ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ, ಕೃಷ್ಣ ಮೇಲ್ದಂಡೆ ಯೋಜನೆಗೆ ಸರಕಾರ ಬದ್ಧ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರು: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೂ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಅವರು ಧ್ವಜಾರೋಹಣದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ನೀರಾವರಿ ಪ್ರದೇಶಕ್ಕೆ 40 ಲಕ್ಷ ರೂ. ಮತ್ತು ಖುಷ್ಕಿ ಭೂಮಿಗೆ 30 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ಪ್ರಾಧಿಕಾರದ ಮೂಲಕ ಭೂ ಪರಿಹಾರ ಕಾರ್ಯ ನಡೆಸಲಾಗುತ್ತದೆ. ಒಟ್ಟು 75 ಸಾವಿರ ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಹಂತ ಹಂತವಾಗಿ ಪ್ರಕ್ರಿಯೆ ನಡೆಸಲು ಸುಮಾರು 75 ಸಾವಿರ ಕೋಟಿ ರೂ. ಅನುದಾನ ಅಗತ್ಯವಿದೆ. ಇದರ ಕುರಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹಣಕಾಸು ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
ಅಲಮಟ್ಟಿ ಜಲಾಶಯದ ಎತ್ತರ ನಮ್ಮ ಹಕ್ಕು. ನ್ಯಾಯಾಧೀಕರಣದ ತೀರ್ಪಿನ ಆಧಾರದ ಮೇಲೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆದರೆ ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದ್ದು, ಯೋಜನಾ ಇಲಾಖೆಯ ವ್ಯಾಪ್ತಿಯಲ್ಲಿ ಸಚಿವಾಲಯ ಕಾರ್ಯನಿರ್ವಹಿಸಲಿದೆ. ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರ ನಿರಂತರ ಪ್ರಯತ್ನದಲ್ಲಿದ್ದು, ನೆರೆರಾಜ್ಯಗಳ ಸಹಮತಿ ಪಡೆಯಲು ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಬಂದಿದೆ. ಶೀಘ್ರದಲ್ಲೇ 5,500 ಶಿಕ್ಷಕರ ನೇಮಕಾತಿ ನಡೆಯಲಿದೆ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಚಿವರು ತಿಳಿಸಿದರು.
ರಾಯಚೂರು ಉತ್ಸವವನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಮುಂಗಾರು ಮಳೆಯಿಂದಾದ ಹಾನಿ ಪರಿಹಾರ ಕುರಿತು ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಂಡು ರೈತರ ಖಾತೆಗೆ ಹಣ ಜಮಾ ಮಾಡಲಿದೆ ಎಂದರು.
ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ವೀರಶೈವ–ಲಿಂಗಾಯತ ಗೊಂದಲ ಕುರಿತು ಸೆ.21ರಂದು ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಸ್ವಾಮೀಜಿಗಳು ಹಾಗೂ ಸಮಾಜದ ಪ್ರಮುಖರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ವಿಧಾನಪರಿಷತ್ ಸದಸ್ಯರು ಎ.ವಸಂತಕುಮಾರ, ಶರಣಗ್ಗೌಡ ಬಯ್ಯಾಪುರ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿ ನಿತೀಶ್ ಕುಮಾರ, ಜಿ.ಪಂ. ಸಿಇಓ ಈಶ್ವರ ಕುಮಾರ ಕಾಂದು, ಪಾಲಿಕೆ ಆಯುಕ್ತ ಜೋಬಿನ್ ಮಹೋಪಾತ್ರ, ಎಸ್‌ಪಿ ಪುಟ್ಟಮಾದಯ್ಯ ಉಪಸ್ಥಿತರಿದ್ದರು.