ಇರಾನ್ ವಿರುದ್ಧದ ಯುದ್ಧದಲ್ಲಿ ಆರಂಭದಲ್ಲೇ ಸೋತ ಅಮೆರಿಕ
Photo credit: PTI
ಮಹಾಭಾರತ ಮಹಾಕಾವ್ಯದಲ್ಲಿ ಅಶ್ವತ್ಥಾಮನ ಪಾತ್ರವೊಂದು ಬರುತ್ತದೆ. ಈತ ಗುರು ದ್ರೋಣಾಚಾರ್ಯರ ಪುತ್ರ. ಹುಟ್ಟುತ್ತಲೇ ದೈವಿಕ ಮಣಿಯನ್ನು ಹೊತ್ತುಕೊಂಡು ಬಂದಿದ್ದ, ಈತ ಶಿವನ ಅಂಶವೆಂದೇ ನಂಬಲಾದ ಚಿರಂಜೀವಿ. ಆದರೆ ಯುದ್ಧದ ಕ್ರೌರ್ಯ ಒಬ್ಬ ಮಹಾ ಯೋಧನನ್ನು ಎಂತಹ ದುರಂತದೆಡೆಗೆ ತಳ್ಳಬಹುದು ಎನ್ನುವುದಕ್ಕೆ ಅಶ್ವತ್ಥಾಮನ ಪಾತ್ರ ಒಂದು ರುದ್ರರೂಪಕವಾಗಿದೆ. ಮಹಾಭಾರತ ಯುದ್ಧ ಭೀಕರ ಸ್ವರೂಪ ಪಡೆಯುತ್ತಿದ್ದಂತೆಯೇ ಯುದ್ಧದಲ್ಲಿ ಹೇಗಾದರೂ ಗೆಲ್ಲಲೇಬೇಕು ಎನ್ನುವ ಆತುರ ಈತನ ಕೈಯಲ್ಲಿ ಎಳೆ ಮಕ್ಕಳ ಕಗ್ಗೊಲೆಗಳನ್ನು ಮಾಡಿಸುತ್ತದೆ. ಮಧ್ಯ ರಾತ್ರಿ ಪಾಂಡವರ ಡೇರೆಗೆ ನುಗ್ಗಿ ಪಾಂಡವರೆಂದು ಬಗೆದು ಅವರ ಎಲ್ಲ ಮಕ್ಕಳನ್ನು ಕೊಂದು ಹಾಕುತ್ತಾನೆ. ಈ ಕೃತ್ಯ ಈತನಿಗೆ ಅಳಿಸಲಾಗದ ಕಳಂಕವನ್ನು ಉಂಟು ಮಾಡುತ್ತದೆ. ಯಾವ ದುರ್ಯೋಧನನಿಗಾಗಿ ಈ ಕೃತ್ಯ ಎಸಗುತ್ತಾನೋ ಆ ದುರ್ಯೋಧನನೇ ಅಶ್ವತ್ಥಾಮನನ್ನು ನಿಂದಿಸುತ್ತಾರೆ. ಆತ ಹುಟ್ಟಿನಿಂದ ಪಡೆದು ಬಂದ ದೈವಿಕ ಮಣಿಯನ್ನು ಆ ಕಾರಣಕ್ಕಾಗಿ ಕಳೆದುಕೊಳ್ಳುತ್ತಾನೆ. ಮೈತುಂಬಾ ಗಾಯಗಳನ್ನು ಹೊತ್ತುಕೊಂಡು ಅಶ್ವತ್ಥಾಮ ಇಂದಿಗೂ ಈ ಭೂಮಿಯಲ್ಲಿ ಅಲೆಯುತ್ತಿದ್ದಾನಂತೆ. ಚಿರಂಜೀವಿಯಾಗಿ ಬದುಕುವುದು ಆತನ ಪಾಲಿಗೆ ಒಂದು ಶಾಪವಾಗಿ ಪರಿಣಮಿಸಿತು. ಸೋಫೋಕ್ಲಿಸ್‌ನ ಗ್ರೀಕ್ ರುದ್ರ ನಾಟಕದ ನಾಯಕಎಜಾಕ್ಸ್ ಅಥವಾ ಅಯಾಸ್‌ನ ದುರಂತವೂ ಇದೇ ಬಗೆಯದು. ಶತ್ರುಗಳೆಂದು ಆತ ಕತ್ತಲಲ್ಲಿ ನುಗ್ಗಿ ಅಮಾಯಕ ಪ್ರಾಣಿಗಳನ್ನು ತರಿದು ಹಾಕುತ್ತಾನೆ. ಒಬ್ಬ ವೀರ ಯೋಧನನ್ನು ಅತ್ಯಂತ ನಿಕೃಷ್ಟ ಮಟ್ಟಕ್ಕೆ ಇದು ಇಳಿಸುತ್ತದೆ. ಆ ಅವಮಾನವೇ ಆತನ ಅಂತ್ಯಕ್ಕೆ ಕಾರಣವಾಗುತ್ತದೆ. ಅಮೆರಿಕ ಜಾಗತಿಕವಾಗಿ ನಡೆಸುತ್ತಿರುವ ದಾಂಧಲೆಗಳು ಅಶ್ವತ್ಥಾಮ ಮತ್ತು ಅಯಾಸ್‌ನ ಪಾತ್ರಗ ದುರಂತವನ್ನು ಹೋಲುತ್ತಿವೆ. ತನ್ನ ಕೃತ್ಯದ ಮೂಲಕವೇ ಅದು ಜಾಗತಿಕವಾಗಿ ಒಂಟಿಯಾಗುತ್ತಾ ಹೋಗುತ್ತಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಯಾವಾಗ ಇರಾನ್‌ನ ಪ್ರಾಥಮಿಕ ಶಾಲೆಯ ಮೇಲೆ ಬಾಂಬ್ ದಾಳಿ ಮಾಡಿ 170 ವಿದ್ಯಾರ್ಥಿನಿಯರನ್ನು ಕೊಂದು ಹಾಕಿತೋ ಆಗಲೇ ಇರಾನ್ ವಿರುದ್ಧದ ಯುದ್ಧವನ್ನು ಸೋತಿದ್ದವು. ‘ಖಾಮಿನೈ ಆಡಳಿತದ ವಿರುದ್ಧ ಯುವಕರ ಪ್ರತಿಭಟನೆಯ ಜೊತೆಗಿದ್ದೇವೆ, ಇರಾನ್‌ನ ಮಹಿಳೆಯರ ಪರವಾಗಿದ್ದೇವೆ’ ಎನ್ನುವ ಅಮೆರಿಕದ ಸೋಗಲಾಡಿ ಮಾತುಗಳೆಲ್ಲ ಆ ಹತ್ಯಾಕಾಂಡದ ಜೊತೆಗೆ ನೆಗೆದು ಬಿದ್ದವು. ಇಂತಹದೊಂದು ಬರ್ಬರ ದಾಳಿಯನ್ನು ನಡೆಸಲು ಯಾವುದೇ ಉಗ್ರಗಾಮಿ ಸಂಘಟನೆಗಳೂ ಒಂದು ಕ್ಷಣ ಅಂಜಿ ಬಿಡುತ್ತಿತ್ತು. 2014ರಲ್ಲಿ ಅಮೆರಿಕ-ತಾಲಿಬಾನ್ ನಡುವೆ ಸಂಘರ್ಷ ತಾರಕ ತಲುಪಿದ್ದಾಗ ತಾಲಿಬಾನ್ ಉಗ್ರರು ಪಾಕಿಸ್ತಾನದ ಸೇನಾ ಶಾಲೆಯೊಂದರ ಮೇಲೆ ದಾಳಿ ನಡೆಸಿ 130 ಮಕ್ಕಳನ್ನು ಕೊಂದು ಹಾಕಿದ್ದರು. ಆ ಮಕ್ಕಳಿಗಾಗಿ ಇಡೀ ಜಗತ್ತು ಕಣ್ಣೀರಿಟ್ಟಿತ್ತು. ಆದರೆ ತನ್ನನ್ನು ತಾನು ಪ್ರಜಾಪ್ರಭುತ್ವದ ವಕ್ತಾರನೆಂದು ಕರೆಸಿಕೊಳ್ಳುವ ಅಮೆರಿಕ ನಡೆಸಿದ ಆ ಎಳೆ ಹೆಣ್ಣು ಮಕ್ಕಳ ಬರ್ಬರ ಹತ್ಯಾಕಾಂಡಕ್ಕೆ ತಾಲಿಬಾನ್‌ಗಳೂ ನಾಚಬೇಕು. ನಾಳೆ ಅಮೆರಿಕ ಇರಾನ್‌ನ ಮೇಲೆ ನಿಯಂತ್ರಣ ಪಡೆಯುವಲ್ಲಿ ಯಶಸ್ವಿಯಾದರೂ ಆಗಬಹುದು. ಆದರೆ, ಭಗ್ನಗೊಂಡು ಬಿದ್ದಿರುವ ಶಾಲೆ ಮತ್ತು ದಾಳಿಯಲ್ಲಿ ಬರ್ಬರವಾಗಿ ಕೊಲ್ಲಲ್ಪಟ್ಟಿರುವ ವಿದ್ಯಾರ್ಥಿನಿಯರ ರಕ್ತದಿಂದ ಅಮೆರಿಕಕ್ಕೆ ಮುಕ್ತಿಯಿಲ್ಲ. ಆದುದರಿಂದಲೇ, ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಸಹಿತ 40ಕ್ಕೂ ಅಧಿಕ ನಾಯಕರನ್ನು ಕೊಂದು ಹಾಕಿದ ಬಳಿಕವೂ ಇರಾನನ್ನು ಮಣಿಸಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ತನ್ನ ಗೆಲುವನ್ನು ಜಗತ್ತಿಗೆ ಸಾಬೀತು ಪಡಿಸುವ ಹತಾಶ ಪ್ರಯತ್ನದಲ್ಲಿ ಯುದ್ಧದ ಎಲ್ಲ ಅಂತರ್‌ರಾಷ್ಟ್ರೀಯ ನೀತಿಗಳನ್ನು ಅಮೆರಿಕದ ಉಲ್ಲಂಘಿಸುತ್ತಿದೆ. ಇರಾನ್ ಅಪಾರವಾದ ಭೌತಿಕ ನಾಶ, ನಷ್ಟವನ್ನು ಎದುರಿಸುತ್ತಿದೆಯಾದರೆ, ಅಮೆರಿಕ ಮತ್ತು ಇಸ್ರೇಲ್ ನೈತಿಕವಾಗಿ ಎಲ್ಲವನ್ನೂ ಕಳೆದುಕೊಂಡು ಜಗತ್ತಿನ ಮುಂದೆ ಬೆತ್ತಲೆಯಾಗಿ ನಿಂತಿವೆ. ಅಮೆರಿಕವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಮೌನವಹಿಸಿರುವ ದೇಶಗಳಿಗೂ ಅಮೆರಿಕದ ಪತನದ ಅರಿವಿದೆ. ಅಮೆರಿಕದ ವಿರುದ್ಧದ ಯುದ್ಧದಲ್ಲಿ ಇರಾನ್ ಒಂದು ಅರ್ಥದಲ್ಲಿ ಗೆದ್ದಿದೆ. ಅದು ಅಮೆರಿಕದ ಪೈಶಾಚಿಕ ಮುಖವನ್ನು ಜಗತ್ತಿನ ಮುಂದೆ ಬಹಿರಂಗ ಪಡಿಸಲು ಭಾಗಶಃ ಯಶಸ್ವಿಯಾಗಿದೆ.
