ರಾಯಚೂರು: ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಗರ್ಭಿಣಿ ಮೃತ್ಯು
Update: 2025-09-15 16:12 IST
ರಾಯಚೂರು: ಹೆರಿಗೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಗರ್ಭಿಣಿ ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತರನ್ನು ಉವಮ್ಮ ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳಿಂದ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಉವಮ್ಮರನ್ನು ಮೊದಲು ಸ್ಥಳೀಯ ಲಿಂಗಸೂಗೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.
ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಬೆಂಗಳೂರಿಗೆ ಸಾಗಿಸುವ ಮಾರ್ಗ ಮಧ್ಯೆ ಉವಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.