×
Ad

ಸಿಎಂ‌ ಕುರ್ಚಿ ಖಾಲಿಯಿಲ್ಲ, 5 ವರ್ಷ ಸಿದ್ದರಾಮಯ್ಯನವರೇ ಸಿಎಂ: ಶಾಸಕ ಅಜಯಸಿಂಗ್

Update: 2025-02-26 17:12 IST

ಶಾಸಕ ಅಜಯಸಿಂಗ್

ರಾಯಚೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಪೂರ್ಣ ಅವಧಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿದ್ದು ಯಾವುದೇ‌ ಗೊಂದಲವಿಲ್ಲ ಎಂದು ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜಯಸಿಂಗ್ ತಿಳಿಸಿದರು.

ಅವರಿಂದು ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರ ನಡೆಸಲು ಯಾವುದೇ ಸಮಸ್ಯೆಯಿಲ್ಲ. ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ. ಮಂಡಳಿ (ಕೆಕೆಆರ್ ಡಿಬಿ) ಮೂಲಕ ಈ‌ಭಾಗದ ಅಭಿವೃದ್ಧಿಗೆ ರಾಜ್ಯ ರೂ. 5000 ಕೋಟಿ ಬಿಡುಗಡೆ ಮಾಡುತ್ತಿದೆ. ಈ ಬಾರಿ ಅನುದಾನ ಸಂಪೂರ್ಣ ಖರ್ಚು ಮಾಡಲಾಗುವುದು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 41 ತಾಲೂಕುಗಳ ಅಭಿವೃದ್ಧಿ ರಾಜ್ಯ ಸರ್ಕಾರ ಎಂದಿಗೂ ಬದ್ದವಾಗಿದೆ. ಕಂದಾಯ ಇಲಾಖೆ ಹಾಗೂ ಕೆಕೆಆರ್‌ಡಿಬಿ ವತಿಯಿಂದ 8.60 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದ ಹೊಸ ತಾಲೂಕುಗಳು ಸೇರಿ ಎಲ್ಲಾ ತಾಲೂಕುಗಳಲ್ಲಿ ಮಿನಿ ವಿಧಾನಸೌದಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 1000 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಕ್ಷೇತ್ರದಲ್ಲಿ 30 ಕಿ.ಮಿ ಕಲ್ಯಾಣ ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಯ ಭೂಮಿ ಪೂಜೆಗೆ ಮಾರ್ಚ್ 8ರಂದು ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ಸಂಪುಟ ಸಭೆಯ ತೀರ್ಮಾನದಂತೆ 857 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ 440 ಕೋಟಿ.ರೂ. ವೆಚ್ಚದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಶೇ.80 ರಷ್ಟು ಮುಗಿದಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದ ಶೇ.25ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಪ್ರಮುಖರಾದ ಕೆ.ಶಾಂತಪ್ಪ, ಮಹ್ಮದ್ ಶಾಲಂ, ಜಯಂತರಾವ್ ಪತಂಗೆ, ಜಿಂದಪ್ಪ, ಮಲ್ಲೇಶ ಕೊಲಿಮಿ, ಶಿವಮೂರ್ತಿ, ನರಸಿಂಹಲು ಮಾಡಗಿರಿ, ಬಿ.ರಮೇಶ, ಜಿ.ತಿಮ್ಮಾರೆಡ್ಡಿ, ಅಮರೆಗೌಡ ಹಂಚಿನಾಳ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News