×
Ad

ವಾರ್ತಾಭಾರತಿ ಸಂವಿಧಾನದ ಆಶಯವನ್ನು ಎತ್ತಿಹಿಡಿಯುತ್ತಿದೆ : ರಾಘವೇಂದ್ರ ಕುಷ್ಠಗಿ

ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ರಾಯಚೂರು ನಗರದಲ್ಲಿ ಓದುಗ, ಹಿತೈಷಿಗಳ ಸಭೆ

Update: 2025-11-26 20:23 IST

ರಾಯಚೂರು : ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಇಂದು ಮಾಧ್ಯಮ ರಂಗ ಜನಪರವಾಗಿರದೆ ಕಾರ್ಪೋರೇಟ್‌ಗಳ ತುತ್ತುರಿಯಾಗುತ್ತಿದೆ. ಆದರೆ ವಾರ್ತಾಭಾರತಿ ಮಾಧ್ಯಮ ಸಂವಿಧಾನದ ಆಶಯವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ ಎಂದು ಹೈದರಾಬಾದ್‌ ಕರ್ನಾಟಕ ಜನಾಂದೋಲನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಠಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟ ಆವೃತ್ತಿ ಬಿಡುಗಡೆಯ ಪ್ರಯುಕ್ತ ರಾಯಚೂರು ನಗರದ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ನಡೆದ ಓದುಗರು, ವೀಕ್ಷಕರ ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ರಾಘವೇಂದ್ರ ಕುಷ್ಠಗಿ, ಭಾರತ ಎಲ್ಲರಿಗೂ ಸೇರಿದ್ದು, ಭಾರತದ ಸಂವಿಧಾನ ಸರ್ವರ ಸಮಾನತೆಗಾಗಿ ರಚಿಸಲಾಗಿದೆ. ಆದರೆ ಆಳುವ ಸರಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದರು.

ನಾವು ಬಹಳ ಕೆಟ್ಟ ಸಂದರ್ಭದಲ್ಲಿದ್ದೇವೆ. ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ಒಂದು ಧರ್ಮದ ಪರವಾಗಿ ಮಾತನಾಡುತ್ತಿದ್ದಾರೆ. ಮಾಧ್ಯಮಗಳು ಅವರನ್ನು ವೈಭವೀಕರಿಸಿ ಸುದ್ದಿಗಳನ್ನು ಪ್ರಕಟಿಸುತ್ತಿವೆ. ದೇಶವನ್ನು ಆಳುವವರು ಕೋಮುವಾದಿ, ಫ್ಯಾಸಿಸ್ಟ್ ಶಕ್ತಿಯ ಹಿಡಿತಕ್ಕೆ ಸಿಲುಕಿದ್ದಾರೆ. ಫ್ಯಾಸಿಸ್ಟ್ ಧೋರಣೆ ವಿಶ್ವವ್ಯಾಪಿ ಬೆಳೆದಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದರ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು. ಮಾಧ್ಯಮಗಳು ಕಾರ್ಮಿಕರ, ರೈತರ, ಮಹಿಳೆಯರ ಹಿತಾಸಕ್ತಿ ಕಾಪಾಡಬೇಕು ಈ ನಿಟ್ಟಿನಲ್ಲಿ ವಾರ್ತಾಭಾರತಿ ಪತ್ರಿಕೆ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿದರು.

