×
Ad

ಇನ್ನು ರೈಲು ಹೊರಡುವ ಎಂಟು ಗಂಟೆ ಮೊದಲೇ ರಿಸರ್ವೇಶನ್ ಚಾರ್ಟ್ ಸಿದ್ಧ

Update: 2025-06-30 07:42 IST

PC: PTI

ಹೊಸದಿಲ್ಲಿ: ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಶೀಘ್ರದಲ್ಲೇ ರೈಲು ಹೊರಡುವ ಎಂಟು ಗಂಟೆ ಮುಂಚಿತವಾಗಿ ರಿಸರ್ವೇಶನ್ ಚಾರ್ಟ್ (ದೃಢೀಕೃತ ಬರ್ತ್/ ಸೀಟ್) ಸಿದ್ಧಪಡಿಸುವ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಆರಂಭಿಸಲಿದೆ. ಪ್ರಸ್ತುತ ರೈಲು ಹೊರಡುವ ನಾಲ್ಕು ಗಂಟೆ ಮೊದಲು ಚಾರ್ಟ್ ಸಿದ್ಧಪಡಿಸಲಾಗುತ್ತಿದೆ.

ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಧ್ಯಾಹ್ನ 2 ಗಂಟೆಗಿಂತ ಮೊದಲು ಹೊರಡುವ ರೈಲುಗಳ ಚಾರ್ಟ್ ಹಿಂದಿನ ದಿನ ರಾತ್ರಿ 9 ಗಂಟೆಗೆ ಮುನ್ನವೇ ಸಿದ್ಧವಾಗಲಿದೆ.

ರೈಲ್ವೆ ಮಂಡಳಿ ಕಳೆದ ವಾರ ಈ ಬದಲಾವಣೆಗಳನ್ನು ಪ್ರಸ್ತಾವಿಸಿದ್ದು, ಯಾವುದೇ ತೊಂದರೆಯಾಗದಂತೆ ಇದನ್ನು ಹಂತ ಹಂತವಾಗಿ ಜಾರಿ ಮಾಡಲು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸೂಚನೆ ನೀಡಿದ್ದಾರೆ. ರೈಲ್ವೆಮಂಡಳಿ ಇದನ್ನು ಜಾರಿಗೊಳಿಸುವ ಯೋಜನೆಯನ್ನು ಶೀಘ್ರವೇ ಪ್ರಕಟಿಸಲಿದೆ.

ಹಾಲಿ ಇರುವ ವ್ಯವಸ್ಥೆಯಲ್ಲಿ ರೈಲು ಹೊರಡುವ ನಾಲ್ಕು ಗಂಟೆ ಮುನ್ನ ಚಾರ್ಟ್ ಸಿದ್ಧಪಡಿಸಲಾಗುತ್ತಿದೆ; ಇದರಿಂದ ಪ್ರಯಾಣಿಕರ ಮನಸ್ಸಿನಲ್ಲಿ ಅನಗತ್ಯ ಅನಿಶ್ಚಿತತೆ ಉಂಟಾಗುತ್ತದೆ. ಹೊಸ ಸಮಯಮಿತಿ ವೈಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ತಮ್ಮ ವೈಟ್‌ ಲಿಸ್ಟ್‌ನ ಬಗೆಗೆ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿಯೇ ಪಡೆಯಲಿದ್ದಾರೆ. ಇದು ದೂರದ ಪ್ರದೇಶಗಳಿಂದ ಹಾಗೂ ಉಪನಗರಗಳಿಂದ ಧೀರ್ಘದೂರದ ರೈಲುಗಳನ್ನು ಹಿಡಿಯಲು ಪ್ರಯಾಣ ಮಾಡುವುದನ್ನು ಯೋಜಿಸಿಕೊಳ್ಳಲು ಅನುಕೂಲವಾಗಲಿದೆ. ಜತೆಗೆ ಟಿಕೆಟ್ ದೃಢೀಕರಣಗೊಳ್ಳದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲೂ ನೆರವಾಗಲಿದೆ ಎಂದು ರೈಲ್ವೆ ಮಂಡಳಿಯ ಪ್ರಕಟಣೆ ಹೇಳಿದೆ.

ಡಿಸೆಂಬರ್ ಗೆ ಮುನ್ನ ಸಮಗ್ರ ಪ್ರಯಾಣಿಕ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಪರಿಷ್ಕರಿಸಲು ಕೂಡಾ ರೈಲ್ವೆ ಮಂಡಳಿ ಚಿಂತನೆ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News