ಈಸ್ಟರ್ ಸರಣಿ ಸ್ಫೋಟ : ಶಿಲುಬೆಗೇರಿದ ಅಮಾಯಕರಿಗೆ ಸಿಗಬೇಡವೇ ನ್ಯಾಯ?
PC: x.com/NANDANPRATIM
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶ್ರೀಲಂಕಾ ಮಾತ್ರವಲ್ಲ ಭಾರತ ಉಪಖಂಡವನ್ನೇ ತಲ್ಲಣಿಸುವಂತೆ ಮಾಡಿದ್ದ 2019ರ ಈಸ್ಟರ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ , ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಲಾಗಿದೆ. 2019ರ ಎಪ್ರಿಲ್‌ನಲ್ಲಿ ಈಸ್ಟರ್ ದಿನ ಬೆಳಗ್ಗೆ ಮೂರು ಚರ್ಚ್
ಗಳಲ್ಲಿ ಹಾಗೂ ಮೂರು ಐಷಾರಾಮಿ ಹೋಟೆಲ್‌ಗಳಲ್ಲಿ ಏಕಕಾಲದಲ್ಲಿ ಆರು ಆತ್ಮಹತ್ಯಾ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ಸ್ಫೋಟಗಳಲ್ಲಿ 279 ಮಂದಿ ಮೃತಪಟ್ಟಿದ್ದು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 45 ವಿದೇಶಿ ಪ್ರಜೆಗಳೂ ಸೇರಿದ್ದು ಈ ದುರಂತವು ಶ್ರೀಲಂಕಾದ ಪ್ರವಾಸೋದ್ಯಮದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿತ್ತು. 2023ರ ಹೊತ್ತಿಗೇ ಈ ಸ್ಫೋಟದ ಹಿಂದಿರುವ ರಾಜಕೀಯ ಮುಖಗಳನ್ನು ಬಯಲಿಗೆಳೆಯಲಾಗಿತ್ತು. ಶ್ರೀಲಂಕಾದ ಸುಪ್ರೀಂಕೋರ್ಟ್, ಈ ಸ್ಫೋಟದ ಹಿಂದಿರುವ ಆಡಳಿತ ವೈಫಲ್ಯವನ್ನು ಗುರುತಿಸಿತ್ತು. ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಇತರ ನಾಲ್ವರು ಹಿರಿಯ ಅಧಿಕಾರಿಗಳು ಬಾಂಬ್ ಸ್ಫೋಟಗಳಿಗೆ ಪರೋಕ್ಷ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಸಂತ್ರಸ್ತರ ಸಂಬಂಧಿಕರಿಗೆ ಸಿರಿಸೇನಾ ವೈಯಕ್ತಿಕವಾಗಿ 100 ಮಿಲಿಯನ್ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಲು ಆದೇಶಿಸಿತ್ತು. ಬ್ರಿಟಿಷ್ ಮಾಧ್ಯಮವೊಂದು ಮೂರು ವರ್ಷದ ಹಿಂದೆಯೇ ಮಾಜಿ ಗುಪ್ತಚರ ಮುಖ್ಯಸ್ಥ ಸಲ್ಲೆ ಪಾತ್ರವನ್ನು ಉಲ್ಲೇಖಿಸಿ ವರದಿಯೊಂದನ್ನು ಪ್ರಕಟಿಸಿತ್ತು. ಇದೀಗ ದಾಳಿಗೆ ಪಿತೂರಿ ರೂಪಿಸಿದ ಮತ್ತು ಸಹಕಾರ ನೀಡಿದ ಆರೋಪದ ಮೇರೆಗೆ ಸಲ್ಲೆಯನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಈ ಸ್ಫೋಟದ ಹಿಂದಿರುವ ರಾಜಕೀಯ ಕಾರಣಗಳು ಇನ್ನಷ್ಟೇ ಸವಿವರವಾಗಿ ಬೆಳಕಿಗೆ ಬರಬೇಕಾಗಿದೆ.
