×
Ad

ತನ್ನ ಪಕ್ಷವನ್ನು ಶುಚಿಗೊಳಿಸಲು ಕೇಜ್ರಿವಾಲ್ ಕಸಬರಿಕೆ ಬಳಸಲಿ

Update: 2026-03-04 07:40 IST

PC: x.com/ArvindKejriwal

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2025ರಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅರವಿಂದ ಕೇಜ್ರಿವಾಲ್ ಪಾಲಿಗೆ ತಡವಾಗಿ ಹೊರ ಬಿದ್ದಿದೆ. ಅಬಕಾರಿ ಹಗರಣದಲ್ಲಿ ತನಗೂ, ತನ್ನ ಸಹೋದ್ಯೋಗಿಗಳಿಗೂ ಸಿಕ್ಕಿದ ಕ್ಲೀನ್ ಚಿಟ್‌ನಿಂದ ಅವರು ತಕ್ಷಣಕ್ಕೆ ನಿರಾಳರಾಗಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆ ಮತ್ತು ಆರೋಪ ಪಟ್ಟಿಯಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ 23 ಜನರನ್ನು ಖುಲಾಸೆಗೊಳಿಸಿ ರೌಸ್ ಅವೆನ್ಯೂ ನ್ಯಾಯಾಲಯ ಕಳೆದ ಶುಕ್ರವಾರ ಆದೇಶ ಪ್ರಕಟಿಸಿದೆ. ಪರೋಕ್ಷವಾಗಿ ನ್ಯಾಯಾಲಯವೇ ‘ಇದೊಂದು ಪಿತೂರಿ’ ಎಂದು ಕರೆದಿರುವುದು ತನಿಖಾ ಸಂಸ್ಥೆಗಷ್ಟೇ ಅಲ್ಲದೆ ಕೇಂದ್ರ ಸರಕಾರಕ್ಕೂ ನೀಡಿದ ತಪರಾಕಿಯಾಗಿದೆ. ಕಳೆದ ಚುನಾವಣೆಯಲ್ಲಿ ಆಪ್ ಪಕ್ಷವನ್ನು ಸೋಲಿಸಲು ತನಿಖಾ ಸಂಸ್ಥೆಯು ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎನ್ನುವ ಆರೋಪಕ್ಕೆ ನ್ಯಾಯಾಲಯದ ಆದೇಶ ಪುಷ್ಟಿ ನೀಡುವಂತಿದೆ.