ನಾನು 23 ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆ ಗಮನಿಸುತ್ತಿದ್ದೇನೆ, ಓದುತ್ತಿದ್ದೇನೆ, ಶಿವಸುಂದರ್, ಸನತ್ ಕುಮಾರ್‌ ಬೆಳಗಲಿ ಅವರ ಅಂಕಣ ತಪ್ಪದೇ ಓದುತ್ತಿದ್ದೇನೆ. ಸೋಷಿಯಲ್ ಮೀಡಿಯಾ ಕ್ರಾಂತಿ ಬಳಿಕ ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ಮೂಲಕವೂ ಅನೇಕ ಚರ್ಚೆ, ವಿಶೇಷ ವರದಿಗಳ ಪ್ರಸಾರ ಮಾಡುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. 23 ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕ ಭಾಗಕ್ಕೆ ತಲುಪುತ್ತಿದ್ದು ವಾರ್ತಾಭಾರತಿಯನ್ನು ನಾವೆಲ್ಲರೂ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಸಮಾಜದ ಪರಿವರ್ತನೆಗೆ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಪತ್ರಿಕೆ ನಡೆಸುವುದು ಸವಾಲಿನ ಕೆಲಸವಾದರೂ ಮಂಗಳೂರಿನಿಂದ ಆರಂಭವಾದ ವಾರ್ತಾಭಾರತಿ ಶಿವಮೊಗ್ಗ, ಬೆಂಗಳೂರಿಂದ ಈಗ ಕಲ್ಯಾಣ ಕರ್ನಾಟಕಕ್ಕೆ ಪದಾರ್ಪಣೆ ಆಗುತ್ತಿದೆ. ಈ ಪತ್ರಿಕೆ ಜನಮಾನಸದಲ್ಲಿ ಉಳಿದು ರಾಜ್ಯಾದ್ಯಂತ ವಿಸ್ತಾರವಾಗಲಿ. ವಾರ್ತಾಭಾರತಿ ಪತ್ರಿಕೆ ಸೀಮಿತ ಚೌಕಟ್ಟಿನ ಆಚೆ ವಿಶ್ವಾದ್ಯಾಂತ ಓದುಗರ, ವೀಕ್ಷಕರನ್ನು ಹೊಂದಿರುವುದು ಖುಷಿಯ ವಿಚಾರ. ಪತ್ರಿಕೆಗಳನ್ನು ಓದುವವರ ಹಾಗೂ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅನೇಕ ಪತ್ರಿಕೆ ಆರಂಭವಾದ ಕೆಲವೇ ವರ್ಷಗಳಲ್ಲಿ ಮೂಲೆ ಗುಂಪಾಗಿವೆ. ಸೋಷಿಯಲ್ ಮೀಡಿಯಾಗಳ ಹಾವಳಿಯ ಮಧ್ಯೆ ಎಲ್ಲರಿಗೂ ತಲಪಲು ಆಧುನಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ವಾರ್ತಾಭಾರತಿ 25 ವರ್ಷದ ರಜತ ಮಹೋತ್ಸವ, ಶತಕ ಸಂಭ್ರಮಾಚರಣೆಯವರೆಗೆ ಹೀಗೆ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಮಾತನಾಡಿ, ಅನೇಕ ಹೋರಾಟದ ಬಳಿಕ ಕರ್ನಾಟಕ ಏಕೀಕರಣವಾದರೂ ಕಲ್ಯಾಣ ಕರ್ನಾಟಕ, ಬಾಂಬೆ ಕರ್ನಾಟಕ, ಹಳೆ ಮೈಸೂರು ಎಂಬ ಹೆಸರಿನಲ್ಲಿ ವಿಭಜಿಸಲ್ಪಡುತ್ತಿದೆ. ದಾಸ, ಶರಣರ, ಸೂಫಿ ಸಂತರ ನಾಡು ಕಲ್ಯಾಣ ಕರ್ನಾಟಕ ಪ್ರದೇಶ ತಾರತಮ್ಯಕ್ಕೆ ಒಳಗಾಗಿದೆ. ಚಿನ್ನ, ಅಕ್ಕಿ, ಬೆಳಕು ನೀಡುವ ರಾಯಚೂರು ಜಿಲ್ಲೆ ಸಂಪದ್ಭರಿತ ನಾಡಾಗಿದ್ದರೂ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ‌ ಭಾಗದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ವಾರ್ತಾಭಾರತಿ ಪತ್ರಿಕೆ ಬೆಳಕು‌ ಚೆಲ್ಲಲಿ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಪತ್ರಿಕೆ ನಡೆಸುವುದು ಕಷ್ಟದ ಕೆಲಸ. ಓದಲು ಜನರಿಗೆ ಸಮಯ, ಸಹನೆ ಇಲ್ಲ, ಉತ್ತಮವಾದ ವಿಚಾರ ತಿಳಿದುಕೊಳ್ಳಬೇಕು. ಪತ್ರಿಕೆಗಳು ತಮ್ಮ ಮೌಲ್ಯಗಳನ್ನು ಉಳಿಸಿ ಕೊಂಡು ಹೋಗಬೇಕು. ಪ್ರಾಮಾಣಿಕವಾಗಿ‌ ಕೆಲಸ ಮಾಡುವ ಮಾಧ್ಯಮಗಳ ಪೈಕಿ ವಾರ್ತಾಭಾರತಿಯೂ ಗುರುತಿಸಿಕೊಂಡಿದ್ದು ಸವಾಲುಗಳನ್ನು ಸ್ವೀಕರಿಸಿ ನಡೆಯಲಿ, ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.