ವಿಪರ್ಯಾಸವೆಂದರೆ, ಸಂಭವಿಸಿದ ಸಾವು ನೋವುಗಳ ಹೊರತಾಗಿಯೂ ಈ ಸ್ಫೋಟದೊಂದಿಗೆ ಯಾವ ಸಂಬಂಧವೂ ಇಲ್ಲದ ಸಾವಿರಾರು ಜನರು ನಾಶನಷ್ಟಕ್ಕೀಡಾಗಿದ್ದಾರೆ. ಈ ಸ್ಫೋಟವನ್ನು ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಲು ಅಲ್ಲಿನ ಸರಕಾರ ನಡೆಸಿದ ಪ್ರಯತ್ನ ಮತ್ತು ಅದರ ಪರಿಣಾಮ ಅತ್ಯಂತ ಭೀಕರವಾಗಿತ್ತು. ಮೊದಲು ಈ ಸ್ಫೋಟವನ್ನು ಉಗ್ರಗಾಮಿ ಗುಂಪಾಗಿರುವ ನ್ಯಾಶನಲ್ ತೌಹೀದ್ ಜಮಾಅತ್ ನಡೆಸಿದೆ ಎಂದು ಹೇಳಲಾಯಿತು. ಈ ಸಂಘಟನೆ ಐಸಿಸ್‌ನ ಜೊತೆಗೆ ಸಂಪರ್ಕವನ್ನು ಹೊಂದಿದೆ ಎಂದೂ ಮಾಧ್ಯಮಗಳು ಬರೆದವು. ಅಂದಿನ ಶ್ರೀಲಂಕಾ ಸರಕಾರ ಕೂಡ ಇದನ್ನು ಸ್ಪಷ್ಟಪಡಿಸಿತ್ತು. ಈ ಸ್ಫೋಟಗಳನ್ನು ಮುಂದಿಟ್ಟುಕೊಂಡು ಶ್ರೀಲಂಕಾದಲ್ಲಿರುವ ಮುಸ್ಲಿಮರ ಮೇಲೆ ನಿರಂತರ ದಾಳಿಗಳು ನಡೆದವು. ಸಿಂಹಳದ ಬೌದ್ಧ ರಾಷ್ಟ್ರೀಯವಾದಿ ಗುಂಪುಗಳು ಈ ಸ್ಫೋಟವನ್ನು ಮುಸ್ಲಿಮರ ಮೇಲೆ ದಾಳಿ ನಡೆಸಲು ತನಗಿರುವ ಪರವಾನಿಗೆಯೆಂದು ಬಗೆದವು. ಜುಲೈ ತಿಂಗಳಲ್ಲಿ ಶ್ರೀಲಂಕಾದ ಚಿಲಾವ್‌ನಲ್ಲಿ ಆರಂಭವಾದ ಗಲಭೆ ವಾಯವ್ಯ ಪ್ರಾಂತ್ಯದ ಇತರ ಭಾಗಗಳಿಗೂ ಹರಡಿತು. 500ಕ್ಕೂ ಹೆಚ್ಚಿನ ಮುಸ್ಲಿಮ್ ಒಡೆತನದ ಮನೆ, ಆಸ್ತಿಗಳು ಈ ಗಲಭೆಗಳಲ್ಲಿ ನಾಶವಾಗಿವೆ. 100ಕ್ಕೂ ಅಧಿಕ ವಾಹನಗಳು ಧ್ವಂಸಗೊಂಡಿವೆ. ಸರಕಾರವೂ ಕೂಡ ಈ ಮುಸ್ಲಿಮ್ ದ್ವೇಷದ ಅಭಿಯಾನದಲ್ಲಿ ಸೇರಿಕೊಂಡಿತು. ಮುಸ್ಲಿಮ್ ಮಹಿಳೆಯರು ಸಾರ್ವಜನಿಕವಾಗಿ ನಕಾಬ್ ಧರಿಸುವುದಕ್ಕೆ ಸರಕಾರ ನಿಷೇಧ ಹೇರಿತು. ಸರಕಾರದ ಈ ನಿರ್ಧಾರ ಭಾರತದಲ್ಲೂ ಸಾಕಷ್ಟು ಚರ್ಚೆಗೊಳಗಾಯಿತು. ಅದನ್ನೇ ಮುಂದಿಟ್ಟಕೊಂಡು ಸಂಘಪರಿವಾರ ಸಂಘಟನೆಗಳು ಭಾರತದಲ್ಲೂ ಬುರ್ಖಾ ನಿಷೇಧವಾಗಬೇಕು ಎಂದು ಒತ್ತಾಯಿಸಿದವು.
ಭಾರತದಲ್ಲೂ ಕೆಲವು ಕ್ರೈಸ್ತ ಸಂಘಟನೆಗಳು ಮುಸ್ಲಿಮ್ ಉಗ್ರವಾದದ ವಿರುದ್ಧ ಬೀದಿಗಿಳಿದವು. ಕೇರಳದಲ್ಲಿ ಕೆಲವು ಸಂಘಟನೆಗಳು ಮುಸ್ಲಿಮ್ ಸಮುದಾಯದ ವಿರುದ್ಧ ಯಾವುದೇ ಸಂಘಪರಿವಾರ ಸಂಘಟನೆಗಳಿಗೆ ಕಡಿಮೆಯಿಲ್ಲ ಎಂಬಂತೆ ಹೇಳಿಕೆ ನೀಡತೊಡಗಿದವು. ಈಸ್ಟರ್ ದಾಳಿಯಲ್ಲಿ ಹಲವು ಮುಸ್ಲಿಮರೂ ಮೃತಪಟ್ಟಿದ್ದಾರಾದರೂ ಅದನ್ನು ಮಾಧ್ಯಮಗಳು ಮರೆ ಮಾಚಿದವು. ಇದಕ್ಕೊಂದು ರಾಜಕೀಯ ಮುಖವಿರಬಹುದು ಎನ್ನುವುದನ್ನು ಯಾರೂ ಯೋಚಿಸುವುದಕ್ಕೂ ಮುಂದಾಗಲಿಲ್ಲ. ಇದೀಗ ಈ ಸ್ಫೋಟದಲ್ಲಿ ಶ್ರೀಲಂಕಾದ ಮಾಜಿ ಗುಪ್ತಚರನೊಬ್ಬನ ಕೈವಾಡವಿದೆ ಎನ್ನುವುದು ಬಯಲಾಗಿದೆ. ಆದರೆ ಈ ಸ್ಫೋಟ ಶ್ರೀಲಂಕಾದ ಮುಸ್ಲಿಮರ ಮೇಲೆ ಬೀರಿದ ಪರಿಣಾಮ, ಅವರು ಅನುಭವಿಸಿದ ನಾಶ, ನಷ್ಟಗಳ ಬಗ್ಗೆ ಯಾರೂ ಚರ್ಚಿಸುವುದಕ್ಕೆ ಮುಂದಾಗುತ್ತಿಲ್ಲ. ಈ ಹಿಂದೆ ಮಾಧ್ಯಮಗಳು ಈ ಸ್ಫೋಟಗಳ ಕುರಿತಂತೆ ಬರೆದ ಪುಂಖಾನುಪುಂಖ ‘ಐಸಿಸ್ ಕತೆಗಳ’ ಬಗ್ಗೆ ಯಾರೂ ಪಶ್ಚಾತ್ತಾಪ ಪಡುತ್ತಿಲ್ಲ.
