ನಮ್ಮ ಮನೆಬಾಗಿಲಿಗೆ ಬಂದ ಯುದ್ಧವೆಂಬ ನಾಗರ!
PC: ANI
ಮಧ್ಯಪ್ರಾಚ್ಯ ಸಂಘರ್ಷ ಇಸ್ರೇಲ್, ಅಮೆರಿಕ, ಇರಾನ್‌ಗಷ್ಟೇ ಸೀಮಿತವಾಗಿ ಉಳಿದಿಲ್ಲ. ಅಮೆರಿಕದ ಲೆಕ್ಕಾಚಾರಗಳು ಬುಡಮೇಲಾಗಿವೆ. ಮಾನವೀಯತೆಯ ಎಲ್ಲ ಎಲ್ಲೆಗಳನ್ನು ಮೀರಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುತ್ತಿರುವಾಗ ಇರಾನ್ ಅಷ್ಟೇ ತೀವ್ರವಾಗಿ ಅದಕ್ಕೆ ಪ್ರತಿರೋಧಗಳನ್ನು ವ್ಯಕ್ತಪಡಿಸಿದೆ. ಹತ್ತು ಹಲವು ಪ್ರಮುಖ ನೇತಾರರನ್ನು ಕಳೆದುಕೊಂಡರೂ ಇರಾನ್‌ನ ಆತ್ಮವಿಶ್ವಾಸ ಕುಂದಿಲ್ಲ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆ ಪುಟ್ಟ ದೇಶ ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ನಿಧಾನಕ್ಕೆ ಯುದ್ಧ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳಿಗೆ ವಿಸ್ತರಿಸಿ ಭಾರತದ ಪಾದ ಬುಡದವರೆಗೂ ಆಗಮಿಸಿದೆ. ಭಾರತಕ್ಕೆ ಅತಿಥಿಯಾಗಿ ಬಂದ ಇರಾನ್‌ನ ಯುದ್ಧ ನೌಕೆಯನ್ನು ಮುಳುಗಿಸಿ ಭಾರತವನ್ನು ಮುಜುಗರಕ್ಕೆ ಸಿಲುಕಿಸಿತು. ಇದೀಗ ಯುದ್ಧದ ಪರಿಣಾಮವನ್ನು ಇಡೀ ಜಗತ್ತಿನ ಅಭಿವೃದ್ಧಿಶೀಲ ದೇಶಗಳು ಉಣ್ಣುವುದಕ್ಕೆ ಆರಂಭಿಸಿವೆ. ರಶ್ಯ, ಚೀನಾದಂತಹ ಪ್ರಬಲ ದೇಶಗಳು ಕದಡಿದ ನೀರಿನಲ್ಲಿ ಎಷ್ಟು ಮೀನು ಹಿಡಿಯಬಹುದು ಎಂದು ಲೆಕ್ಕಾಚಾರ ಹಾಕುತ್ತಿವೆೆ. ಯುದ್ಧದ ಸಾವುನೋವುಗಳನ್ನು ದೂರದಲ್ಲಿ ನಿಂತು ಸಂಭ್ರಮಿಸುತ್ತಿದ್ದವರು, ಆಸ್ವಾದಿಸುತ್ತಿದ್ದವರ ಒಳಗೂ ಇದೀಗ ಕಳವಳ ಎದ್ದಿದೆ. ಇತ್ತೀಚೆಗೆ ಅಮೆರಿಕದ ಸುಂಕಾಸ್ತ್ರದಿಂದ ತಲ್ಲಣಿಸಿ ಕೂತಿದ್ದ ಭಾರತದ ಉದ್ಯಮ ವಲಯ ಈ ಯುದ್ಧದಿಂದ ಕಂಗೆಟ್ಟಿದೆ. ಒಂದು ರೀತಿಯಲ್ಲಿ ಯುದ್ಧ ಭಾರತೀಯರ ಅಡುಗೆ ಮನೆಯೊಳಗೆ ಪ್ರವೇಶಿಸಿದೆ. ಶೇರುಮಾರುಕಟ್ಟೆ ಅಲ್ಲೋಲಕಲ್ಲೋಲವಾಗಿದ್ದು ಹೂಡಿಕೆದಾರರು ಮೂವತ್ತು ಲಕ್ಷ ಕೋಟಿ ರೂಪಾಯಿಯನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಭಾರತ ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾಗಿದ್ದು, ಭಾರತದ ಮೇಲೆ ಯುದ್ಧದ ಪರಿಣಾಮ ದಿನಕಳೆದಂತೆ ತೀವ್ರವಾಗಲಿದೆ. ಆದುದರಿಂದಲೇ, ಆರಂಭದಲ್ಲಿ ಮೌನ ವೀಕ್ಷಕನಾಗಿದ್ದ ಭಾರತ ಸರಕಾರ ಇದೀಗ ಅನಿವಾರ್ಯವಾಗಿ ಮೌನಮುರಿಯತೊಡಗಿದೆ.