‘‘ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲದೆ ಕೇಜ್ರಿವಾಲ್ ಅವರ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ಅವರು ದೋಷಿ ಎಂದು ಹೇಳುವ ಯಾವುದೇ ಪುರಾವೆಗಳಿಲ್ಲ ’’ ಎಂದಿರುವ ನ್ಯಾಯಾಲಯ, ಸಿಸೋಡಿಯಾ ಪ್ರಕರಣದಲ್ಲೂ ಇದೇ ಅಂಶವನ್ನು ಎತ್ತಿ ಹಿಡಿದು ಖುಲಾಸೆಗೊಳಿಸಿದೆ. ಈ ಹಗರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ಸುಮಾರು 56 ದಿನಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದರೆ, ಸಿಸೋಡಿಯಾ 530ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನೇರಾ ನೇರ ಸ್ಪರ್ಧೆ ಬಿಜೆಪಿಯಿಂದಾಗಿರಲಿಲ್ಲ, ವಿವಿಧ ತನಿಖಾ ಸಂಸ್ಥೆಗಳ ಜೊತೆಗೆ ಅದು ಗುದ್ದಾಡಬೇಕಾಗಿತ್ತು. ಆಮ್ ಆದ್ಮಿ ಪಕ್ಷವು ತನ್ನ ಮೇಲಿರುವ ಆರೋಪಗಳಿಂದ ಕಳಚಿಕೊಳ್ಳಲು ಒದ್ದಾಡುತ್ತಿರುವಾಗ ಇತ್ತ ಬಿಜೆಪಿ ದಿಲ್ಲಿಯನ್ನು ಸಲೀಸಾಗಿ ಬಗಲಿಗೆ ಹಾಕಿಕೊಂಡಿತು. ಹಾಗೆಂದು ಪ್ರಕರಣದಲ್ಲಿ ಕೇಜ್ರಿವಾಲ್ ಪೂರ್ಣ ಪ್ರಮಾಣದಲ್ಲಿ ಅಮಾಯಕರು ಎಂದು ಹೇಳಿಕೊಳ್ಳುವಂತೇನೂ ಇಲ್ಲ. ದಿಲ್ಲಿ ಸರಕಾರವು 2021ರಲ್ಲಿ ಪರಿಷ್ಕೃತ ಅಬಕಾರಿ ನೀತಿಯನ್ನು ಪರಿಚಯಿಸಿದ್ದು ಯಾವುದೇ ಸುಧಾರಣೆಯ ಉದ್ದೇಶದಿಂದಲ್ಲ. ಈ ನೀತಿಯು ಅಬಕಾರಿ ಉದ್ಯಮದಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಿತ್ತು. ಅಬಕಾರಿ ಉದ್ಯಮದೊಂದಿಗೆ ಬೇರೆ ಬೇರೆ ಶಕ್ತಿಗಳು ಶಾಮೀಲಾಗಲು ಸಾಧ್ಯವಾಯಿತು. ಆಪ್ ಪಕ್ಷಕ್ಕೆ ಅಪಾರ ಪ್ರಮಾಣದ ಹಣ ಹರಿದು ಬರುವುದಕ್ಕೂ ಈ ನೀತಿ ಕಾರಣವಾಯಿತು ಎನ್ನುವ ಆರೋಪಗಳಿವೆ. ಇಲ್ಲಿ ನಡೆದ ಅಕ್ರಮಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಸರಕಾರ ಈ ನೀತಿಯನ್ನು ಹಿಂದೆಗೆದುಕೊಂಡಿತು. ಆದರೆ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದರು. ದಿಲ್ಲಿಯಲ್ಲಿ ಆಪ್‌ನ್ನು ಬಗ್ಗು ಬಡಿಯಲು ಈ ಹಗರಣವನ್ನು ಕೇಂದ್ರ ಸರಕಾರ ಬಳಸಿಕೊಂಡಿತು ಎನ್ನುವುದು ಸ್ಪಷ್ಟ. ಆದರೆ ಇದೇ ಸಂದರ್ಭದಲ್ಲಿ, ಬಿಜೆಪಿಯ ಆಡಳಿತವಿರುವ ರಾಜ್ಯಗಳ ಹಗರಣಗಳ ಕುರಿತಂತೆ ಕೇಂದ್ರ ಕಣ್ಣಿದ್ದು ಕುರುಡಾಯಿತು. ಮಧ್ಯಪ್ರದೇಶದ ವ್ಯಾಪಂ ಹಗರಣ, ಗುಜರಾತ್‌ನ ಪೋಂಜಿ ಸ್ಕೀಂ, ಚುನಾವಣಾ ಬಾಂಡ್ ಹಗರಣ, ರಫೇಲ್ ಹಗರಣ, ಅದಾನಿ ಹಗರಣ, ಪಿಎಂ ಕೇರ್ಸ್‌ ಫಂಡ್, ನೀಟ್ ಪೇಪರ್ ಸೋರಿಕೆ, ಕೊರೋನ ಅಕ್ರಮಗಳು ಇವೆಲ್ಲವುಗಳಿಗೆ ಸಂಬಂಧಿಸಿ ಯಾವುದೇ ರಾಜಕಾರಣಿ ಜೈಲು ಪಾಲಾಗಿಲ್ಲ. ಹೀಗಿರುವಾಗ, ಮದ್ಯ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯನ್ನು ನೇರ ಆರೋಪಿಯಾಗಿ ತನಿಖಾ ಸಂಸ್ಥೆ ಬಂಧಿಸಲು ಮುಂದಾದದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿತ್ತು. ಇದೀಗ ಹಗರಣದಿಂದ ಬಿಡಿಸಿಕೊಂಡರೂ ಕೇಜ್ರಿವಾಲ್ ನಾಯಕತ್ವದ ಮೇಲೆ ಅದು ಅಳಿಸಲಾಗದಷ್ಟು ಮಸಿ ಬಳಿದಿದೆ.

