ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗಲಿ
PC: ANI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಗತಿಸಿದವು. ಅಭಿವೃದ್ಧಿಯ ದಿಕ್ಕಿನಲ್ಲಿ ದಾಪುಗಾಲಿಡುತ್ತ ಸಾಗಿದ್ದೇವೆ ಎಂದು ಸರಕಾರಗಳು ಹೇಳುತ್ತಲೇ ಬಂದಿವೆ. ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಾಲದಲ್ಲಿ ಅಂದರೆ ಅವರ ಸಾರಥ್ಯದಲ್ಲಿ ಭಾರತ ಸಾಗಿದ ಹದಿನೆಂಟು ವರ್ಷಗಳಲ್ಲಿ ಸಾರ್ವಜನಿಕ ಉದ್ದಿಮೆಗಳು, ಅಣೆಕಟ್ಟುಗಳು, ಶಾಲೆ-ಕಾಲೇಜುಗಳು ಸಾಕಷ್ಟು ಸಂಖ್ಯೆಯಲ್ಲಿ ಸ್ಥಾಪನೆಯಾದವು. ಆನಂತರದ ಅಂದರೆ ಇಂದಿರಾಗಾಂಧಿ ಅವರ ಕಾಲಾವಧಿಯನ್ನು ಬಿಟ್ಟರೆ ಹೊಸ ಯೋಜನೆಗಳೇನೂ ರೂಪುಗೊಳ್ಳಲಿಲ್ಲ.ಜಾಗತೀಕರಣದ ಶಕೆ ಆರಂಭವಾದ ನಂತರವಂತೂ ಅಭಿವೃದ್ಧಿ ಅಂದರೆ ಉಳ್ಳವರ ಸಂಪತ್ತಿನ ಅಭಿವೃದ್ಧಿ ಎಂದಾಗಿದೆ. ಅಂದರೆ ಮಾನವಾಭಿವೃದ್ಧಿ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಜನರಿಗೆ ಮೂಲಭೂತ ಕನಿಷ್ಠ ಸೌಕರ್ಯಗಳನ್ನು ಒದಗಿಸುವುದೂ ನಮ್ಮ ಸರಕಾರಗಳಿಂದ ಸಾಧ್ಯವಾಗಿಲ್ಲ. ಇದಕ್ಕೆ ಸದ್ಯದ ಒಂದು ಉದಾಹರಣೆಯೆಂದರೆ ಕುಡಿಯುವ ನೀರಿನ ಸಮಸ್ಯೆ. ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದರೂ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಲು ಆಗಿಲ್ಲ. ದೇಶದ ಅನೇಕ ಕಡೆಗಳಂತೆ ರಾಜ್ಯದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದರಿಂದ ನೂರೆಂಟು ಕಾಯಿಲೆಗಳು ಜನಸಾಮಾನ್ಯರನ್ನು ಬಾಧಿಸುತ್ತಿರುವ ವರದಿಗಳು ಬರುತ್ತಲೇ ಇವೆ.
ರಾಜ್ಯದಲ್ಲಿ ಈ ವರ್ಷ ಮಾರ್ಚ್ ಮೊದಲ ವಾರದಲ್ಲೇ ಬೇಸಿಗೆಯ ಝಳ ತೀವ್ರವಾಗಿದೆ. ಮುಂದಿನ ಮೂರು ತಿಂಗಳ ಕಾಲ ಬಿಸಿಲಿನ ಪ್ರಖರತೆ ಇನ್ನೂ ಹೆಚ್ಚಾಗಲಿದೆ ಎಂದು ಅಧಿಕೃತ ವರದಿಗಳು ಎಚ್ಚರಿಕೆ ನೀಡಿವೆ. ಕೆಲವು ಕಡೆ ಐದಾರು ಸಲ ಬಿಸಿ ಗಾಳಿ ಬೀಸುವ ಸಂಭವವೂ ಇದೆ ಎಂದು ಹೇಳಲಾಗುತ್ತಿದೆ.ಇಂಥ ಸಂದರ್ಭದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರಕಾರದ ಮೊದಲ ಆದ್ಯತೆಯಾಗಬೇಕಾಗಿದೆ. ರಾಜ್ಯ ಸರಕಾರ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಂಡಿಲ್ಲವೆಂದಲ್ಲ. ಆದರೂ ಅನೇಕ ಹಳ್ಳಿಗಳ ಪರಿಸ್ಥಿತಿ ದಾರುಣವಾಗಿದೆ. ಜನರಿಗೆ ಕುಡಿಯಲೆಂದು ಪೂರೈಕೆಯಾಗುತ್ತಿರುವ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶಗಳಿರುವುದು ಪ್ರಯೋಗಾಲಯದಲ್ಲಿ ನಡೆಸಿದ ನೀರಿನ ಮಾದರಿ ಪರೀಕ್ಷೆಯಲ್ಲಿ ಖಚಿತವಾಗಿ ಗೊತ್ತಾಗಿದೆ.