ಇರಾನ್ ಸಂಪೂರ್ಣ ಸೋಲುವವರೆಗೆ ಯುದ್ಧ ಮುಂದುವರಿಸಲಾಗುವುದು ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಆದರೆ ಇರಾನ್ ಪ್ರತಿಯಾಗಿ ನಡೆಸುವ ದಾಳಿಯ ಪರಿಣಾಮವನ್ನು ಅಮೆರಿಕ, ಇಸ್ರೇಲ್ ಮಾತ್ರ ಅನುಭವಿಸುವುದಲ್ಲ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ ಈ ದಾಳಿಯಲ್ಲಿ ಒಳಗೊಳಗೆ ಗಾಯಗೊಳ್ಳಬೇಕಾಗುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಯು ಭಾರತದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಮುಖ್ಯವಾಗಿ ಈ ದಾಳಿ ತೀವ್ರವಾದರೆ, ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಿರುವ ಲಕ್ಷಾಂತರ ಅನಿವಾಸಿ ಭಾರತೀಯರು ಕೆಲಸ ಕಳೆದುಕೊಳ್ಳಬೇಕಾಗಬಹುದು. ಇದೇ ಸಂದರ್ಭದಲ್ಲಿ ತೈಲ ಪೂರೈಕೆಯ ಮೇಲೆ ಈಗಾಗಲೇ ದುಷ್ಪರಿಣಾಮಗಳಾಗಿವೆ. ಇರಾನ್‌ಗೆ ರಫ್ತಾಗುತ್ತಿರುವ ಅಕ್ಕಿ ಸೇರಿದಂತೆ ಭಾರತದ ಸರಕುಗಳಿಗೆ ಮಾರುಕಟ್ಟೆಯಿಲ್ಲದಂತಾಗಿದೆ. ಎಲ್‌ಪಿಜಿ ಬೇಡಿಕೆಯ ಸುಮಾರು ಶೇ. 90ರಷ್ಟನ್ನು ಆಮದು ಮಾಡಿಕೊಳ್ಳುವ ಭಾರತ, ಇದಕ್ಕಾಗಿ ಸೌದಿ, ಖತರ್, ಯುಎಇಯನ್ನು ನೆಚ್ಚಿಕೊಂಡಿದೆೆ. ಅಮೆರಿಕದ ದಾಳಿ ತೀವ್ರವಾಗುತ್ತಿದ್ದಂತೆಯೇ ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟೂ ತೀವ್ರವಾಗುತ್ತದೆ. ಅಮೆರಿಕದಂತಹ ಶ್ರೀಮಂತ ದೇಶಗಳು ಈ ಯುದ್ಧದ ಮೂಲಕ ಭಾರತದಂತಹ ದೇಶಗಳ ಮೇಲೆ ಪರೋಕ್ಷ ನಿಯಂತ್ರಣವನ್ನು ಸಾಧಿಸಲು ಯತ್ನಿಸುತ್ತಿವೆ. ಈ ಯುದ್ಧವು ಭವಿಷ್ಯದಲ್ಲಿ ದುರ್ಬಲ ದೇಶಗಳು ರಕ್ಷಣೆಗಾಗಿ ತಮ್ಮ ಹಣವನ್ನು ದೊಡ್ಡ ಮಟ್ಟದಲ್ಲಿ ವೆಚ್ಚ ಮಾಡಬೇಕಾಗಿ ಬರಬಹುದು. ಬಲಿಷ್ಠರು ಯಾವತ್ತು, ಹೇಗೆ ಬೇಕಾದರೂ ತಮ್ಮನ್ನು ಆಕ್ರಮಿಸಬಹುದು ಎನ್ನುವ ಆತಂಕ ಆಯುಧ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತದೆ.
