×
Ad

ರಾಯಚೂರಿನ ರತ್ನಮ್ಮ ಬಿ.ಎಸ್.ದೇಸಾಯಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

Update: 2025-10-30 23:22 IST

ರತ್ನಮ್ಮ ಬಿ.ಎಸ್.ದೇಸಾಯಿ

ರಾಯಚೂರು : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ರತ್ನಮ್ಮ ಬಿ.ಎಸ್.ದೇಸಾಯಿ ಅವರು "ರಂಗಭೂಮಿ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

74 ವರ್ಷದ ಹಿರಿಯ ಕಲಾವಿದೆ ರತ್ನಮ್ಮ ಬಿ.ಎಸ್. ದೇಸಾಯಿ ಅವರು ಸುದೀರ್ಘ 50 ವರ್ಷಗಳಿಂದ ರಂಗಭೂಮಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಹಲವು ದಶಕಗಳಿಂದ ರಾಜ್ಯದ ಅನೇಕ ಪ್ರತಿಷ್ಠಿತ ನಾಟಕ ಕಂಪನಿಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ರತ್ನಮ್ಮ ಅವರು, ತಮ್ಮ ಪ್ರತಿಭೆಯಿಂದ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. 

50 ವರ್ಷಗಳ ಸುದೀರ್ಘವಾಗಿ ವೃತ್ತಿರಂಗಭೂಮಿ ನಾಟಕ ಕಂಪನಿಗಳಲ್ಲಿ ಹಾಸ್ಯ ಪಾತ್ರಗಳು ನಾಯಕಿ ಪಾತ್ರಗಳ ಮೂಲಕ ಹೆಸರು ಮಾಡಿದ್ದಾರೆ. ದುತ್ತರಗಿ ನಾಟಕ ಕಂಪನಿ, ಮಾಲತಿ ಸುಧೀರ್ ನಾಟಕ ಕಂಪನಿ, ಗುಬ್ಬಿ ವೀರಣ್ಣ ನಾಟಕ ಕಂಪನಿ, ಗುಮ್ಮಗೇರಿ ನಾಟಕ ಕಂಪನಿ ಹಲವಾರು ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಬದುಕಿಗಾಗಿ ಶ್ರಮವನ್ನೇ ನಂಬಿಕೊಂಡು ವೃತ್ತಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಈ ಕಲಾವಿದೆ, ಈಗ ಅನಾರೋಗ್ಯದಿಂದ ಬಳಲುತ್ತಾ ಕಾಲು ನೋವಿನ ಕಾರಣದಿಂದಾಗಿ ಕಲೆಯಿಂದ ಹಿಂದೆ ಉಳಿದಿದ್ದಾರೆ. ರತ್ನಮ್ಮ ಅವರ ಗಂಡ ಉಟಕನೂರು ಗ್ರಾಮದ ಬಸವಲಿಂಗಪ್ಪ ದೇಸಾಯಿ ಕೂಡಾ ರಂಗಭೂಮಿಯ ಕಲಾವಿದರಾಗಿದ್ದು, ಪ್ರಸ್ತುತ ಅವರು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಡೀ ದೇಸಾಯಿ ಕುಟುಂಬವೇ ಕಲೆಗೆ ಸಮರ್ಪಿತವಾಗಿದ್ದು, ಕಳೆದ 30 ವರ್ಷಗಳಿಂದ ಸಿರವಾರದಲ್ಲಿ ವಾಸಿಸುತ್ತಿದ್ದಾರೆ.

ರತ್ನಮ್ಮ ಅವರ ಕಲಾ ಸೇವೆಗೆ ಅನೇಕ ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿ ನೀಡಿವೆ ಹಾಗೂ ಜಿಲ್ಲೆಯವರೇ ಆಗಿದ್ದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರು 2006ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ನೀಡಲಾಗುವ ಮಾಸಾಶನವನ್ನು ಪಡೆಯುತ್ತಿರುವ ರತ್ನಮ್ಮ ಅವರು, ಯಾವುದೇ ಶಿಫಾರಸು ಅಥವಾ ಮನವಿ ಮಾಡದೆ, ನಿಷ್ಠೆಯಿಂದ ಕಲೆಯ ಸೇವೆ ಮಾಡುತ್ತಾ ಬಂದಿದ್ದಾರೆ. 

ರತ್ನಮ್ಮ ದೇಸಾಯಿ ಇವರ ಮಗಳು ರೇಖಾ ಬಡಿಗೇರ್, ಮಾರುತಿ ಬಡಿಗೇರ್ ದಂಪತಿ ಅವರಿಂದ ಪ್ರೇರಣೆಯಾಗಿದ್ದು, ಕಲಾವಿದರನ್ನು ಗುರುತಿಸಿ ತಮ್ಮ ಕಲಾ ಸಂಸ್ಥೆಯ ಮೂಲಕ ಸಾಹಿತ್ಯ, ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ.

ರಾಜ್ಯ ಸರಕಾರ ರಂಗಭೂಮಿ ಕ್ಷೇತ್ರದ 50 ವರ್ಷಗಳ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸವಾಗಿದೆ. ಈ ಪ್ರಶಸ್ತಿಯನ್ನು ಎಲೆಮರೆಕಾಯಿಯಂತೆ ದುಡಿಯುತ್ತಿರುವ ಎಲ್ಲಾ ನನ್ನ ರಂಗಭೂಮಿ ಕಲಾವಿದರಿಗೆ ಅರ್ಪಿಸುತ್ತೇನೆ.

-ರತ್ನಮ್ಮ ದೇಸಾಯಿ, ರಂಗಭೂಮಿ ಕಲಾವಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News