×
Ad

ನಂತೂರು ಜಂಕ್ಷನ್‌ಗೆ ಹೊಸ ರೂಪ ; ಅಪಘಾತ ನಿಯಂತ್ರಣಕ್ಕೆ ಸಂಚಾರಿ ಪೊಲೀಸರ ಪ್ರಸ್ತಾವ

Update: 2026-02-28 14:40 IST

ಮಂಗಳೂರು, ಫೆ. 27: ಅಪಘಾತ ವಲಯವಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ, ಅವೈಜ್ಞಾನಿಕ ವೃತ್ತವೆಂದೇ ಬಿಂಬಿಸಲ್ಪಟ್ಟಿರುವ ನಂತೂರು ಜಂಕ್ಷನ್‌ಗೆ ಹೊಸ ರೂಪ ನೀಡಲು ಮಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಮಂಗಳೂರು ಹಾಗೂ ಎನ್‌ಎಚ್‌ಎಐ ಅಧಿಕಾರಿಗಳ ಜತೆ ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಿ ಜಂಕ್ಷನ್‌ನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವವೊಂದು ಸಿದ್ಧಗೊಂಡಿದೆ.

ಮಂಗಳೂರು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಅಧ್ಯಕ್ಷತೆಯಲ್ಲಿ ಶನಿವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ನಂತೂರು ವೃತ್ತದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಸಮುದಾಯದ ಯುವತಿಯ ಸಾವಿನ ಬಗ್ಗೆ ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಡಿಸಿಪಿ ರವಿಶಂಕರ್ (ಸಂಚಾರ ಮತ್ತು ಅಪರಾಧ) ಈ ಕುರಿತು ಮಾಹಿತಿ ನೀಡಿದರು.

ನಂತೂರು ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ಅಪಘಾತಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಎಂಡಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎನ್‌ಎಚ್‌ಎಐ ನಿರ್ದೇಶಕರಿಗೆ ಜಂಕ್ಷನ್ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ನಂತೂರು ಜಂಕ್ಷನ್ ಪ್ರದೇಶವನ್ನು ಸಮತಟ್ಟುಗೊಳಿಸುವುದು, ಜಂಕ್ಷನ್ ಜಾಗ ದ್ವೀಪದಂತಿರುವ ಕಾರಣ ಬೆಂಗಳೂರಿನಿಂದ ಬರುವ ವಾಹನ ಬಲಗಡೆ ತಿರುಗುವ ವೇಳೆ ಟ್ರಾಫಿಕ್ ದಟ್ಟನೆವಾಗುತ್ತದೆ. ಆ ದ್ವೀಪವನ್ನು ತೆರವುಗೊಳಿಸಿ ಸಿಗ್ನಲ್ ಅಳವಡಿಸುವುದು. ಮಂಗಳೂರು ನಗರದಿಂದ ಕೆಪಿಟಿ ಕಡೆ ಹೋಗುವ ರಸ್ತೆಯಲ್ಲಿ ಫ್ರೀ ಲೆಫ್ಟ್ ಪ್ರದೇಶದಲ್ಲಿ ಅಗಲೀಕರಣಗೊಳಿಸುವುದು. ಈ ಮೂಲಕ ನಾಲ್ಕು ಕಡೆಯೂ ಫ್ರೀ ಲೆಪ್ಟ್ ಮಾಡಿದಾಗ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಪ್ರಸ್ತಾವಿಸಲಾಗಿದೆ.

ಇತ್ತೀಚೆಗೆ ಅಪಘಾತವಾದ ಪ್ರದೇಶದ ಬಸ್‌ನಿಲ್ದಾಣ ಹಿಂಬದಿ ಪಾಲಿಕೆ ಜಾಗ ಇದೆ. ಹಾಗಾಗಿ ಬಸ್ ನಿಲ್ದಾಣವನ್ನು ಎಂಟಡಿ ಹಿಂದಕ್ಕೆ ಹಾಕಿ ಬಸ್‌ಲೇನ್ ಮಾಡುವುದು. ಪಾದಾಚಾರಿಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವ ಕುರಿತಂತೆಯೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಸದ್ಯ ಈ ಪ್ರಸ್ತಾವನೆ ಪ್ರಕ್ರಿಯೆ ನಡೆಯುತ್ತಿದ್ದು, ಸ್ಮಾರ್ಟ್ ಸಿಟಿಯಿಂದ ಸಿಗ್ನಲ್ ಅಳವಡಿಕೆ ಕಾರ್ಯ ನಡೆಯಲಿದ್ದು, ಎಂಸಿಸಿಯಿಂದ ಬಸ್‌ಲೇನ್ ಹಾಗೂ ಫ್ರೀಲೆಫ್ಟ್ ವ್ಯವಸ್ಥೆ ಹಾಗೂ ಉಳಿದ ಕಾರ್ಯ ಎನ್‌ಎಚ್‌ಐಯಿಂದ ಆಗಬೇಕಿದೆ. ಜಂಕ್ಷನ್‌ನಲ್ಲಿ ಎರಡು ಹೈಮಾಸ್ಕ್ ಅಳವಡಿಕೆಗೂ ಪ್ರಸ್ತಾವ ಮಾಡಲಾಗಿದೆ. ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆಯೂ ನಡೆದಿದೆ ಎಂದು ಡಿಸಿಪಿ ರವಿಶಂಕರ್ ಮಾಹಿತಿ ನೀಡಿದರು.

ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ದಲಿತ ಮುಖಂಡ ಎಸ್.ಪಿ. ಆನಂದ್, ನಗರದಲ್ಲಿ ಖಾಸಗಿ ವಾಹನಗಳು ಬೇಕಾಬಿಟ್ಟಿಯಾಗಿ ಓಡುತ್ತಿರುವ ಪರಿಣಾಮ ನಂತೂರು ಬಳಿ ಇತ್ತೀಚೆಗೆ ಸಮುದಾಯದ ಯುವತಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಲ್ಲಿ ಇಂತಹ ಹಲವು ಅಪಘಾತಗಳು ನಡೆದಿವೆ. ಇದಲ್ಲದೆ, ಬಸ್ಸಿನಲ್ಲಿ ಸೌಂಡ್ಸ್ ಸಿಸ್ಟಮ್ ಬಳಕೆ, ಓವರ್ ಸ್ಪೀಡ್, ಬಸ್ಸುಗಳಿಗೆ ಬಾಗಿಲು ಅಳವಡಿಸುವ ಬಗ್ಗೆಯೂ ಬಸ್ಸು ಮಾಲಕರ ಸಂಘದ ಪ್ರತಿನಿಧಿಗಳು ಹಾಗೂ ಬಸ್ಸು ಚಾಲಕರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ 958 ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. 15 ವರ್ಷಗಳ ಹಿಂದಿನ ಪರವಾನಿಗೆ ಆಧಾರದಲ್ಲಿ ಈ ಬಸ್ಸುಗಳ ಸಂಚಾರವಿದೆ. ಕಾಲಮಿತಿಯಡಿ ಬಸ್ಸುಗಳ ಸಂಚಾರದಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಬಸ್ಸು ಮಾಲಕರು ಹಾಗೂ ಚಾಲಕರ ಸಭೆ ಕರೆಸಿ ಜಾಗೃತಿಯ ಕಾರ್ಯ ನಡೆಸಲಾಗುತ್ತಿದ್ದು, ಮತ್ತೆ ಈ ಕಾರ್ಯ ನಡೆಸುವುದಾಗಿ ಡಿಸಿಪಿ ರವಿಶಂಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News