×
Ad

ಬಿಹಾರ | ಬೆದರಿಕೆ ಹಾಕಿದ ಶಾಸಕನಿಗೆ “ನಿಮ್ಮ ಭಯವಿಲ್ಲ ನನಗೆ, ನನ್ನ ಕೆಲಸ ನಾನು ಮಾಡುತ್ತೇನೆ!” ಎಂದ ಪಂಚಾಯ್ತಿ ಕಾರ್ಯದರ್ಶಿ: ಆಡಿಯೋ ವೈರಲ್

Update: 2025-07-29 08:15 IST

ಆರ್‌ಜೆಡಿ ಶಾಸಕ ಭಾಯ್ ವೀರೇಂದ್ರ PC: indiatoday

ಪಾಟ್ನಾ: ರಾಜಕೀಯ ಅಧಿಕಾರದ ಗರ್ಜನೆಯ ಮುಂದೆ ಸಾಮಾನ್ಯ ಸರ್ಕಾರಿ ನೌಕರನೊಬ್ಬನು ಎದೆ ತಟ್ಟಿ ನಿಂತಿರುವ ಘಟನೆ ಬಿಹಾರದಲ್ಲಿ ನಡೆದಿದೆ. ‘ಪಂಚಾಯತ್’ ವೆಬ್ ಸೀರೀಸ್ ನೆನಪಿಗೆ ತರುವಂತೆ, ಇಲ್ಲೊಂದು ನೈಜ ಘಟನೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್‌ಜೆಡಿ ಶಾಸಕ ಭಾಯ್ ವೀರೇಂದ್ರ ಮತ್ತು ಸ್ಥಳೀಯ ಪಂಚಾಯ್ತಿ ಕಾರ್ಯದರ್ಶಿ ನಡುವೆ ನಡೆದ ವಾಗ್ವಾದ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮನೇರ್ ಕ್ಷೇತ್ರದ, ಆರ್ ಜೆ ಡಿ ಶಾಸಕ ಭಾಯ್ ವೀರೇಂದ್ರ ಅವರು, ತಮ್ಮ ಕ್ಷೇತ್ರದ ನಿವಾಸಿ ರಿಂಕಿದೇವಿಗೆ ಸಂಬಂಧಿಸಿದ ಮರಣ ಪ್ರಮಾಣಪತ್ರದ ಸ್ಥಿತಿಗತಿಯ ಬಗ್ಗೆ ತಿಳಿಯಲು ಪಂಚಾಯತ್ ಕಾರ್ಯದರ್ಶಿಗೆ ಕರೆ ಮಾಡಿದ್ದರು. ಆದರೆ ಕಾರ್ಯದರ್ಶಿ ಶಾಸಕರ ಧ್ವನಿಯನ್ನು ಗುರುತಿಸದೆ ಯಾರು ಎಂದು ಕೇಳಿದ ಪ್ರಶ್ನೆ, ಶಾಸಕರನ್ನು ಕೆರಳಿಸಿತು.

ಕೋಪದಿಂದ ಶಾಸಕರು, “ನನ್ನನ್ನು ನಿನಗೆ ಪರಿಚಯವಿಲ್ಲವೇ? ನಾನು ಭಾಯ್ ವೀರೇಂದ್ರ. ಇಡೀ ಕ್ಷೇತ್ರವನ್ನೇ ನಾನೇ ನಡೆಸ್ತೀನಿ. ನನ್ನ ಬಗ್ಗೆ ಎಲ್ಲರಿಗೂ ಗೊತ್ತು. ನಾನು ನನ್ನನ್ನು ನಿನಗೆ ಪರಿಚಯಿಸಿಕೊಳ್ಳಬೇಕಾ?” ಎಂದು ಹೇಳುತ್ತಿರುವುದು ವೈರಲ್ ಆದ ಆಡಿಯೋದಲ್ಲಿದೆ.

“ನೀವು ಗೌರವದಿಂದ ಮಾತನಾಡಿದರೆ, ನಾನು ಸಹ ಗೌರವ ನೀಡುತ್ತೇನೆ. ಸೊಕ್ಕಿನಿಂದ ಮಾತನಾಡಿದರೆ, ಉತ್ತರವೂ ಹಾಗೆಯೇ ಸಿಗುತ್ತೆ. ನಿಮ್ಮ ಬಗ್ಗೆ ನನಗೆ ಯಾವುದೇ ಭಯವಿಲ್ಲ!” ಎಂಬ ಪ್ರತ್ಯುತ್ತರ ಶಾಸಕರಿಗೆ ತೀಕ್ಷ್ಣ ಹೊಡೆತ ಸಿಕ್ಕಂತೆ ಭಾಸವಾಗಿದೆ.

ಈ ಮಾತುಗಳು ಶಾಸಕರಿಗೆ ಬಿಸಿ ಮುಟ್ಟಿಸಿದರೂ, ಕಾರ್ಯದರ್ಶಿ ಸಂದೀಪ್ ಕುಮಾರ್ ಶಾಂತ ಚಿತ್ತದಿಂದ, “ನಾನು ಕೆಲಸ ಮಾಡುತ್ತೇನೆ. ಪ್ರಕ್ರಿಯೆ ನಡೆಯುತ್ತಾ ಇದೆ. ನೀವು ಬೆದರಿಕೆ ಹಾಕಬೇಡಿ. ಶಾಸಕರಾದ್ಮೇಲೆ ಶಿಷ್ಟವಾಗಿ ಮಾತಾಡಿ” ಎಂದು ಮನವಿ ಮಾಡಿದರು. ಆದರೆ ಶಾಸಕರ ಧ್ವನಿಯಲ್ಲಿ ಇನ್ನೂ ಕೋಪದ ಕಿಡಿ ಹಾಗೆಯೆ ಇತ್ತು.

“ನೀನು ನನ್ನನ್ನು ಪರಿಚಯವಿಲ್ಲ ಅಂತ ಹೇಳ್ತಿಯಾ? ನಾನು ಬೂಟಿನಿಂದ ಹೊಡೆಯುತ್ತೀನಿ. ನೀನು ಬೇಕಾದರೆ ಎಲ್ಲಿ ಬೇಕಾದರೂ ದೂರು ಕೊಡು. ಇದೊಂದು ವರ್ಗಾವಣೆಯಲ್ಲಿ ಮುಗಿಯಲ್ಲ… ನೀನು ಯಾವ ಊರವನು?” ಎಂದು ಪ್ರಶ್ನಿಸುತ್ತಿರುವ ಆಡಿಯೋದಲ್ಲಿ ಕೇಳಿಸುತ್ತದೆ.

ಆಡಳಿತ ವ್ಯವಸ್ಥೆಯ ಗೌರವ ಉಳಿಸಿದ ಕಾರ್ಯದರ್ಶಿ, ಶಾಸಕರ ಧ್ವನಿ ರೆಕಾರ್ಡ್ ಮಾಡಿ ದಾಖಲಿಸಿಕೊಂಡು, ಆ ಆಡಿಯೋ ಕ್ಲಿಪ್‌ ಸಹಿತವಾಗಿ ಪಟ್ನಾದ ಎಸ್ಸಿ/ಎಸ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News