×
Ad

ದಾಳಿಯಲ್ಲ, ಅಮೆರಿಕ ಪ್ರಾಯೋಜಿತ ಅಂತರ್‌ರಾಷ್ಟ್ರೀಯ ಭಯೋತ್ಪಾದನೆ!

Update: 2026-03-02 06:54 IST

Photo credit: PTI

 

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯು ಅಂತರ್‌ರಾಷ್ಟ್ರೀಯ ಭಯೋತ್ಪಾದನೆಗೆ ಸರಿಸಮಾನವಾಗಿದೆ. ಸಾರ್ವಭೌಮ ರಾಷ್ಟ್ರವೊಂದರ ಮೇಲೆ ಏಕಾಏಕಿ ಯುದ್ಧ ಸಾರಿ, ಅದರ ಸರ್ವೋಚ್ಚ ನಾಯಕನೂ ಸೇರಿದಂತೆ ಹಿರಿಯ ಸೇನಾಧಿಕಾರಿಗಳನ್ನು, ಮಾಜಿ ನಾಯಕರನ್ನು ಹತ್ಯೆಗೈದಿರುವುದನ್ನು ಈ ಎರಡೂ ರಾಷ್ಟ್ರಗಳು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿವೆ. ಸ್ವತಃ ಅಮೆರಿಕದೊಳಗಿಂದಲೇ ಇದರ ವಿರುದ್ಧ ಆಕ್ರೋಶವೆದ್ದಿವೆ. ರಶ್ಯ, ಚೀನಾ ಸೇರಿದಂತೆ ಅರ್ಧ ಜಗತ್ತು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಎಸಗುತ್ತಿರುವ ನರಮೇಧವನ್ನು ಖಂಡಿಸಿವೆ. ಅಮೆರಿಕದ ವಿರುದ್ಧ ವ್ಯಾಪಕವಾಗಿ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಹುಸೇನ್ ಖಾಮಿನೈ ಮತ್ತು ಅವರ ಸಹೋದ್ಯೋಗಿಗಳ ಹತ್ಯೆಯೊಂದಿಗೆ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ತನ್ನ ಮುಖದ ಮೇಲೆ ವಾಸಿಯಾಗದ ಗಾಯಗಳನ್ನು ಮಾಡಿಕೊಂಡಿದೆ. ಇರಾನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜಗತ್ತಿನಲ್ಲಿ ತನ್ನ ಏಕಸ್ವಾಮ್ಯವನ್ನು ಪ್ರತಿಪಾದಿಸಲು ಇಟ್ಟಿರುವ ಮೊದಲ ಹೆಜ್ಜೆಯೇ ಅದರ ಪಾಲಿಗೆ ಬಹಳ ದುಬಾರಿಯಾಗಲಿದೆ. ಈ ಯುದ್ಧ ಜಗತ್ತನ್ನು ಇನ್ನಷ್ಟು ನಾಶ ನಷ್ಟದೆಡೆಗೆ ಎಳೆದೊಯ್ಯುವ ಎಲ್ಲ ಸೂಚನೆಗಳು ಕಾಣುತ್ತಿವೆ. ಎರಡನೇ ಮಹಾಯುದ್ಧಕ್ಕೆ ಕಾರಣನಾದ ಸರ್ವಾಧಿಕಾರಿ ಹಿಟ್ಲರ್‌ನನ್ನೂ ಮೀರಿಸುವಂತಿರುವ ಟ್ರಂಪ್ ಕೃತ್ಯಗಳು ಮೂರನೇ ಮಹಾಯುದ್ಧಕ್ಕೆ ವೇದಿಕೆ ನಿರ್ಮಾಣ ಮಾಡುತ್ತಿರುವುದನ್ನು ಜಗತ್ತು ಅಸಹಾಯಕವಾಗಿ ನೋಡುತ್ತಿದೆ. ಈ ಯುದ್ಧವು ಅಮೆರಿಕ-ಇರಾನ್‌ಗಷ್ಟೇ ಸೀಮಿತವಾಗಿ ಉಳಿಯದೆ ಇದರ ನಾಶ ನಷ್ಟಗಳನ್ನು ಇಡೀ ಜಗತ್ತು ಅನುಭವಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಇರಾನ್‌ನ ವಿರುದ್ಧ ಯುದ್ಧ ಹೂಡಲು ಅಮೆರಿಕ-ಇಸ್ರೇಲ್ ನೀಡಿರುವ ಕಾರಣಗಳು ಸಮಯಸಾಧಕತನದಿಂದ ಕೂಡಿವೆ. ಒಂದು ರೀತಿಯಲ್ಲಿ ಕುರಿಯ ಮೇಲೆ ದಾಳಿ ನಡೆಸಲು ತೋಳ ಮುಂದಿಟ್ಟ ನೆಪಗಳಂತಿವೆ. ‘ಇರಾನ್ ಅಣ್ವಸ್ತ್ರ ತಯಾರಿಸುವ ತನ್ನ ಗುರಿಗೆ ತುಂಬಾ ಹತ್ತಿರವಿದೆ’ ಎನ್ನುವುದು ಮೊದಲ ನೆಪ. ಈ ‘ಅಣ್ವಸ್ತ್ರ ಗುಮ್ಮ’ನನ್ನು ತೋರಿಸಿ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಕಾಲು ಕೆರೆಯುತ್ತಿರುವುದು ಇಂದು ನಿನ್ನೆಯಲ್ಲ. 25 ವರ್ಷಗಳ ಹಿಂದೆಯೇ ಈ ಆರೋಪವನ್ನು ಮಾಡಿದ್ದು, ಬಳಿಕ ಪದೇ ಪದೇ ಈ ಹಾಡನ್ನು ಬೇರೆ ಬೇರೆ ರಾಗಗಳಲ್ಲಿ ಜಗತ್ತಿನ ಮುಂದಿಡುತ್ತಾ ಬಂದಿವೆೆ. ಈ ಆರೋಪವೇ ಇರಾನ್ ಮೇಲೆ ಬೇರೆ ಬೇರೆ ದಿಗ್ಬಂಧನ ಹೇರುವುದಕ್ಕೆ ಕಾರಣವಾಯಿತು. ಆದರೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಅಂತರ್‌ರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮುಖ್ಯಸ್ಥ ರಾಫೇಲ್ ಅವರು, ಇರಾನ್ ಅಣ್ವಸ್ತ್ರ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಶ್ರಮಿಸುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. ಕಳೆದ ವರ್ಷ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯ ಸಂದರ್ಭದಲ್ಲಿ ಇರಾನ್‌ನ ಅಣುಸ್ಥಾವರಗಳ ನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶ ಪಡಿಸಿದ್ದೇವೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಈಗಾಗಲೇ ಅಕ್ರಮವಾಗಿ ಅಣ್ವಸ್ತ್ರವನ್ನು ದಾಸ್ತಾನು ಮಾಡಿಕೊಂಡಿರುವ ಇಸ್ರೇಲ್ ಜೊತೆಗೆ ಸೇರಿ ಇರಾನ್‌ನ ಅಣ್ವಸ್ತ್ರ ತಯಾರಿ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎನ್ನುವ ಅಮೆರಿಕದ ಹೇಳಿಕೆಯೇ ಸಮಯಸಾಧಕತನದಿಂದ ಕೂಡಿರುವುದು. ಇಷ್ಟಕ್ಕೂ ಇರಾನ್‌ನ ಬಳಿ ಅಣ್ವಸ್ತ್ರಗಳು ಇಲ್ಲ ಎನ್ನುವುದು ಅರಿವಿದ್ದೇ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿಗಿಳಿದಿವೆ. ರಾಸಾಯನಿಕ ಶಸ್ತ್ರಾಸ್ತ್ರ ದಾಸ್ತಾನಿನ ನೆಪಗಳನ್ನು ಮುಂದಿಟ್ಟು ಈ ಹಿಂದೆ ಇರಾಕ್‌ನ ಮೇಲೆ ನಡೆಸಿದ ದಾಳಿಯ ಸವಕಲು ತಂತ್ರವನ್ನೇ ಮತ್ತೆ ಮತ್ತೆ ಬಳಸಿ ಜಗತ್ತನ್ನು ಮೂರ್ಖನನ್ನಾಗಿಸಲು ಮುಂದಾಗಿವೆ. ಒಂದು ವೇಳೆ ಇರಾನ್ ಅಣ್ವಸ್ತ್ರವನ್ನು ಹೊಂದಿದ್ದರೆ ಇಷ್ಟೊಂದು ಸಲೀಸಾಗಿ ಒಂದು ಸಾರ್ವಭೌಮ ದೇಶದ ಮೇಲೆ ದಾಳಿ ನಡೆಸಿ ಅದರ ನೇತಾರರನ್ನು ಹತ್ಯೆಗೈಯುವ ಧೈರ್ಯವನ್ನು ಅಮೆರಿಕ ಪ್ರದರ್ಶಿಸುತ್ತಿರಲಿಲ್ಲ.