ಸಾಹಿತಿ ವೀರ ಹನುಮಾನ ಅವರು ಮಾತನಾಡಿ, ಇಂದಿನ ದಿನಗಳಲ್ಲಿಅಪಘಾತ, ರಾಜಕೀಯ ವಿಷಯ, ಆಡಂಬರದ ವಿಷಯಗಳಿಗೆ ಆದ್ಯತೆ‌ ನೀಡಲಾಗುತ್ತಿದೆ. ಜನಪರ ಕಾಳಜಿ ಕಡಿಮೆಯಾಗಿದೆ. ಯಾವುದೇ ಪತ್ರಿಕೆಯ ಧ್ಯೆಯೋದ್ದೇಶ ತಿಳಿಯಬೇಕಾದರೆ ಅದರ ಸಂಪಾದಕೀಯವೇ ಜೀವಾಳ, ನಾನು ವಾರ್ತಾಭಾರತಿ ಪತ್ರಿಕೆಯ ಬಗ್ಗೆ ತಿಳಿದ ಬಳಿಕ ಸಂಪಾದಕೀಯ ಓದುತ್ತಿದ್ದೇನೆ, ಜನಪರ, ಆರೋಗ್ಯಕರ ವಿಚಾರಗಳ ಬಗ್ಗೆ ಅದು ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.

ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಸ್ವತಂತ್ರ ಆಲೋಚನೆ, ಯಾವುದೇ ರಾಜೀರಹಿತವಾಗಿ ಪತ್ರಿಕೆ ನಡೆಸಲು ಸವಾಲಿನ ಕೆಲಸ. ಯಾರ ಮುಲಾಜಿಲ್ಲದೇ, ಬಂಡವಾಳಿಶಾಹಿಗಳ ಬೆಂಬಲವಿಲ್ಲದೇ ಅನೇಕರು ಪತ್ರಿಕೆ ಆರಂಭಿಸಿ ಬಂದ್ ಮಾಡಿದ್ದು ಇತಿಹಾಸ. ನಾವೂ ಇಂತಹ ಸಾಲಿಗೆ ಸೇರಿದರೂ, ಧೃತಿಗೆಡದೇ ಸಕಾರಾತ್ಮಕ ಆಲೋಚನೆಯಿಂದ ಸಣ್ಣ ಬಂಢವಾಳದಿಂದ ಪತ್ರಿಕೆ ಆರಂಭಿಸಿದ್ದೇವೆ. ಮಂಗಳೂರು ಆವೃತ್ತಿ ಆರಂಭಿಸಿದ್ದಾಗ ಅನೇಕರು ರಾಜ್ಯ ಮಟ್ಟಕ್ಕೆ ವಿಸ್ತರಿಸಿ ಎಂದು ಹೇಳುತ್ತಿದ್ದರು. ಪತ್ರಿಕೆಗಳು ಉದ್ಯಮವಾಗಿ ಬೆಳೆದರೂ ನಾವು ಬಂಡವಾಳಶಾಹಿಗಳಿಗೆ, ಆಳುವವರಿಗೆ ಅಪ್ಪಿಕೊಳ್ಳದೇ ಬಂಡವಾಳ ಶಾಹಿಗಳ ವಿರುದ್ಧವೇ, ನಾಡಿನ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಅನೇಕ ಬೆದರಿಕೆಗಳು‌ ಬಂದರೂ ಹೆದರಿಲ್ಲ. ರಾಜಕಾರಣಿಗಳ‌ನ್ನು ಬೆಂಬಲಿಸದೇ‌ ಬಲಿಪಶುಗಳ ಧ್ವನಿಯಾಗಿ ಕೆಲಸ ಮಾಡುತ್ತಿದ್ದೆವೆ. ನಾವು ಉಚಿತವಾಗಿ ಯೂಟ್ಯೂಬ್ ಸುದ್ದಿಗಳನ್ನು ನೀಡುತ್ತಿದ್ದೇವೆ. ಫಲಾನುಭವಿಗಳೇ ವಾರ್ತಾಭಾರತಿಯನ್ನು ಬೆಂಬಲಿಸಿ‌ ಬೆಳೆಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್, ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಬಿ.ಬಸವರಾಜ ಉಪಸ್ಥಿತರಿದ್ದರು. ವಾರ್ತಾ ಭಾರತಿಯ ಉತ್ತರ ಕರ್ನಾಟಕ ವಿಭಾಗದ ಉಸ್ತುವಾರಿ ಶಬ್ಬೀರ್ ನಿರೂಪಿಸಿ, ವಂದಿಸಿದರು.

ಡಿಸೆಂಬರ್‌ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್‌ ಎಂ ಪಂಡಿತ್‌ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News