಡಬೇಕು. ಮಳೆಯಿಂದ ಹಾನಿಯಾದ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ರೈತರು ಪಡೆದ ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಕಂಪೆನಿಗಳು ಪರಿಹಾರ ಮೊತ್ತ ನೀಡದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಕ್ತ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಬೆಲೆ ಕಡಿಮೆಯಾದಾಗ ಎಂಎಸ್ ಪಿ ದರ ನಿಗದಿಪಡಿಸಿ ಖರೀದಿ ಕೇಂದ್ರಗಳು ತೆರೆಯಬೇಕು. ಹತ್ತಿ ಮಾರಾಟಕ್ಕೆ ಸಿಸಿಐ ಶುರು ಮಾಡಬೇಕು, ವ್ಹೇ ಬ್ರಿಜ್ ಗಳಲ್ಲಿ ಅಳತೆ ಹಾಗೂ ತೂಕದಲ್ಲಿ ಮೋಸ ಮಾಡಲಾಗುತ್ತಿದ್ದು ವ್ಹೇ ಬ್ರಿಜ್ ಮಾಲಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಲಕ್ಷ್ಮಣಗೌಡ ಕಡಗಂದೊಡ್ಡಿ, ಅಬ್ದುಲ್ ಮಜೀದ್, ನರಸಪ್ಪ ಹೊಕ್ರಾಣಿ, ಮಲ್ಲಿಕಾರ್ಜುನ, ಖಾಸಿಂ ಮಮದಾಪುರ ಮತ್ತಿತರರು ಭಾಗವಹಿಸಿದ್ದರು.