ನ್ಯಾಯಾಲಯದ ತೀರ್ಪು ಹೊರ ಬಿದ್ದದ್ದೇ ಮತ್ತೆ ಕೇಜ್ರಿವಾಲ್ ಕಸಬರಿಕೆ ಕೈಗೆತ್ತಿಕೊಂಡಿದ್ದಾರೆ. ‘‘ಈಗ ಚುನಾವಣೆ ನಡೆದರೆ ಬಿಜೆಪಿ 10 ಸ್ಥಾನವನ್ನೂ ಪಡೆದುಕೊಳ್ಳುವುದಿಲ್ಲ’’ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ಈ ಪ್ರಕರಣದಿಂದ ಖುಲಾಸೆಗೊಂಡಿರುವುದು ಅವರನ್ನು ರಾಜಕೀಯದಲ್ಲಿ ಸಕ್ರಿಯವಾಗುವುದಕ್ಕೆ ಸಹಾಯ ಮಾಡಬಹುದು. ಆದರೆ ದಿಲ್ಲಿಯನ್ನು ಕಳೆದುಕೊಳ್ಳಲು ಈ ಹಗರಣವಷ್ಟೇ ಕಾರಣವಾಗಿತ್ತೆ? ಆಡಳಿತದಲ್ಲಿ ಕೇಜ್ರಿವಾಲ್ ಹತ್ತು ಹಲವು ಸುಧಾರಣೆಗಳನ್ನು ಮಾಡಿದ್ದರು ನಿಜ. ಆದರೆ ರಾಜಕೀಯವಾಗಿ ಅವರ ಸಿದ್ಧಾಂತದ ಬಗ್ಗೆ, ಸಂವಿಧಾನದ ಆಶಯಗಳ ಅನುಷ್ಠಾನದ ಬದ್ಧತೆಯ ಬಗ್ಗೆ ಜನರಲ್ಲಿ ಅನುಮಾನಗಳು ಎದ್ದಿದ್ದವು. ದಿಲ್ಲಿಗಲಭೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಅವರ ಆಡಳಿತ ಪ್ರತಿಕ್ರಿಯಿಸಿದ ರೀತಿ ಅಲ್ಪಸಂಖ್ಯಾತರನ್ನು ರೊಚ್ಚಿಗೆಬ್ಬಿಸಿತ್ತು. ಕೇಜ್ರಿವಾಲ್ ಮೃದು ಹಿಂದುತ್ವವಾದವನ್ನು ಆಡಳಿತದಲ್ಲಿ ಪಾಲಿಸಿಕೊಂಡು ಬಂದರು. ಕೆಲವು ಜನಪ್ರಿಯ ಯೋಜನೆಗಳನ್ನು ಅವರು ಜಾರಿಗೊಳಿಸಿದರಾದರೂ ರಸ್ತೆ, ಒಳಚರಂಡಿಯಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಜನರಲ್ಲಿ ಅಸಮಾಧಾನವಿತ್ತು. ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಯ ಬಗ್ಗೆ ಪಕ್ಷದೊಳಗೇ ಅಸಮಾಧಾನವಿತ್ತು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆಪ್ ಗೆಲ್ಲು ವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದು ಹಿನ್ನಡೆಗೆ ಬಹುದೊಡ್ಡ ಕಾರಣವಾಯಿತು.