ಸರಕಾರ ಭರವಸೆಗಳನ್ನು ನೀಡಿದ ಬಳಕವು ಎಲ್‌ಪಿಜಿ ವ್ಯತ್ಯಯ ಭಾರತದ ಉದ್ದಿಮೆಗಳ ಮೇಲೆ ಪರಿಣಾಮಗಳನ್ನು ಬೀರಿದೆೆ. ಮುಂಬೈಯಲ್ಲಿ ಶೇ. 20ರಷ್ಟು ಹೊಟೇಲುಗಳನ್ನು ಮುಚ್ಚುವ ಸಾಧ್ಯತೆಗಳಿವೆ ಎಂದು ಹೊಟೇಲ್ ಮಾಲಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ಹೊಟೇಲ್ ಉದ್ಯಮಿಗಳಲ್ಲಿ ಇದೇ ರೀತಿಯ ಕಳವಳ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 115 ರೂಪಾಯಿ ಹೆಚ್ಚಿಸಿರುವುದು ಹೊಟೇಲ್ ಉದ್ಯಮಕ್ಕೆ ದೊಡ್ಡ ಆಘಾತವನ್ನು ನೀಡಿದೆ. ಅದರ ಬೆನ್ನಿಗೇ ಸಿಲಿಂಡರ್ ಪೂರೈಕೆಯ ವ್ಯತ್ಯಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇವುಗಳ ನಡುವೆಯೇ, ‘ನೈಸರ್ಗಿಕ ಅನಿಲ ಸಾಗಾಟದಲ್ಲಿ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಂಡಿದ್ದೇವೆ’ ಎಂದು ಕೇಂದ್ರ ಸರಕಾರ ಸ್ಪಷ್ಟೀಕರಣ ನೀಡಿದೆ. ಮನೆ, ವಾಹನಗಳಿಗೆ ಎಲ್‌ಪಿಜಿ ಪೂರೈಕೆ ಶೇ. 100ರಷ್ಟು ಖಚಿತ ಎಂದು ಹೇಳಿರುವ ಸರಕಾರ, ಆದ್ಯತಾ ವಲಯಗಳಿಗೆ ಅವುಗಳ ಅವಶ್ಯಕತೆಯ ಶೇ. 100ರಷ್ಟು ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುತ್ತದೆ. ರಸಗೊಬ್ಬರ ಕಾರ್ಖಾನೆಗಳನ್ನು ದ್ವಿತೀಯ ಆದ್ಯತಾ ವಲಯವಾಗಿ ಪರಿಗಣಿಸಲಾಗಿದ್ದು, ಅವುಗಳಿಗೆ ಸರಾಸರಿ ಅಗತ್ಯದ ಶೇ. 70ರಷ್ಟು ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುವುದು ಎಂದು ಹೇಳಿದೆ. ಕೈಗಾರಿಕಾ ವಲಯದ ಗ್ರಾಹಕರು ಸರಾಸರಿ ಅವಶ್ಯಕತೆಯ ಶೇ. 80ರಷ್ಟು ಅಡುಗೆ ಅನಿಲವನ್ನು ಪಡೆಯಲಿದ್ದಾರೆ.
ದೇಶದ ಹಲವು ನಗರಗಳಲ್ಲಿ ಹೊಟೇಲ್ ಉದ್ಯಮಗಳು ಎಲ್‌ಪಿಜಿ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿದ್ದು ಈ ಹೊಟೇಲ್‌ಗಳು ಮುಚ್ಚಲ್ಪಟ್ಟರೆ ದೇಶದ ಮೇಲೆ ಇನ್ನೊಂದು ಲಾಕ್‌ಡೌನ್‌ನ್ನು ಹೇರಿದಂತಾಗಬಹುದು. ಇಂದು ಹೊಟೇಲ್‌ಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿವೆ. ಸುಮಾರು ಒಂದು ತಿಂಗಳ ಕಾಲ ಈ ಹೊಟೇಲ್‌ಗಳು ಮುಚ್ಚಿದ್ದೇ ಆದರೆ ಈ ಕಾರ್ಮಿಕರು ಬೀದಿಗೆ ಬೀಳಬೇಕಾಗುತ್ತದೆ ಮಾತ್ರವಲ್ಲ, ಹಲವು