ಇರಾನ್‌ನ ಯುದ್ಧ ತನ್ನ ಕೈ ಮೀರಿರುವುದು ಅಮೆರಿಕದ ಅರಿವಿಗೆ ಬಂದಿದೆ. 40ಕ್ಕೂ ಅಧಿಕ ನಾಯಕರ ಹತ್ಯೆಯು ಇರಾನ್‌ನಲ್ಲಿ ಆಂತರಿಕ ಅರಾಜಕತೆಯನ್ನು ಸೃಷ್ಟಿಸುತ್ತದೆ ಮತ್ತು ಹೊಸ ಸರಕಾರ ನಿರ್ಮಾಣಕ್ಕೆ ಆ ಅರಾಜಕತೆ ಸಹಾಯ ಮಾಡುತ್ತದೆ ಎಂಬ ಟ್ರಂಪ್‌ನ ಯೋಜನೆ ಬುಡಮೇಲಾಗಿದೆ. ಖಾಮಿನೈ ಆಡಳಿತದ ವಿರುದ್ಧ ವ್ಯಾಪಕ ಅಸಮಾಧಾನ ಹೊಂದಿರುವ ಇರಾನ್‌ನ ಯುವ ಸಮುದಾಯವೂ ಅಮೆರಿಕ ಎನ್ನುವ ರಾಕ್ಷಸನ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದೆ. ಖಾಮಿನೈ ನೇತೃತ್ವದ ಭ್ರಷ್ಟ ಆಡಳಿತಕ್ಕೆ ಅಮೆರಿಕ-ಇಸ್ರೇಲ್ ಪ್ರಾಯೋಜಿತ ಕ್ರೌರ್ಯ ಪರ್ಯಾಯವಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗಿದೆ. ಇದರಿಂದ ಹತಾಶೆಗೊಂಡಿರುವ ಅಮೆರಿಕ ಹೇಗಾದರೂ ಯುದ್ಧವನ್ನು ಮುಗಿಸಬೇಕು ಎಂಬ ಆತುರದಲ್ಲಿ ಇನ್ನಷ್ಟು ಅನಾಹುತಗಳನ್ನು ಮಾಡುತ್ತಿದೆ. ಅದರ ಪರಿಣಾಮವಾಗಿಯೇ ಹಿಂದೂ ಮಹಾಸಾಗರ ವಲಯದಲ್ಲಿ ಶ್ರೀಲಂಕಾ ಕರಾವಳಿಯಾಚೆಯ ಇರಾನ್‌ನ ‘ಐರಿಸ್ ದೇನಾ’ ನೌಕೆಯ ಮೇಲೆ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಈ ನೌಕಾಪಡೆಯು ಭಾರತದ ಅತಿಥಿಯಾಗಿ ಆಗಮಿಸಿತ್ತು. ಭಾರತದ ಕುರಿತಂತೆ ಒಂದಿಷ್ಟು ಗೌರವವಿದ್ದಿದ್ದರೆ ಅಮೆರಿಕವು ಈ ನೌಕೆಯ ಮೇಲೆ ದಾಳಿಯನ್ನು ನಡೆಸುತ್ತಿರಲಿಲ್ಲ. ಭಾರತದ ಪ್ರಾದೇಶಿಕ ವಿಶ್ವಾಸಾರ್ಹತೆಯ ಮೇಲೆ ಅಮೆರಿಕ ದಾಳಿ ನಡೆಸಿದೆ. ಈ ಮೂಲಕ ಯುದ್ಧವನ್ನು ಅಮೆರಿಕ ಭಾರತದ ಮನೆಬಾಗಿಲಿಗೇ ತಂದಿದೆ. ವಿಪರ್ಯಾಸವೆಂದರೆ, ಭಾರತವು ಇದರ ವಿರುದ್ಧ ಯಾವುದೇ ಖಂಡನಾ ಹೇಳಿಕೆಯನ್ನು ನೀಡುವ ಸ್ಥಿತಿಯನ್ನು ಹೊಂದಿಲ್ಲ. ಅಷ್ಟರಮಟ್ಟಿಗೆ ಅದು ಅಮೆರಿಕದ ನಿಯಂತ್ರಣದಲ್ಲಿದೆ. ಈಗಾಗಲೇ ಈ ದಾಳಿಯನ್ನು ಭಾರತದ ಹಿರಿಯ ನಿವೃತ್ತ ಸೇನಾಧಿಕಾರಿಗಳು ಖಂಡಿಸಿದ್ದಾರೆ.