ನ್ಯಾಯಾಲಯ ನೀಡಿದ ಆದೇಶದ ಪ್ರತಿಯನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಗೆಲ್ಲುವುದು ಕಷ್ಟ. ಚುನಾವಣೆಯ ಹೊತ್ತಿಗೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಇನ್ನೊಂದು ಪ್ರಕರಣದಲ್ಲಿ ಕೇಜ್ರಿವಾಲ್ ತಂಡವನ್ನು ಸಿಲುಕಿಸುವುದು ಕೇಂದ್ರ ಸರಕಾರಕ್ಕೆ ಕಷ್ಟವೇನೂ ಇಲ್ಲ. ತನ್ನ ಪಕ್ಷಕ್ಕೆ ಮಾತ್ರವಲ್ಲ, ವೈಯಕ್ತಿಕವಾಗಿ ತನಗೆ ಒದಗಿರುವ ಸೋಲನ್ನು ಸ್ವೀಕರಿಸಿ ಕೇಜ್ರಿವಾಲ್ ಆತ್ಮವಿಮರ್ಶೆಗಿಳಿಯಬೇಕು. ನ್ಯಾಯಾಲಯ ನೀಡಿದ ತೀರ್ಪು ಏನೇ ಇರಲಿ, ಅಕ್ರಮ ಮದ್ಯ ನೀತಿಯಲ್ಲಿ ತಾನು ಎಲ್ಲಿ, ಹೇಗೆ ಎಡವಿದ್ದೇನೆ ಎನ್ನುವುದನ್ನು ಅರಿತುಕೊಂಡು ಪಕ್ಷವನ್ನು ಮುನ್ನಡೆಸಬೇಕು. ದಿಲ್ಲಿಯಲ್ಲಿ ಪಕ್ಷವನ್ನು ಮತ್ತೆ ಹೊಸದಾಗಿ ಕಟ್ಟುವುದಕ್ಕೆ ಅವರು ಸಿದ್ಧವಾಗಬೇಕು. ಆಪ್‌ನ ಬಗ್ಗೆ ಯುವ ತಲೆಮಾರು ಬಹಳಷ್ಟು ನಿರೀಕ್ಷೆಗಳನ್ನಿಟ್ಟಿತ್ತು. ಇಂದು ಆಪ್ ಅವೆಲ್ಲವನ್ನು ಕಳೆದುಕೊಂಡಿದೆ. ಆ ನಿರೀಕ್ಷೆಗಳನ್ನು ಮತ್ತೆ ಸಂಪಾದಿಸಿಕೊಳ್ಳುವ ಅಗತ್ಯವಿದೆ. ಕಾರ್ಪೊರೇಟ್‌ಶಕ್ತಿಗಳು ಮತ್ತು ಕೋಮುವಾದಿ ಶಕ್ತಿಗಳು ಜಂಟಿಯಾಗಿ ದೇಶವನ್ನು ನಿಯಂತ್ರಿಸುತ್ತಿರುವ ಈ ದಿನಗಳಲ್ಲಿ ಅವುಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಜಾತ್ಯತೀತ ಮತಗಳು ಒಡೆದು ಹೋಗದಂತೆ ಇತರ ಪಕ್ಷಗಳ ಜೊತೆಗೆ ಮೈತ್ರಿಗೆ ಪಕ್ಷವನ್ನು ತೆರೆದುಕೊಳ್ಳಬೇಕು. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಬಿಜೆಪಿ ಜನಪ್ರಿಯತೆಯನ್ನು ಕಳೆದುಕೊಂಡಿದೆ. ದಿಲ್ಲಿ ಸ್ಫೋಟ, ಹೆಚ್ಚುತ್ತಿರುವ ಮಾಲಿನ್ಯ ಇತ್ಯಾದಿಗಳಿಂದಾಗಿ ಹೆಸರು ಕೆಡಿಸಿಕೊಂಡಿದೆ. ಕೇಜ್ರಿವಾಲ್ ಜಾರಿಗೆ ತಂದ ಕೆಲವು ಜನಪ್ರಿಯ ಯೋಜನೆಗಳಿಗೆ ಮೊರೆ ಹೋಗುವ ಸ್ಥಿತಿ ಬಿಜೆಪಿ ಸರಕಾರಕ್ಕೆ ನಿರ್ಮಾಣವಾಗಿದೆ. ಇವೆಲ್ಲವನ್ನು ಪೂರಕವಾಗಿ ಬಳಸಿಕೊಂಡು ಕೇಜ್ರಿವಾಲ್ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಬೇಕು. ಪಕ್ಷದ ಚಿಹ್ನೆಯಾಗಿರುವ ಕಸಬರಿಕೆಯನ್ನು ಮೊದಲು ತನ್ನ ಪಕ್ಷವನ್ನು ಸ್ವಚ್ಛಗೊಳಿಸಲು ಕೇಜ್ರಿವಾಲ್ ಬಳಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News