ರಾಯಚೂರು | ಯರಗೇರಾ ತಾಲೂಕು ರಚನೆಗೆ ರಾಜ್ಯ ಸರಕಾರದಿಂದ ಸಕರಾತ್ಮಕ ಸ್ಪಂದನೆ: ನಿಜಾಮುದ್ದೀನ್
ರಾಯಚೂರು : ಯರಗೇರಾ ಹೋಬಳಿ ತಾಲೂಕು ಕೇಂದ್ರ ಘೋಷಣೆ ಮಾಡುವಂತೆ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಯರಗೇರಾ ತಾಲೂಕು ರಚನೆ ಹೋರಾಟ ಸಮತಿ ಅಧ್ಯಕ್ಷ ನಿಜಾಮುದ್ದೀನ್ ಅವರು ಹೇಳಿದರು.
ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸ್ವಾತಂತ್ರ ಪೂರ್ವದ ನಿಜಾಮರ ಸರ್ಕಾರ ಆಡಳಿತ ಅವಧಿಯಲ್ಲಿ ಯರಗೇರಾ ತಾಲೂಕು ಕೇಂದ್ರ ಎಂದು ಘೋಷಣೆಯಾದದ್ದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಹೈದ್ರಾಬಾದ್ ನಿಜಾಮರ ಸರಕಾರದ ಇಲಾಖೆಯಲ್ಲಿ ದಾಖಲೆ ಇದೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯರಗೇರಾ ಹೋಬಳಿ ಕೇಂದ್ರ ಘೋಷಣೆ ಮಾಡುವಂತೆ ಅನೇಕ ವರ್ಷಗಳಿಂದ ಬೇಡಿಕೆ ಇದ್ದು, ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರ ತಲುಪುವುದಕ್ಕೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶ ಅಭಿವೃದ್ಧಿ ಆಗಬೇಕಾದರೆ ಯರಗೇರಾವನ್ನು ನೂತನ ತಾಲ್ಲೂಕು ಕೇಂದ್ರವೆಂದು ಘೋಷಿಸುವ ಅಗತ್ಯವಿದೆ ಎಂದರು.
ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಾಲೂಕು ಕೇಂದ್ರ ಮಾಡುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಲಾಯಿತು. ಹೋರಾಟ ಬಳಿಕ ತಾಲೂಕು ಕೇಂದ್ರ ಹೋರಾಟ ಸಮತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರು ಕೃಷ್ಣ ಬೈರೇಗೌಡ ಅವರನ್ನು ಭೇಟಿ ನಂತರ ಮನವಿ ಸ್ವೀಕರಿಸಿದ ಅವರು ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ತಾಲೂಕುಗಳ ರಚನೆಗೆ ಈಗಾಗಲೇ ರಾಜ್ಯ ಸರಕಾರ ಬಳಿ ಪ್ರಸ್ತಾಪ ಇದ್ದು, ತಾಲೂಕು ರಚನೆ ಸಂದರ್ಭದಲ್ಲಿ ಯರಗೇರಾವನ್ನು ಕೇಂದ್ರ ಎಂದು ಘೋಷಣೆ ಮಾಡಬೇಕು. ನಿರ್ಲಕ್ಷ ವಹಿಸಿದರೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸವರಾಜ ಹೂಗಾರ್, ಕೆ.ಲಕ್ಷ್ಮೀಪತಿ, ಎಂ.ಡಿ ರಫಿ, ಮೆಹಬೂಬ್ ಪಾಟೇಲ್ ಇದ್ದರು