ತೈಲ ಮಾರುಕಟ್ಟೆಯಲ್ಲಿ ಇರಾನ್ ಒಡ್ಡುತ್ತಿರುವ ಸ್ಪರ್ಧೆ, ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಗೆ ಅದು ತೋರುತ್ತಿರುವ ಪ್ರಬಲ ಪ್ರತಿರೋಧವೇ ಅಮೆರಿಕದ ಈ ದಾಳಿಗೆ ಮುಖ್ಯ ಕಾರಣ. ನಿರ್ಬಂಧಗಳ ಮೂಲಕ ವೆನೆಝುವೆಲಾದ ಆರ್ಥಿಕತೆಯನ್ನು ನಾಶ ಮಾಡಿದಂತೆಯೇ ಇರಾನ್‌ನ ಆರ್ಥಿಕತೆಯನ್ನು ನಾಶ ಮಾಡಲು ಗರಿಷ್ಠ ಪ್ರಯತ್ನವನ್ನು ಅಮೆರಿಕ ಮಾಡಿದೆ. ಇದು ಇರಾನ್‌ನ ಬೇರೆ ಬೇರೆ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇರಾನ್‌ನ ಆಡಳಿತದ ಬಗ್ಗೆ ಅಲ್ಲಿನ ಸ್ಥಳೀಯರು ರೋಸಿ ಹೋಗಿದ್ದರು. ಹೊಸ ತಲೆಮಾರು ಇರಾನ್ ಆಡಳಿತದ ವಿರುದ್ಧ ಪದೇ ಪದೇ ಬೀದಿಗಿಳಿದಿವೆಯಾದರೂ ಅದನ್ನು ನಿಷ್ಕರುಣೆಯಿಂದ ಅಲ್ಲಿನ ಸರಕಾರ ದಮನ ಮಾಡುತ್ತಾ ಬಂದಿರುವುದು ಕೂಡ ನಿಜ. ಯುವಜನರು ಇರಾನ್ ಆಡಳಿತದ ಬಗ್ಗೆ ಭ್ರಮ ನಿರಸನ ಹೊಂದಿರುವುದು ಸ್ಪಷ್ಟವಾಗಿತ್ತು. ಆದರೆ ಒಂದೆಡೆ ಇರಾನ್‌ನ್ನು ನುಂಗಲು ಅಮೆರಿಕ ಹೊಂಚು ಹಾಕಿ ಕಾಯುತ್ತಿತ್ತು. ದಂಗೆ ಎದ್ದರೆ ಅದರ ಲಾಭವನ್ನು ಅಮೆರಿಕ ಪಡೆಯುತ್ತದೆ ಎನ್ನುವ ಆತಂಕವು ಇರಾನ್ ಜನತೆಯನ್ನು ಕಾಡುತ್ತಿತ್ತು. ಇದೀಗ ಇರಾನ್ ಮೇಲೆ ಅಮೆರಿಕ ನಡೆಸಿರುವ ಭೀಕರ ದಾಳಿಯು ಇರಾನ್ ಜನರನ್ನು ಒಂದಾಗುವಂತೆ ಮಾಡಿದೆ. ‘‘ನಾವು ನಿಮಗೆ ಸಹಾಯ ಮಾಡಿದ್ದೇವೆ. ನೀವು ಇರಾನ್ ಆಡಳಿತವನ್ನು ವಶಪಡಿಸಿಕೊಳ್ಳಿ’’ ಎಂದು ದಂಗೆಗೆ ಇಸ್ರೇಲ್ ಮತ್ತು ಅಮೆರಿಕ ಪದೇ ಪದೇ ಕರೆಕೊಡುತ್ತಿದ್ದರೂ ಇರಾನ್ ಜನತೆ ಅದಕ್ಕೆ ಸ್ಪಂದಿಸುತ್ತಿಲ್ಲ.

