ಸಮಾಜದ ಒಳತಿಗಾಗಿ ಕೆಲಸ ಮಾಡುವ ವಾರ್ತಾಭಾರತಿ ಮಾಧ್ಯಮವನ್ನು ಪ್ರೋತ್ಸಾಹಿಸಬೇಕು : ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು
ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಮಾನ್ವಿಯಲ್ಲಿ ಓದುಗ, ಹಿತೈಷಿಗಳ ಸಭೆ
ರಾಯಚೂರು : ಸಮಾಜದ ಒಳತಿಗಾಗಿ ಕೆಲಸ ಮಾಡುವುದು ಮಾಧ್ಯಮಗಳ ಜವಾಬ್ದಾರಿ. ಸಮಾಜದ ಬಗ್ಗೆ ನಿಜವಾದ ಕಾಳಜಿ ಇರುವ ಮಾಧ್ಯಮಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಈ ದಿಸೆಯಲ್ಲಿ ವಾರ್ತಾಭಾರತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ತಿಳಿಸಿದರು.
ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟಕ ಆವೃತ್ತಿ ಬಿಡುಗಡೆ ಪ್ರಯುಕ್ತ ಮಾನ್ವಿ ಪಟ್ಟಣದ ಗ್ಯಾಲಕ್ಸಿ ಮೀಟಿಂಗ್ ಹಾಲ್ ನಲ್ಲಿ ನಡೆದ ಓದುಗರು, ವೀಕ್ಷಕರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಡಾ.ಬಸವಪ್ರಭು ಪಾಟೀಲ್, ಮಾಧ್ಯಮಗಳು ಸತ್ಯದ ಮೇಲೆ ನಡೆಯಬೇಕು. ಸತ್ಯವೇ ಮೂಲ ಮಂತ್ರವಾಗಬೇಕು. ಆದರೆ ಅನೇಕ ಮಾಧ್ಯಮಗಳು, ಪತ್ರಿಕೆಗಳು ಗೊಂದಲ, ಅಸತ್ಯವಾದ ಸುದ್ದಿಗಳನ್ನು ಪ್ರಕಟಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಇಂತಹ ಸಾಲಿನಲ್ಲಿ ಜನರ ಭಾವನೆಗಳಿಗೆ ಅರ್ಥಮಾಡಿಕೊಂಡು ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರುವ ವಾರ್ತಾಭಾರತಿ ಪತ್ರಿಕೆ ಜನಮಾನಸದಲ್ಲಿ ಉಳಿಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತಪರ ಹೋರಾಟಗಾರ ಬಾಲಸ್ವಾಮಿ ಕೊಡ್ಲಿ ಮಾತನಾಡಿ, ವಾರ್ತಾ ಭಾರತಿ ಪತ್ರಿಕೆ ಶೋಷಿತರ ಪರವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ದಲಿತ, ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಆದರೂ ಅನೇಕ ಮಾಧ್ಯಮಗಳು ಈ ಸಮುದಾಯದ ಪರವಾಗಿ ಕೆಲಸ ಮಾಡದೆ ಸಮಾಜದಲ್ಲಿ ಅಶಾಂತಿ, ಕೋಮು ಸೌಹಾರ್ದತೆಗೆ ಧಕ್ಕೆ ಮೂಡಿಸುವ ಶಕ್ತಿಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತಿವೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದು ಸವಾಲಿನ ಕೆಲಸವಾದರೂ, ವಾರ್ತಾಭಾರತಿ ಪತ್ರಿಕೆ ಸವಾಲನ್ನು ಸ್ವೀಕರಿಸಿ ಸಮಾಜದ ಶ್ರೆಯೋಭಿವೃದ್ಧಿಗೆ ದುಡಿಯುತ್ತಿದೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ಕುರುಬರ ಸಂಘದ ರಾಜ್ಯಾಧ್ಯಕ್ಷ ಎಂ.ಈರಣ್ಣ, ದಿಶಾ ಕಮಿಟಿಯ ಸದಸ್ಯ ತಿಪ್ಪಣ್ಣ ಬಾಗಲವಾಡ, ಸಮಾಜ ಸೇವಕ ಸಯ್ಯದ್ ಅಕ್ಬರ್ ಪಾಶ, ಸೈಯದ್ ಖಾಲಿದ್ ಖಾದ್ರಿ, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಉಪಸ್ಥಿತರಿದ್ದರು.
ಡಿಸೆಂಬರ್ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.