×
Ad

ರಾಯಚೂರು | ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಸುಧಾರಿಸಿ : ರಶ್ಮಿ ಮಹೇಶ್ ಸೂಚನೆ

Update: 2025-11-18 19:10 IST

ರಾಯಚೂರು : ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ವಿಜಯನಗರ, ಕಲಬುರಗಿ, ಬೀದರ್‌ ಮತ್ತು ಬಳ್ಳಾರಿ ಜಿಲ್ಲೆಗಳ ತಾಲೂಕುವಾರು ಸಂಪನ್ಮೂಲ ಶಿಕ್ಷಕರಿಗಾಗಿ ಹಾಗೂ ಧಾರವಾಡ ವಿಭಾಗದ  ಸಂಪನ್ಮೂಲ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಗಾರವು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪೂರ್ಣಿಮಾ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ನಡೆಯಿತು.

ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮವಹಿಸಬೇಕು. ಇದು ಈ ಕಾರ್ಯಗಾರದ ಮುಖ್ಯ ಗುರಿ ಮತ್ತು ಉದ್ದೇಶವಾಗಿದೆ ಎಂದರು.

ಫಲಿತಾಂಶ ಸುಧಾರಣೆಯ ವಿಷಯವನ್ನೇ ಈಗ ಶಿಕ್ಷಕರು ಪ್ರಥಮ ಆದ್ಯತೆ ಎಂದು ಭಾವಿಸಿ ಶಾಲಾ ಹಂತದಲ್ಲಿ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಚಯಿಸಬೇಕು. ಪಠ್ಯ ಆಧಾರಿತ ಮೌಲ್ಯಮಾಪನದ ಬಗ್ಗೆ ಅರಿಯಬೇಕು. ಜನವರಿ ಮೊದಲ ವಾರ, ಕೊನೆಯ ವಾರ ಮತ್ತು ಫೆಬ್ರುವರಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಕೈಗೊಳ್ಳಲು ಇಲಾಖೆಯು ತೀರ್ಮಾನಿಸಿ ವೇಳಾಪಟ್ಟಿ ನೀಡಿದೆ. ಇದನ್ನು ವಿದ್ಯಾರ್ಥಿಗಳಿಗೆ ಮತ್ತು ಪಾಲಕ ಪೋಷಕರಿಗೆ ತಿಳಿಸಬೇಕು. ಈ ಭಾಗದ ಫಲಿತಾಂಶ ಸುಧಾರಣೆ ಮಾಡಬೇಕು. ಜಿಲ್ಲಾ ಹಂತದ ಮತ್ತು ತಾಲೂಕು ಹಂತದ ಅಧಿಕಾರಿಗಳು ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ನಿರಂತರ ಫಾಲೋ ಅಪ್ ಮಾಡಿ ನೀಡಿರುವ ಚೆಕ್ ಲಿಸ್ಟ್ ಗಳ ಪ್ರಕಾರ ಫಲಿತಾಂಶಗಳನ್ನು ವಿಶ್ಲೇಷಿಸುವ ಕಾರ್ಯಪಡೆ ರಚನೆ ಮಾಡಿ ನಮಗೆ ವರದಿ ನೀಡಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಾದ ಪಾಂಡ್ವೆ ರಾಹುಲ್ ತುಕಾರಾಮ್‌ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆಯು ನೀಡಿದ ಅಂಶಗಳನ್ನು ಎಲ್ಲಾ ಹಂತದ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಇಲಾಖೆಯ ಕಾರ್ಯಯೋಜನೆಗೆ ಒಳಪಡಬೇಕು. ಈ ಕಾರ್ಯಾಗಾರದಲ್ಲಿ ನೀಡುವ ಸಂಪನ್ಮೂಲಗಳ ಪ್ರಕಾರ ಪ್ರತಿವಾರ ಮಾಡುವ ಹಂತ-1, 2, 3, 4 ಗಳ ಅನುಸಾರ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡಬೇಕು. ಈ ಬಾರಿ ನೀಡಿದ ಬ್ಲೂ ಪ್ರಿಂಟ್ ಪ್ರಕಾರ ನವೆಂಬರ್, ಡಿಸೆಂಬರ್-ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪರಿಣಾಮಕಾರಿಯಾಗಿ ವಿಷಯ ವಸ್ತು ಪುನರಾವರ್ತನೆಗೊಳ್ಳಬೇಕು ಎಂದರು.

ರಾಯಚೂರಿನ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಮಾತನಾಡಿ, ಈ ಬಾರಿ ರಾಯಚೂರು ಜಿಲ್ಲೆಯ ಎಸೆಸೆಲ್ಸಿ ಫಲಿತಾಂಶವು ಕಳೆದ ಬಾರಿಗಿಂತ ಉತ್ತಮಪಡಿಸಬೇಕು. ಜೊತೆಗೆ ಇಲಾಖೆಯು ನೀಡಿದ ಎಲ್ಲಾ ಅಂಶಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಬೇಕು. ಕ್ರಿಯಾಯೋಜನೆಯಂತೆ ಕಾರ್ಯ ನಿರ್ವಹಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಪಾಲಕ ಪೋಷಕರ ಸಭೆ ಮಾಡಿ ಅವರೊಂದಿಗೆ ಚರ್ಚಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಬೇಕು ಎಂದು ಸೂಚನೆ ನೀಡಿದರು.

ಕಾರ್ಯಾಗಾರದಲ್ಲಿ ನಾಲ್ಕು ಜಿಲ್ಲೆಗಳ ಆರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ 12 ವಾರಗಳ ಕಾರ್ಯಯೋಜನೆ ಸಿದ್ದಪಡಿಸಿದರು. 

ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಪ್ರಕಾಶ್ ನಿಟ್ಟಾಲಿ, ರಾಯಚೂರಿನ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಈಶ್ವರ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಕೆ.ಎಸ್.ಈ.ಎ.ಬಿ ಮತ್ತು ಡಿ.ಎಸ್.ಈ.ಆರ್.ಟಿ ಬೆಂಗಳೂರು ನಿರ್ದೇಶಕರಾದ  ಗೋಪಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News