×
Ad

ರಾಯಚೂರು | ಸಂವಿಧಾನ ದಿನಾಚರಣೆ ಕುರಿತು ಪೂರ್ವಭಾವಿ ಸಭೆ

Update: 2025-11-21 21:41 IST

ರಾಯಚೂರು : ನವೆಂಬರ್ 26ರಂದು ರಾಯಚೂರು ಜಿಲ್ಲಾ ಮತ್ತು ಸಿಂಧನೂರ್‌, ಮಾನವಿ, ಲಿಂಗಸಗೂರು, ಸಿರವಾರ, ಅರಕೇರಿ, ದೇವದುರ್ಗ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನವೆಂಬರ್ 21ರಂದು ಸಂಜೆ, ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಶಿವಾನಂದ್‌, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ಸಂವಿಧಾನ ಕುರಿತ ಪುಸ್ತಕಗಳನ್ನು ಪೂರೈಸಲಾಗುತ್ತಿದೆ. ನವೆಂಬರ್ 26ರಂದು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಾಷ್ಟ್ರಧ್ವಜಗಳ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳಿಂದ ಸಂವಿಧಾನ ಪುಸ್ತಕಗಳ ಪ್ರದರ್ಶನ ಮತ್ತು ಜಾಥಾಗಳನ್ನು ಹಮ್ಮಿಕೊಳ್ಳಬೇಕು. ಜಾಥಾದಲ್ಲಿ ಸಂವಿಧಾನದ ಕುರಿತು ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಮುಖ ನುಡಿಮುತ್ತುಗಳ ಪ್ಲೇಕಾರ್ಡಗಳನ್ನು ಪ್ರದರ್ಶಿಸಬೇಕು. ಜಿಲ್ಲಾ ಹಾಗೂ ಎಲ್ಲ ತಾಲೂಕು ಕೇಂದ್ರದಲ್ಲಿ ಕಾರ್ಯಕ್ರಮ ರೂಪಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ಉಪನ್ಯಾಸ ಏರ್ಪಡಿಸಬೇಕು ಎಂದು ಸೂಚನೆ ನೀಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಣೆಗೆ ಕ್ರಮ ವಹಿಸಬೇಕು. ಈ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಕಡ್ಡಾಯವಾಗಿ ಲಘು ಉಪಹಾರದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.  

ರಾಯಚೂರು ಜಿಲ್ಲಾ ಕೇಂದ್ರದಲ್ಲಿ ನವೆಂಬರ್ 26ರಂದು ಸಂವಿಧಾನ ಜಾಗೃತಿ ಜಾಥಾವನ್ನು ವಿಶೇಷವಾಗಿ ನಡೆಸಲು ನಿರ್ಣಯಿಸಲಾಯಿತು. ಅಂದು ಬೆಳಗ್ಗೆ 9 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭವಾಗಿ ಬಸ್ ನಿಲ್ದಾಣದ ಮಾರ್ಗ ಬಳಸಿ ತೀನ್ ಕಂದಿಲ್ ವೃತ್ತ, ಚಟ್ಟಿಭಾವಿ ಚೌಕ್, ಸರ್ದಾರ್ ವಲ್ಲಭಬಾಯಿ ಪಟೇಲ್ ರಸ್ತೆ, ಗಾಂಧಿ ಚೌಕ್, ಹಳೆಯ ಡಿ.ಸಿ ಆಫೀಸ್ ರಸ್ತೆ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ರಂಗಮಂದಿರದವರೆಗೆ ಜಾಥಾ ನಡೆಸಲು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.

ಸಂವಿಧಾನ ದಿನಾಚರಣೆಯ ವೇದಿಕೆಯ ಕಾರ್ಯಕ್ರಮವನ್ನು ಜಿಲ್ಲಾ ರಂಗಮಂದಿರದಲ್ಲಿ ನಡೆಸಲು ನಿರ್ಣಯಿಸಲಾಯಿತು. ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನ ಜಾಗೃತಿಯ ಉಪನ್ಯಾಸ ಏರ್ಪಡಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ರಾಜ್ಯ ಸರಕಾರ ವಿಶಿಷ್ಟವಾಗಿ ಆಚರಿಸುತ್ತಿರುವುದು ಸಂತಷದ ಸಂಗತಿಯಾಗಿದೆ. ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಂವಿಧಾನ ಸಂರಕ್ಷಣಾ ಪಡೆಯ ಕೆ.ಇ.ಕುಮಾರ್‌, ಮುಖಂಡರಾದ ಎಂ.ಆರ್.ಭೇರಿ, ವಿಶ್ವನಾಥ್‌, ಬಸವರಾಜ ಸಾಸಲಮರಿ ಹಾಗೂ ಇತರರು ಉಪಸ್ಥಿತರಿದ್ದರು.  

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜಾನ್‌ವೆಸ್ಲಿ, ಗಿರಿಯಪ್ಪ ನೆಲಹಾಳ, ಕರುಣಕುಮಾರ್‌ ಕಟ್ಟಿಮನಿ, ಪಿ.ಪ್ರಭಾಕರ, ಪರಶುರಾಮ ಅರೋಲಿ, ಪ್ರಾಣೇಶ ಮಂಚಾಳ, ರವಿ ದಾದಸ, ಎಂ.ವೆಂಕಟೇಶ ಅರೋಲಿಕರ, ನಿವೇದಿತಾ ಎನ್, ಜಿಲ್ಲಾ ಪೊಲೀಸ್ ಇಲಾಖೆಯ ಶಾಂತವೀರ್ ಈ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ, ಪುರಸಭೆ ತಹಶೀಲ್ದಾರ್‌ ಎಂ.ಡಿ.ಆಸೀಫ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಪ್ಪ ಉಪ್ಪಾಳ, ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಆಹಾರ ಇಲಾಖೆಯ ಲೆಕ್ಕಾಧಿಕ್ಷಕರಾದ ಸಿದ್ದಪ್ಪ, ಮಹಾನಗರ ಪಾಲಿಕೆಯ ವಿನೋದಕುಮಾರ್‌ ಎಂ., ರಾಯಚೂರು ಸಿಟಿ ಕಾರ್ಪೋರೇಶನ್ ಅಧಿಕಾರಿ ಜೈಪಾಲ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಬಿ ಎನ್ ಕುಮಾರಸ್ವಾಮಿ, ಕಾರ್ಮಿಕ ಇಲಾಖೆಯ ಗಂಗಮ್ಮ, ವಿಕಲಚೇತನರ ಇಲಾಖೆಯ ವಿನಯಕುಮಾರ್‌, ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News