ರಾಯಚೂರು | ಸಮೀಕ್ಷೆಯಲ್ಲಿ ಕರ್ತವ್ಯ ಲೋಪ: ಆರು ಅಂಗನವಾಡಿ ಕಾರ್ಯಕರ್ತರ ವಜಾ
ಸಾಂದರ್ಭಿಕ ಚಿತ್ರ
ರಾಯಚೂರು: ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿದ್ದ ದೇವದುರ್ಗ ತಾಲೂಕಿನ ಆರು ಅಂಗನವಾಡಿ ಕಾರ್ಯಕರ್ತೆಯನ್ನು ಗೌರವ ಸೇವೆಯಿಂದ ವಜಾಗೊಳಿಸಲಾಗಿದೆ.
ಅಂಜಳ–2 ಅಂಗನವಾಡಿ ಕೇಂದ್ರದ ಗುಂಡಮ್ಮ, ನಗರಗುಂಡ–2ರ ರಂಗಮ್ಮ, ಅಶೋಕ–ನೇತಾಜಿ ಓಣಿಯ ಮುತ್ತಮ್ಮ, ಮಟ್ಟೇರ್‌ದೊಡ್ಡಿಯ ಚಾಂದಬಿ, ದೇವದುರ್ಗ ನೇತಾಜಿ ಓಣಿಯ ವಿಜಯಲಕ್ಷ್ಮಿ ಹಾಗೂ ಬಾಪೂಜಿ ಓಣಿಯ ರೇಣುಕಾ ಅವರನ್ನು ವಜಾಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಆದೇಶ ಹೊರಡಿದ್ದಾರೆ.
ನಾಲ್ಕು ದಿನವಾದರೂ ಸಮೀಕ್ಷೆಯಲ್ಲಿ ಪ್ರಗತಿ ಕಾಣಿಸಿಲ್ಲ. ಗಣತಿ ಕಾರ್ಯಕ್ಕೆ ಹೋಗದಂತೆ ಬೇರೆ ಕಾರ್ಯಕರ್ತೆಯರಿಗೂ ಪ್ರಚೋದಿಸಿದ್ದಾರೆ. ಗಣತಿ ಕಾರ್ಯಕ್ಕೂ ಹಾಜರಾಗಿಲ್ಲ. ಹೀಗಾಗಿ ಕರ್ತವ್ಯ ಲೋಪ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ನಡೆದುಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಲಿಂಗಸುಗೂರು ವರದಿ: ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ನಿರಂತರವಾಗಿ ಗೈರಾದ 57 ಜನ ಸಮೀಕ್ಷೆ ಸಿಬ್ಬಂದಿಗೆ ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಭಾನುವಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.