ತನ್ನ ಹಲವು ನಾಯಕರನ್ನು ಅಮೆರಿಕ ಬಲಿತೆಗೆದುಕೊಂಡಿದ್ದರೂ ಇರಾನ್ ಜಗ್ಗಿದಂತಿಲ್ಲ. ಪ್ರತಿಯಾಗಿ ಕೊಲ್ಲಿ ರಾಷ್ಟ್ರದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುತ್ತಿವೆ. ಇದು ಯುದ್ಧದ ಗತಿಯನ್ನು ಬದಲಿಸಿದೆ. ದುಬೈಯೊಳಗೆ ಇಡೀ ಜಗತ್ತು ತುಂಬಿಕೊಂಡಿದೆ. ಜಗತ್ತಿನ ಅತಿ ಸುರಕ್ಷಿತ ವಾಣಿಜ್ಯ ತಾಣವಾಗಿ ಗುರುತಿಸಿಕೊಂಡಿರುವ ದುಬೈ ಮೇಲೆ ಬೀಳುವ ಒಂದೊಂದು ಕ್ಷಿಪಣಿಯ ಕಿಡಿಗಳು ಜಗತ್ತಿನ ಮೂಲೆ ಮೂಲೆಗಳಿಗೆ ತಲುಪುತ್ತಿವೆ. ಇರಾನ್ ಇದೇ ಮೊದಲ ಬಾರಿಗೆ ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿ ದಾಳಿ ಮಾಡುತ್ತಿರುವುದು. ಇರಾನ್‌ಗೆ ಇಂತಹ ದಾಳಿಯನ್ನು ಅಮೆರಿಕವೇ ಅನಿವಾರ್ಯವಾಗಿಸಿತು. ಈ ದಾಳಿಯ ವಿರುದ್ಧ ಕೊಲ್ಲಿ ರಾಷ್ಟ್ರಗಳು ಅಮೆರಿಕವನ್ನು ಹೊಣೆಗಾರನನ್ನಾಗಿ ಮಾಡಬೇಕಾಗಿದೆ ಮತ್ತು ಖಂಡನೆ ವ್ಯಕ್ತಪಡಿಸುವುದಿದ್ದರೆ ಅಮೆರಿಕದ ವಿರುದ್ಧವೇ ವ್ಯಕ್ತಪಡಿಸಬೇಕಾಗಿದೆ.

