ರಾಯಚೂರು ಜಿಲ್ಲೆಯ ನದಿ ತೀರದ ಜನರಲ್ಲಿ ಪ್ರವಾಹ ಭೀತಿ
ರಾಯಚೂರು: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಜೋರಾಗಿದ್ದರಿಂದ ಕೃಷ್ಣ ನದಿಯಿಂದ ನೀರು ಹರಿಸಲಾಗುತ್ತಿದ್ದು, ಜಿಲ್ಲೆಯ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲೂಕು ಹಾಗೂ ಸಿಂಧನೂರು ತಾಲೂಕುಗಳ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಸದ್ಯಕ್ಕೆ ಜಿಲ್ಲೆಯಲ್ಲಿನ ಕೃಷ್ಣಾನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿ ಇಲ್ಲದಿದ್ದರೂ ನಿಧಾನಕ್ಕೆ ಹೊರ ಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾದರೆ ಜನ, ಜಾನುವಾರುಗಳನ್ನು ರಕ್ಷಣೆ ಮಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರಕ್ಷಣಾ ಸಾಮಗ್ರಿಗಳ ಜೊತೆ ಜಿಲ್ಲಾಡಳಿತ ಸಜ್ಜಾಗಿದೆ.
ಮಳೆಯ ಅಬ್ಬರ ಹೆಚ್ಚಾದಂತೆಲ್ಲ ನದಿ ತೀರದ ಗ್ರಾಮಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹಮಾಮಾನ ಇಲಾಖೆ ವರದಿ ನೀಡಿರುವ ಹಿನ್ನೆಲೆ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳಿಗೆ ಭಾರತೀಯ ಸೇನೆಯ ಅಧಿಕಾರಿಗಳಾದ ಮೇಜರ್‌ಬಸವ ಪ್ರಭು ಹಾಗೂ ಸಂಜೀವ್ ಸಾಧುನವರ್ ಅವರ ನೇತೃತ್ವದ ತಂಡ ಜೂನ್ ಮೊದಲ ವಾರದಲ್ಲೇ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲೂಕಿನ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪ್ರವಾಹ ಉಂಟಾದರೆ ಕೈಗೊಳ್ಳಬೇಕಾದ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಾಹಣ ಪ್ರಾಧಿಕಾರದ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೀಶ್ ಕೆ. ಅವರ ಜೊತೆ ಚರ್ಚೆ ಮಾಡಿದ್ದಾರೆ.
ಆಲಮಟ್ಟಿಜಲಾಶಯ ಶೇ.60ರಷ್ಟು ಮತ್ತು ನಾರಾಯಣಪುರ ಜಲಾಶಯವು ಶೇ.80ರಷ್ಟು ಭರ್ತಿಯಾಗಿದೆ. ಇನ್ನು ಮೇಲ್ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಾರಾಯಣಪುರ ಜಲಾಶಯದಿಂದ ಸುಮಾರು 1,10,000 ಕ್ಯೂಸೆಕ್ ನೀರನ್ನು ಶನಿವಾರ ಹರಿಯಬಿಡಲಾಗಿದೆ. ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವು 4 ರಿಂದ 7 ಲಕ್ಷ ಕ್ಯೂಸೆಕ್‌ವರೆಗೆ ಸೇರಿದ್ದೇ ಆದಲ್ಲಿ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ದೇವದುರ್ಗ, ಲಿಂಗಸುಗೂರು ಮತ್ತು ರಾಯಚೂರು ತಾಲೂಕುಗಳ ಒಟ್ಟು 72 ಹಳ್ಳಿಗಳಿಗೆ ಸಮಸ್ಯೆಯಾಗಲಿದೆ. ಇಷ್ಟೇ ಅಲ್ಲದೇ ಶೀಲಹಳ್ಳಿ, ಹೂವಿನಹೆಡಗಿ, ಗುರ್ಜಾಪುರ,ಯರಗೋಡಿ, ಜಲದುರ್ಗ ಸೇತುವೆಗಳೊಂದಿಗೆ ಗೂಗಲ್ ಬ್ಯಾರೇಜ್ ಮುಳುಗಡೆಯಾಗುವ ಸಾಧ್ಯತೆಗಳಿವೆ. ಆದರೆ ಸದ್ಯಕ್ಕೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ಯಾವುದೇ ರೀತಿಯ ಆತಂಕವಿಲ್ಲದಿದ್ದರೂ ಕೃಷ್ಣಾ ನದಿಪಾತ್ರದಲ್ಲಿ ಕಟ್ಟೆಚ್ಚರಿಕೆಯನ್ನು ವಹಿಸಲಾಗಿದ್ದು, ಜನ-ಜಾನುವಾರು ನದಿ ಸಮೀಪಕ್ಕೆ ತೆರಳದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳು
ಮಳೆಯ ಹೆಚ್ಚಾದಾಗ ಕೃಷ್ಣ ನದಿಗೆ ನೀರು ಹೆಚ್ಚಾಗಿ ಹರಿಬಿಟ್ಟಾಗ ಸಾಮಾನ್ಯವಾಗಿ ನಡುಗಡ್ಡೆ ಗ್ರಾಮಗಳಾದ ರಾಯಚೂರು ತಾಲೂಕಿನ ಆತ್ಕೂರು, ಕುರ್ವಕರ್ದಾ, ಕುರ್ವಕಲಾ, ಡೊಂಗರಾಂಪುರ, ಕಾಡ್ಲೂರು, ಗುರ್ಜಾಪೂರ, ಗಂಜಹಳ್ಳಿ, ಲಿಂಗಸುಗೂರು ತಾಲೂಕಿನ ಮಾದರದೊಡ್ಡಿ, ಕಡದರಗಡ್ಡಿ, ಓಂಕಾರಗಡ್ಡಿ, ಯರಗೋಡಿ, ಹಂಚಿನಾಳ, ಮಲ್ಲಮನಗಡ್ಡಿ, ಜಲದುರ್ಗ, ದೇವದುರ್ಗ ತಾಲೂಕಿನ ವೀರಗೋಟ, ಮುದಗೋಟ, ಲಿಂಗದಹಳ್ಳಿ, ಚಿಂಚೋಡಿ, ಬಾಗೂರು, ಹೇರುಂಡಿ, ಅಂಚೆ ಸೂಗೂರು, ಗೋಪಾಪುರ, ಜೋಳದಹೆಡಗಿ, ಕರ್ಕಿಹಳ್ಳಿ, ಅಪ್ರಾಳ, ಬಸವಂತಪುರ, ಹಿರೇರಾಯಕುಂಪಿ, ಚಿಕ್ಕರಾಯಕುಂಪಿ, ಗೂಗಲ್, ಗೂಗಲ್ ಬ್ರಿಡ್ಜ್ ಕಮ್ ಬ್ಯಾರೇಜ್ ಮುಂತಾದೆಡೆ ಕೃಷ್ಣಾನದಿಗೆ ಹೊರಹರಿವು ತುಂಬಾ ಹೆಚ್ಚಿದಾಗ ಪ್ರವಾಹದ ಪರಿಸ್ಥಿತಿ ಉಂಟಾಗಿ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಗ್ರಾಮಗಳಿಗೆ ಎನ್‌ಡಿಆರ್‌ಎಫ್ ತಂಡ ಭೇಟಿ ನೀಡಿ ರಕ್ಷಣಾ ಕಾರ್ಯಗಳು ಕೈಗೊಳ್ಳುತ್ತದೆ.
ಭಾರೀ ಮಳೆಯಿಂದ ಉಂಟಾಗುವ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅವಶ್ಯಕವೆನಿಸಿದರೆ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ನಿತೀಶ್ ಕೆ., ರಾಯಚೂರು ಜಿಲ್ಲಾಧಿಕಾರಿ