×
Ad

ಸಿಂಧನೂರು | ಪಡಿತರ ಅಕ್ಕಿ ಅಕ್ರಮ ಸಾಗಾಟ: 300 ಕ್ವಿಂಟಾಲ್ ಅಕ್ಕಿ ವಶಕ್ಕೆ

Update: 2025-09-22 12:11 IST

ರಾಯಚೂರು: ಪಡಿತರ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಆಹಾರ ಇಲಾಖೆಯ ಹಾಗೂ ಪೊಲೀಸ್ ಅಧಿಕಾರಿಗಳು ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ಬಳಿ ಸುಮಾರು 6.6 ಲಕ್ಷ ರೂ. ಮೌಲ್ಯದ 300 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದ ಘಟನೆ ರವಿವಾರ ನಡೆದಿದೆ.

ಈ ಸಂಬಂಧ ಸತೀಶ ಆದೋನಿ ಕರ್ನೂಲ್, ಲಾರಿ ಮಾಲಕ ಹಾಗೂ ಚಾಲಕ ಮುಹಮ್ಮದ್ ಅಫ್ತಾಬ್ ಕೋರಾಜಿಯಾ ಎನ್ನುವವರ ವಿರುದ್ಧ ಆಹಾರ ಇಲಾಖೆ ಅಧಿಕಾರಿ ಹನುಮೇಶ ಬಾಳಪ್ಪ ನೀಡಿರುವ ದೂರಿನನ್ವಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಸಿಂಧನೂರು, ಸಿರಗುಪ್ಪಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರ ಅಕ್ಕಿಯನ್ನು ಕೆಜಿಗೆ 15 ರೂ.ಗಳಂತೆ ಖರೀದಿಸುತ್ತಿದ್ದರು. ಈ ರೀತಿ ಖರೀದಿಸಿದ ಅಕ್ಕಿಯನ್ನು ರವಿವಾರ ಬೆಳಗ್ಗೆ ಲಾರಿಯಲ್ಲಿ ಹೇರಿಕೊಂಡು ಲೋಡ್ ಸಿರುಗುಪ್ಪಾ ಕಡೆಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿಯ ವೇಳೆ ಲಾರಿಯಲ್ಲಿ ತಲಾ 50 ಕೆಜಿಯ 600 ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News