ಅಮೆರಿಕವು ಇರಾನ್‌ಗೆ ಮಾಡಿರುವ ಹಲವು ಗಾಯಗಳ ಪರಿಣಾಮವನ್ನು ಭಾರತವೂ ಉಣ್ಣಬೇಕಾಗಿ ಬಂದಿದೆ. ಒಂದು ಕಾಲದಲ್ಲಿ ಭಾರತವು ಅಕ್ಕಿ ಕೊಟ್ಟು ಇರಾನ್‌ನಿಂದ ತೈಲ ಖರೀದಿಸಿ ಅಮೆರಿಕದ ನಿರ್ಬಂಧಗಳಿಂದ ತನ್ನನ್ನು ತಾನು ಕಾಪಾಡಿಕೊಂಡಿತ್ತು. ಬಾಸ್ಮತಿ ಅಕ್ಕಿಯ ಬಹುದೊಡ್ಡ ಮಾರುಕಟ್ಟೆ ಇರಾನ್. ಅಮೆರಿಕದ ಒತ್ತಡದ ಕಾರಣದಿಂದಲೇ ಇರಾನ್‌ನ ಚಾಬಹಾರ್ ಬಂದರು ನಿರ್ಮಾಣದಿಂದ ಭಾರತ ಹಿಂಜರಿಯಬೇಕಾಯಿತು. ಅದಕ್ಕಾಗಿ ಹೂಡಿದ ಹಣವೂ ನೀರುಪಾಲಾಗಿದೆ. ಇರಾನ್-ಭಾರತದ ಸಂಬಂಧ ಸುಧಾರಿಸಿದಂತೆಯೇ ಅದು ಡಾಲರ್ ಆರ್ಥಿಕತೆಯ ಮೇಲೆ ದುಷ್ಟರಿಣಾಮ ಬೀರುತ್ತದೆ ಎನ್ನುವುದು ಅಮೆರಿಕಕ್ಕೆ ಗೊತ್ತಿತ್ತು. ಆದುದರಿಂದಲೇ ಇರಾನ್ ಜೊತೆಗೆ ಸಂಬಂಧ ಬೆಳೆಸದಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ. ಭಾರತದ ಮೇಲೆ ಸುಂಕಾಸ್ತ್ರದ ಮೂಲಕ ದಾಳಿ ನಡೆಸಿದ ಅಮೆರಿಕ, ಇದೀಗ ಇರಾನ್‌ನನ್ನು ಗಾಯಗೊಳಿಸಿ ಭಾರತಕ್ಕೆ ಇನ್ನೊಂದು ಆಘಾತ ನೀಡಿದೆ. ಇರಾನ್ ಮೇಲಿನ ದಾಳಿಯು ಪರೋಕ್ಷವಾಗಿ ಭಾರತದ ಹಲವು ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಹಾಗೆಯೇ ಕೊಲ್ಲಿ ರಾಷ್ಟ್ರಗಳಲ್ಲಿ ಬದುಕು ಕಟ್ಟುತ್ತಿರುವ ಸಾವಿರಾರು ಭಾರತೀಯರ ಬದುಕೂ ಅತಂತ್ರದಲ್ಲಿದೆ. ಈ ಕಾರಣಕ್ಕಾಗಿಯೇ ಇರಾನ್‌ನ ಮೇಲೆ ನಡೆದ ದಾಳಿಯನ್ನು ಭಾರತ ಏಕ ಪಕ್ಷೀಯವಾಗಿ ಖಂಡಿಸಬೇಕಾಗಿದೆ. ಇಂದು ಇರಾನ್‌ಗೆ ಸಂಭವಿಸಿದ್ದು ನಾಳೆ ತನಗೂ ಸಂಭವಿಸಬಹುದು ಎನ್ನುವ ಜಾಗರೂಕತೆಯೊಂದಿಗೆ ಸದ್ಯದ ಬಿಕ್ಕಟ್ಟನ್ನು ಭಾರತ ನಿಭಾಯಿಸಬೇಕಾಗಿದೆ. ಇಸ್ರೇಲ್ ಎನ್ನುವ ಭಯೋತ್ಪಾದಕ ದೇಶವನ್ನು ಸೆರಗಿನಲ್ಲಿ ಕಟ್ಟಿಕೊಂಡಿರುವ ಅಮೆರಿಕ ಒಂದಲ್ಲ ಒಂದು ದಿನ ತಾನೂ ಸುಡುತ್ತಾ, ತನ್ನ ಮಿತ್ರ ದೇಶಗಳನ್ನೂ ಸುಡಲಿದೆ ಎನ್ನುವ ಎಚ್ಚರಿಕೆ ಭಾರತಕ್ಕೆ ಇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News