ರಾಯಚೂರು | ಉದ್ಯಮಗಳು ಬೆಳೆಯಲು ಹೊಸ ತಂತ್ರಜ್ಞಾನ, ಕೌಶಲ್ಯ ಅಗತ್ಯ : ಡಾ.ಮಲ್ಲಿಕಾರ್ಜುನ ಎಸ್.ಅಯ್ಯನಗೌಡರ್
ರಾಯಚೂರು : ರಾಯಚೂರು ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಹೊಸ ಉದ್ಯಮಿಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ರಾಯಚೂರು ಜಿಲ್ಲಾ ಕೈಗಾರಿಕಾ ಕೇಂದ್ರ, ರಾಯಚೂರು ಜಿಲ್ಲಾ ಕೃಷಿ ತಾಂತ್ರಿಕ ಮಹಾವಿದ್ಯಾಲಯ ಇದರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಇನ್‌ಕ್ಯೂಬೇಶನ್ ಕಾರ್ಯಗಾರ ನಡೆಯಿತು.
ನಗರದ ಕೃಷಿ ತಾಂತ್ರಿಕ ಮಹಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಗಾರವನ್ನು ಜಿಲ್ಲಾ ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಕೃಷಿ ತಾಂತ್ರಿಕರಾದ ಡೀನ್ ಡಾ.ಮಲ್ಲಿಕಾರ್ಜುನ ಎಸ್.ಆಯ್ಯನಗೌಡರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಮಲ್ಲಿಕಾರ್ಜುನ ಎಸ್.ಆಯ್ಯನಗೌಡರ್, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮಗಳು ಉಳಿದು ಬೆಳೆಯಲು ಹೊಸ ತಂತ್ರಜ್ಞಾನ ಮತ್ತು ಕೌಶಲ ಅತ್ಯಗತ್ಯ. ಜೊತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ.ಸತೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತಾನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರ‍್ಯಾಂಪ್ (ಆರ್‌ಎಎಂಪಿ) ಯೋಜನೆಯು ದೇಶದ ಎಂ.ಎಸ್.ಎ.ಇ. ಗಳಿಗೆ ಹೊಸ ಚೈತನ್ಯ ನೀಡಲಿದ್ದು, ಈ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ಮತ್ತು ಮಾರುಕಟ್ಟೆ ಅವಕಾಶಗಳನ್ನು ಜಿಲ್ಲೆಯ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು. ಇನ್ ಕ್ಯೂಬೇಶನ್ ಕಾರ್ಯಕ್ರಮಗಳು ಹೊಸ ಉದ್ಯಮದಾರರ ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದು ಸಲಹೆ ಮಾಡಿದರು.
ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಬಿಸನೆಸ್ ಇನ್ ಕ್ಯೋಬೇಶನ್ ವಿಭಾಗದ ಮುಖ್ಯಸ್ಥರಾದ ಡಾ.ಬಸಂತಿ ಘಂಟಿ ಮಾತಾನಾಡಿ, ಒಂದು ಯಶಸ್ವಿ ಉದ್ಯಮಕ್ಕೆ ಕೇವಲ ಹಣ ಹೂಡಿಕೆ ಮುಖ್ಯವಲ್ಲ, ಬದಲಾಗಿ ಹೊಸ ಅವಿಷ್ಕಾರ, ಸರಿಯಾದ ಮಾರ್ಗದರ್ಶನ ಮತ್ತು ವ್ಯವಹಾರದ ಜ್ಞಾನವು ಅಷ್ಟೇ ಮುಖ್ಯ. ಈ ಎಲ್ಲಾ ಅಂಶಗಳು ಒಂದೇ ಸೂರಿನಡಿ ಇನ್ ಕ್ಯೂಬೇಶನ್ ಕೇಂದ್ರಗಳು ಒದಗಿಸುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಲೀಡ್ ಡಿಸ್ಟ್ರೀಕ್ಟ್ ವ್ಯವಸ್ಥಾಪಕರಾದ ಪಾಂಡಪ್ಪ ಲಮಾಣಿ ಮಾತಾನಾಡಿ, ಬ್ಯಾಂಕಿನಿಂದ ಸಾಲ ಸೌಲಭ್ಯ, ಮುದ್ರಾ ಯೋಜನೆ, ಸಿ.ಜಿ.ಟಿ.ಎಂ.ಎಸ್.ಸಿ. ಯೋಜನೆಯಡಿ ಕೈಗಾರಿಕಾ ಸ್ಥಾಪನೆಗಾಗಿ ಸಾಲ ಪಡೆಯುವ ಬಗ್ಗೆ ಸುಧೀರ್ಘವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ರಾಜಕುಮಾರ್ ಪಾಟೇಲ್ ಮಾತಾನಾಡಿ, ಗ್ರಾಮೀಣ ಯುವಕರು ಇಂತಹ ಕಾರ್ಯಾಗಾರಗಳ ಪ್ರಯೋಜನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದರ ಜೊತೆಗೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಯಶಸ್ವಿ ಉದ್ಯಮಿಗಳಾದ ಹರಿಚೈತನ್ಯ ರಾಯಚೂರು ಮಾತನಾಡಿ, ತಾವು ಕೈಗಾರಿಕೆ ಪ್ರಾರಂಭಿಸುವಾಗ ಬಂದ ಸಮಸ್ಯೆಗಳು ಹಾಗೂ ನಂತರ ಯಶಸ್ವಿ ಆಗಿರುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದ ವೇದಿಕೆಯಲ್ಲಿ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ, ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಪಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಶರಣಗೌಡ ಹಿರೇಗೌಡರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ಉಪ ನಿರ್ದೇಶಕರಾದ ಲಕ್ಷ್ಮೀಕಾಂತ್ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.