ಹೊಟೇಲ್‌ಗಳ ವ್ಯವಹಾರಗಳ ಮೇಲೆ ಇದು ತೀವ್ರ ಪರಿಣಾಮ ಬೀರಬಹುದು. ಹೆಚ್ಚಿನ ಸಂದರ್ಭದಲ್ಲಿ ಜನರಲ್ಲಿರುವ ಆತಂಕಗಳೇ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡುತ್ತದೆ. ಇಂತಹ ಬಿಕ್ಕಟ್ಟಿನ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕಾಳಸಂತೆಕೋರರು, ದುಷ್ಕರ್ಮಿಗಳು ಕಾದು ಕುಳಿತಿರುತ್ತಾರೆ. ನಗರಗಳಲ್ಲಿ ಈಗಾಗಲೇ ಎಲ್‌ಪಿಜಿ ಮತ್ತು ತೈಲಗಳ ಅಕ್ರಮ ದಾಸ್ತಾನು ಆರಂಭಗೊಂಡಿದೆ. ಕಾಳಸಂತೆಯಲ್ಲೂ ಕೆಲವರು ಮಾರಾಟಕ್ಕೆ ತೊಡಗಿದ್ದಾರೆ. ಕೃತಕ ಅಭಾವವನ್ನು ಸೃಷ್ಟಿಸಿ, ಜನರಿಗೆ ದುಬಾರಿ ಹಣಕ್ಕೆ ಮಾರಾಟ ಮಾಡುವ ದಂಧೆಯೂ ಆರಂಭಗೊಂಡಿದೆ. ಯುದ್ಧವಿನ್ನೂ ಆರಂಭವಾಗಿರುವುದಷ್ಟೇ. ಅಷ್ಟರಲ್ಲೇ ಭಾರತದ ಸ್ಥಿತಿ ಹೀಗಾದರೆ, ಯುದ್ಧ ಇನ್ನಷ್ಟು ಭೀಕರವಾಗುತ್ತಾ ಹೋದರೆ ಭಾರತದ ಗತಿ ಏನು? ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ‘ಫಾದರ್ ಲ್ಯಾಂಡ್’ನಿಂದಾಗಲಿ, ‘ಮೈ ಫ್ರೆಂಡ್ ಡೊಲಾಂಡ್’ ಅವರಿಂದಾಗಲಿ ಈ ದೇಶಕ್ಕೆ ನೆರವಿನ ಸಾಧ್ಯತೆಗಳೂ ಕಾಣುತ್ತಿಲ್ಲ. ರಶ್ಯದಿಂದ ಮೂವತ್ತು ದಿನಗಳ ಕಾಲ ತೈಲ ಕೊಂಡುಕೊಳ್ಳಲು ವಿನಾಯಿತಿ ನೀಡಿರುವುದೇ ಭಾರತಕ್ಕೆ ಅಮೆರಿಕ ಮಾಡಿರುವ ಬಹುದೊಡ್ಡ ಉಪಕಾರವಾಗಿದೆ. ಸದ್ಯಕ್ಕೆ ಮಧ್ಯಪ್ರಾಚ್ಯ ಸಂಘರ್ಷ ತಡೆಯಲು ಭಾರತ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಬೇಕು ಮಾತ್ರವಲ್ಲ, ಭಾರತದೊಳಗಿನ ಯುದ್ಧವನ್ನೂ ಗೆಲ್ಲಬೇಕು. ಕಾಳದಂಧೆಕೋರರ ಮೇಲೆ ನಿಗಾ ಇಡಬೇಕು. ದೇಶ ಬಿಕ್ಕಟ್ಟನ್ನು ಎದುರಿಸುವ ಈ ಸಂದರ್ಭದಲ್ಲಿ ನಮ್ಮೊಳಗಿನ ‘ದೇಶಪ್ರೇಮ’ ಜಾಗೃತಗೊಳ್ಳಬೇಕು. ಅನಗತ್ಯವಾಗಿ ಎಲ್‌ಪಿಜಿ, ತೈಲಗಳನ್ನು ದಾಸ್ತಾನು ಮಾಡಿಡುವ ದುರಾಸೆಗೆ ಜನಸಾಮಾನ್ಯರು ಈಡಾಗದೆ ಪರಸ್ಪರ ನೆರವಾಗುವುದು, ಒಬ್ಬರಿಗೊಬ್ಬರು ಆಸರೆಯಾಗುವುದೇ ದೇಶಪ್ರೇಮದ ಲಕ್ಷಣವಾಗಿದೆ. ಅನಗತ್ಯ ಆತಂಕ, ವದಂತಿಗಳಿಗೆ ಬಲಿಯಾಗದೆ ಸಹಕಾರ ಮನೋಭಾವದೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಿದಾಗ ಈ ಮಾತ್ರ ಈ ಯುದ್ಧಕಾಲವನ್ನು ಭಾರತೀಯರಾದ ನಾವು ಗೆಲ್ಲಬಹುದಾಗಿದೆ.