ಕಳೆದ 2023ರಿಂದ 2026ರ ಫೆಬ್ರವರಿವರೆಗಿನ, ಅಂದರೆ ಮೂರು ವರ್ಷಗಳ ಕಾಲಾವಧಿಯಲ್ಲಿ 9,34,645 ನೀರಿನ ಮಾದರಿಯನ್ನು ಪರೀಕ್ಷಿಸಲಾಗಿದೆ.ಇದರಲ್ಲಿ 53,089 ನೀರಿನ ಮಾದರಿಯಲ್ಲಿ ರಾಸಾಯನಿಕ ಹಾಗೂ 7,696 ನೀರಿನ ಮಾದರಿಯ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಕಂಡು ಬಂದಿರುವ ಸಂಗತಿ ಬಹಿರಂಗವಾಗಿದೆ. ಕೆಲವು ಜಿಲ್ಲೆಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಆರ್ಸೆನಿಕ್ ಮತ್ತು ಐರನ್ ಅಂಶ ಹೆಚ್ಚಿರುವುದು ಸಾಬೀತಾಗಿದೆ.
ರಾಯಚೂರು, ಬೀದರ್, ಯಾದಗಿರಿ, ಚಿತ್ರದುರ್ಗ, ಬಿಜಾಪುರ, ದಾವಣಗೆರೆ, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಲುಷಿತ ಕುಡಿಯುವ ನೀರಿನ ಪೂರೈಕೆಯಿಂದ ಜನಸಾಮಾನ್ಯರು ಅಸ್ವಸ್ಥರಾದ ಪ್ರಕರಣಗಳು ಹೆಚ್ಚಾಗಿರುವುದು ವರದಿಯಾಗಿದೆ. ಕುಡಿಯುವ ನೀರಿನಲ್ಲಿ ಕೊಳಚೆ ನೀರು ಮಿಶ್ರಣ, ಪೈಪ್‌ಲೈನ್ ಸೋರಿಕೆ, ನೈರ್ಮಲ್ಯ ಅವ್ಯವಸ್ಥೆಯಿಂದಾಗಿ ಜನರು ಅಸ್ವಸ್ಥರಾಗುವ ಘಟನೆಗಳು ಮರುಕಳಿಸುತ್ತಿವೆ. ಬೇಸಿಗೆಯ ಬಿಸಿಲು ತೀವ್ರವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ. ಇದನ್ನು ಎದುರಿಸಲು ಸರಕಾರ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಹಳೆಯದಾದ ಕುಡಿಯುವ ನೀರಿನ ಪೈಪುಗಳನ್ನು ತಕ್ಷಣ ಬದಲಾಯಿಸಿ ಆಧುನಿಕ ಹೊಸ ಪೈಪುಗಳನ್ನು ಹಾಕಬೇಕಾಗಿದೆ. ನಗರ ಪ್ರದೇಶಗಳಲ್ಲಿ ಚರಂಡಿ ನೀರಿನ ಮತ್ತು ಕುಡಿಯುವ ನೀರಿನ ಪೈಪುಗಳು ಬೆರೆಯದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಸರಕಾರವೇನೋ ಹಲವಾರು ಕ್ರಮಗಳನ್ನು ಘೋಷಿಸುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ತೊಂದರೆ ಪಡಬೇಕಾಗಿ ಬಂದಿದೆ.