ಈ ಯುದ್ಧಲ್ಲಿ ಭಾರತವು ಇರಾನ್ ಜೊತೆಗೆ ನಿಲ್ಲಬೇಕು ಎಂದು ಯಾರೂ ಒತ್ತಾಯಿಸುತ್ತಿಲ್ಲ. ಆದರೆ ಒಂದು ಶಾಲೆಗೆ ಬಾಂಬ್ ದಾಳಿ ನಡೆಸಿ 170ಕ್ಕೂ ಅಧಿಕ ಮಕ್ಕಳನ್ನು ಕೊಂದಾಗ ಅದನ್ನು ಖಂಡಿಸುವಷ್ಟು ನೈತಿಕ ಸಾಮರ್ಥ್ಯವನ್ನು ಭಾರತ ಉಳಿಸಿಕೊಳ್ಳಬೇಕು. ಭಾರತ ಅಂತಹದೊಂದು ಸಾಮರ್ಥ್ಯವನ್ನು ನೆಹರೂ, ಇಂದಿರಾಗಾಂಧಿಯ ಕಾಲದಿಂದ ಉಳಿಸಿಕೊಂಡು ಬಂದಿದೆ. ಆದರೆ ಮೊದಲ ಬಾರಿಗೆ ಭಾರತವು ನಾಲಗೆ ಕಳೆದುಕೊಂಡು ಜಗತ್ತಿನ ಮುಂದೆ ಅಸಹಾಯಕವಾಗಿ ನಿಂತಿದೆ. ಇದೇ ಸಂದರ್ಭದಲ್ಲಿ ತನ್ನ ದೇಶದ ಅತಿಥಿ ನೌಕೆಯನ್ನು ಜಲ ಪ್ರದೇಶ ತೊರೆದ ಕೆಲವೇ ಗಂಟೆಗಳಲ್ಲಿ ಮುಳುಗಿಸಿರುವುದನ್ನು ಪ್ರಶ್ನಿಸುವುದು ಸಾರ್ವಭೌಮ ದೇಶವಾಗಿ ಭಾರತಕ್ಕೆ ಅನಿರ್ವಾಯವಾಗಿತ್ತು. ಆ ಧೈರ್ಯವನ್ನೂ ಪ್ರದರ್ಶಿಸಿಲ್ಲ. ಆದರೆ ಅಮೆರಿಕ ತನ್ನ ಎಲ್ಲೆ ಮೀರುತ್ತಿರುವುದು ಕೊನೆಗೂ ಭಾರತ ಕಂಡುಕೊಂಡಿದೆ. ಪರಿಣಾಮವಾಗಿ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ವೈರಾಗ್ಯದ ಮಾತುಗಳನ್ನಾಡಿದ್ದಾರೆ ಮಾತ್ರವಲ್ಲ, ನಾಲ್ಕು ದಿನಗಳ ಬಳಿಕ ಖಾಮಿನೈ ಹತ್ಯೆಗೆ ಭಾರತ ಸಂತಾಪ ಸೂಚಿಸುವ ಎದೆಗಾರಿಕೆಯನ್ನು ಪ್ರದರ್ಶಿಸಿದೆ. ಅಷ್ಟರಮಟ್ಟಿಗೆ ಭಾರತ ಎಚ್ಚರಗೊಂಡಿದೆಯಲ್ಲ ಎಂದು ನಾವು ಸಂತೋಷ ಪಡಬೇಕಾಗಿದೆ. ನೆರೆ ಮನೆಯನ್ನು ಸುಟ್ಟ ಬೆಂಕಿಯ ಕಿಡಿ ಒಂದಲ್ಲ ಒಂದು ದಿನ ತನ್ನ ಮನೆಯನ್ನೂ ಸುಡಬಲ್ಲುದು ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡು ಈ ಯುದ್ಧದ ಸಂದರ್ಭದಲ್ಲಿ ಭಾರತ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ನೆಹರೂ ಕಾಲದಿಂದ ಭಾರತ ಉಳಿಸಿಕೊಂಡು ಬಂದ ಅಲಿಪ್ತ ವರ್ಚಸ್ಸನ್ನು ಕಾಪಾಡಿಕೊಳ್ಳಬೇಕು. ಅಲಿಪ್ತವಾಗಿರುವುದು ಎಂದರೆ ‘ಮೌನವಾಗಿರುವುದು’ ಅಲ್ಲ. ಸಮಯಸಾಧಕತನವೂ ಅಲ್ಲ. ಅಲಿಪ್ತವಾಗಿರುವುದೆಂದರೆ ನ್ಯಾಯಪರವಾಗಿರುವುದು.