×
Ad

ಮಾನ್ವಿಯಲ್ಲಿ ಪಕ್ಷಿಗಳ ಸರಣಿ ಸಾವು; ಹಕ್ಕಿ‌ಜ್ವರದ ಶಂಕೆ

Update: 2025-02-27 18:22 IST

ರಾಯಚೂರು : ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ತೆಲಂಗಾಣ ಮತ್ತು ಮಹಾರಾಷ್ಟದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಬರ್ಡ್ ಫ್ಲೂ ಹರಡುತ್ತಿರುವ ಆತಂಕ ಸೃಷ್ಟಿಯಾಗಿದ್ದು, ಮಾನ್ವಿ ತಾಲ್ಲೂಕಿನಲ್ಲಿ ಪ್ರತಿ ದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳು ಸಾವನ್ನಪ್ಪುತ್ತಿದೆ ಎಂದು ಆತಂಕ ಮೂಡಿದೆ.

ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ ಪ್ರತಿದಿನ ಎಂಟಹತ್ತು ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮಾನ್ವಿ ಪಟ್ಟಣ ಹಾಗೂ ರಬಣಕಲ್ ಗ್ರಾಮದಲ್ಲಿ ಸೇರಿ ಹಲವೆಡೆ ಪಕ್ಷಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಸಾವನ್ನಪ್ಪುತ್ತಿದೆ. ಪಕ್ಷಿಗಳ ಸಾವಿಗೆ ಕಾರಣ ತಿಳಿಯದಿರುವುದರಿಂದ ಸ್ಥಳೀಯರಲ್ಲಿ ಹಕ್ಕಿ ಜ್ವರದ ಆತಂಕ ಶುರುವಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪಶುವೈದ್ಯಾಧಿಕಾರಿಗಳು, ಮರದಿಂದ ಬಿದ್ದ ಪಕ್ಷಿಗಳಿಗೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಿದ್ದಾರೆ. ಮೃತ ಪಕ್ಷಿಯ ಕಳೆಬರವನ್ನು ಬೆಂಗಳೂರಿನ ಐಎಚ್‌ವಿಎ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಈ ವೇಳೆ ಮಾತನಾಡಿದ ಮಾನ್ವಿ ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಹಿರೇಮಠ, ಪಕ್ಷಿಗಳ ಸಾವಿಗೆ ಬೇರೆ ಬೇರೆ ಕಾರಣಗಳು ಇರುತ್ತದೆ. ಈಗಲೇ ಖಚಿತ ಮಾಹಿತಿ ಹೇಳಲು ಆಗಲ್ಲ. ಪ್ರಯೋಗಾಲಯದ ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ ರಾಜ್ಯದಲ್ಲಿ ಹಕ್ಕಿಜ್ವರ ಹಿನ್ನಲೆಯಲ್ಲಿ ಕೋಳಿ ಸಾಗಾಣೆ ನಿರ್ಬಂಧಿಸಲಾಗಿದೆ. ಅದರೆ ಪಶು ಇಲಾಖೆ ರಾಜ್ಯದ ಮಟ್ಟದಿಂದ ಯಾವುದೇ ಸೂಚನೆ ಬಾರದೇ ಇರುವುದರಿಂದ ನಿರ್ಬಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News