ಕರ್ನಾಟಕದಲ್ಲಿ ದೊಡ್ಡ ನಗರಗಳು ಮಾತ್ರವಲ್ಲ ನೂರಾರು ಹಳ್ಳಿಗಳಿವೆ. ಆ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಈ ವರೆಗೆ ಸಾಧ್ಯವಾಗಿಲ್ಲ. ತುಂಬಾ ದಿನಗಳಿಂದ ಸಂಗ್ರಹಗೊಂಡ ನೀರನ್ನು ಹಾಗೂ ಕಲುಷಿತಗೊಂಡ ಜಲಮೂಲಗಳಿಂದ ಪಡೆದ ನೀರನ್ನು ಕುಡಿಯುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಪದೇ ಪದೇ ಅಸ್ವಸ್ಥರಾಗುತ್ತಿದ್ದಾರೆ. ಅತಿಸಾರ, ವಾಂತಿಭೇದಿ, ಜ್ವರ, ಕಾಲರಾ, ಅಲರ್ಜಿಯಂಥ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.ಕಲುಷಿತ ನೀರು ಪ್ರಾಣಕ್ಕೆ ಗಂಡಾಂತರಕಾರಿಯಾಗಿದೆ. ಕಲುಷಿತ ನೀರು ಮತ್ತು ಕಲುಷಿತ ಆಹಾರದಿಂದಾಗಿ 2024ರಲ್ಲಿ ಅತಿಸಾರದ 66 ಸಾವಿರ ಪ್ರಕರಣಗಳು ವರದಿಯಾಗಿವೆ. ಇದು ನಿಜವಾಗಿ ಗಂಭೀರ ಸಮಸ್ಯೆಯಾಗಿದೆ.
ನವ ಉದಾರೀಕರಣದ ಆರ್ಥಿಕ ನೀತಿಯ ಈ ದಿನಗಳಲ್ಲಿ ನೀರು ಸೇರಿದಂತೆ ನಾವು ಸೇವಿಸುವ ಆಹಾರ, ತಿಂಡಿ ಪದಾರ್ಥಗಳು ಅತ್ಯಂತ ವಿಷಕಾರಿ ರಾಸಾಯನಿಕಗಳ ಮಿಶ್ರಣದಿಂದ ಕೂಡಿವೆ. ಹೋಟೆಲ್ ಮಾತ್ರವಲ್ಲ ಮನೆಯಲ್ಲಿ ಊಟಕ್ಕೆ ಬಳಸುವ ಆಹಾರ ಪದಾರ್ಥಗಳು ಸುರಕ್ಷಿತವಾಗಿಲ್ಲ ಎಂಬುದು ಆತಂಕಕಾರಿ ಅಂಶವಾಗಿದೆ. ಹೋಟೆಲ್, ಬೇಕರಿಗಳಲ್ಲಿ ಸಿಗುವ ತಿಂಡಿ-ತಿನಿಸುಗಳ ರುಚಿಯನ್ನು ಹೆಚ್ಚಿಸಲು ನಿಷೇಧಿತ ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬಣ್ಣಗಳನ್ನು ಬೆರೆಸುವುದು ಸಾಮಾನ್ಯವಾಗಿದೆ. ಹಾಲು, ಮಾಂಸ ಮತ್ತು ಮತ್ತಿತರ ಪದಾರ್ಥಗಳಲ್ಲಿ ಆಂಟಿ ಬಯೊಟಿಕ್ಸ್ ಬಳಕೆ ಮಾಡಲಾಗುತ್ತಿದೆ. ಕಲಬೆರಕೆ ಮಸಾಲೆ ಪದಾರ್ಥಗಳಿಂದಾಗಿ ಅಕ್ಕಿ, ಬೇಳೆಗಳು ಸುರಕ್ಷಿತವಾಗಿ ಉಳಿದಿಲ್ಲ.
ಆಹಾರ ಪದಾರ್ಥಗಳು ಮಾತ್ರವಲ್ಲ, ಬಾಟಲಿಗಳಲ್ಲಿ ಮಾರಾಟವಾಗುತ್ತಿರುವ ಕುಡಿಯುವ ನೀರು ಕೂಡ ದುರ್ಮಿಶ್ರಣವಾಗುವ ಅಪಾಯದಿಂದ ಸುರಕ್ಷಿತವಾಗಿಲ್ಲ. ಸೋವಿಯತ್ ಸಮಾಜವಾದಿ ವ್ಯವಸ್ಥೆಯ ಕುಸಿತದ ನಂತರ ಜಗತ್ತಿನಲ್ಲಿ ಈಗಿರುವುದು ಮಾರುಕಟ್ಟೆ ಆಧರಿತ ಲಾಭಕೋರ ವ್ಯವಸ್ಥೆ. ಇದಕ್ಕೆ ಜನರ ಆರೋಗ್ಯ ಮುಖ್ಯವಲ್ಲ. ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕು ಬಿಕರಿಯಾಗುವುದು ಮುಖ್ಯ. ಇಂಥ ಸನ್ನಿವೇಶದಲ್ಲಿ ಸರಕಾರಗಳನ್ನು ಎಚ್ಚರಿಸಲು ಜನ ಜಾಗೃತಿ ಮುಖ್ಯವಾಗಿದೆ.