ರಾಯಚೂರು | ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಮಿಕ ಅಧಿಕಾರಿ
Update: 2025-08-18 23:22 IST
ರಾಯಚೂರು: ಪೆಟ್ರೋಲ್ ಬಂಕ್ ಮಾಲಕನಿಂದ 30 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಕಾರ್ಮಿಕ ಇಲಾಖೆಯ ಲೇಬರ್ ಇನ್ಸ್‌ಪೆಕ್ಟರ್ ಅಬ್ದುಲ್ ಗನಿ ಅಲಿಯಾಸ್ ಮಹಮ್ಮದ್ ಉಮರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಬ್ದುಲ್ ಗನಿ ಅವರಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ಹಾಗೂ ಇನ್ನೋರ್ವರ ವಿರುದ್ಧವೂ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆಟ್ರೋಲ್ ಬಂಕ್‌ವೊಂದರ ಮಾಲಕ ನಾಗೀರೆಡ್ಡಿ ಅವರಿಗೆ ಕೆಲಸ ಮಾಡಿಕೊಡಲು ಅಬ್ದುಲ್ ಗನಿ 30 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ನಾಗೀರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಲಂಚ ಪಡೆಯುವ ವೇಳೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ನಡೆಸಿದ ತಂಡದಲ್ಲಿ ಲೋಕಾಯುಕ್ತ ಎಸ್‍ಪಿ ಸತೀಶ ಚಿಟಗುಪ್ಪಿ, ಇನ್ಸ್‌ಪೆಕ್ಟರ್‌ಗಳಾದ ಕಾಳಪ್ಪ ಬಡಿಗೇರ್, ರವಿಪುರುಷೋತ್ತಮ್ ಸೇರಿದಂತೆ ಸಿಬ್ಬಂದಿಗಳಿದ್ದರು.