ಇದು ಶ್ರೀಲಂಕಾಕ್ಕೆ ಸೀಮಿತವಾಗಿರುವ ವಿಷಯವಲ್ಲ. ಈಸ್ಟರ್ ಸ್ಫೋಟಕ್ಕೆ ಸಂಬಂಧಿಸಿ ಭಾರತದ ಗುಪ್ತಚರರು ನೀಡಿದ ಮುನ್ನೆಚ್ಚರಿಕೆಯನ್ನು ಶ್ರೀಲಂಕಾದ ಅಂದಿನ ಸರಕಾರ ನಿರ್ಲಕ್ಷಿಸಿತು ಎನ್ನುವ ಆರೋಪವಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಪುಲ್ವಾಮಾ ಸ್ಫೋಟಗಳು ಸಂಭವಿಸುವಾಗ ಭಾರತದ ಈ ಗುಪ್ತಚರರು ಎಲ್ಲಿದ್ದರು ಎನ್ನುವ ಪ್ರಶ್ನೆಯನ್ನು ಭಾರತದ ಜನತೆ ಕೇಳುತ್ತಿದ್ದಾರೆ. ಶ್ರೀಲಂಕಾದಲ್ಲಿ ನಡೆದಿರುವ ಸ್ಫೋಟಗಳಲ್ಲಿ ಅಲ್ಲಿನ ಸರಕಾರದ ಕೈವಾಡವಿರುವಂತೆಯೇ ಭಾರತದಲ್ಲಿ ಸಂಭವಿಸಿದ ಹಲವು ಸ್ಫೋಟಗಳ ಹಿಂದೆ ಸರಕಾರದ ವೈಫಲ್ಯಗಳು ಕೆಲಸ ಮಾಡಿವೆ ಎಂದು ಹಲವರು ಈಗಾಗಲೇ ಶಂಕಿಸಿದ್ದಾರೆ. ಶ್ರೀಲಂಕಾದ ಸ್ಫೋಟಗಳನ್ನು ತನಿಖೆಗೆ ಮುನ್ನವೇ ಮುಸ್ಲಿಮ್ ಸಂಘಟನೆಗಳ ತಲೆಗೆ ಕಟ್ಟಿದ ರೀತಿಯಲ್ಲೇ ಭಾರತದಲ್ಲಿ ನಡೆದ ಹಲವು ಸ್ಫೋಟಗಳನ್ನು ಅಮಾಯಕರ ತಲೆಗೆ ಕಟ್ಟಲಾಗಿವೆ. 2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟದಲ್ಲಿ 150ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಈ ಸ್ಫೋಟವನ್ನು ಮುಸ್ಲಿಮರ ತಲೆಗೆ ಕಟ್ಟಲಾಗಿತ್ತು ಮಾತ್ರವಲ್ಲ ಇದರ ಹಿಂದಿರುವ ಉಗ್ರಗಾಮಿ ಸಂಘಟನೆಗಳ ಬಗ್ಗೆ ಮಾಧ್ಯಮಗಳು ಬಗೆ ಬಗೆಯ ವಿವರಗಳನ್ನು ಪ್ರಕಟಿಸಿದ್ದವು. ಕೆಳ ನ್ಯಾಯಾಲಯ ಬಂಧಿತ 12 ಆರೋಪಿಗಳಿಗೆ ಮರಣದಂಡನೆಯನ್ನು ವಿಧಿಸಿತ್ತು. ಆದರೆ ಕಳೆದ ವರ್ಷ ಎಲ್ಲ ಆರೋಪಿಗಳೂ ಖುಲಾಸೆಗೊಂಡರು ಮಾತ್ರವಲ್ಲ, ಪೊಲೀಸರ ತನಿಖೆಯ ರೀತಿಯನ್ನೇ ನ್ಯಾಯಾಲಯ ಪ್ರಶ್ನಿಸಿತ್ತು. ಅಮಾಯಕರಿಗೆ ಚಿತ್ರ ಹಿಂಸೆ ನೀಡಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಸಂಜೋತಾ ರೈಲು ಸ್ಫೋಟ, ಮಕ್ಕಾ, ಅಜ್ಮೀರ್ ಸ್ಫೋಟಗಳಿಗೂ ಆರಂಭದಲ್ಲಿ ಮುಸ್ಲಿಮರನ್ನೇ ಹೊಣೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಬಳಿಕ ಇದರ ಹಿಂದಿರುವ ಕೇಸರಿ ಉಗ್ರರ ಜಾಲವನ್ನು ಹೇಮಂತ್ ಕರ್ಕರೆ ತಂಡ ಬಯಲು ಮಾಡಿತು. ಅಸೀಮಾನಂದ, ಪ್ರಜ್ಞಾಠಾಕೂರ್, ಪುರೋಹಿತ್ ಮೊದಲಾದವರ ಹೆಸರುಗಳು ಒಂದೊಂದಾಗಿ ಹೊರ ಬರ ತೊಡಗಿದವು. ಈ ತನಿಖೆಯ ಮೂಲಕವೇ ಮೊದಲ ಬಾರಿಗೆ ಸ್ವದೇಶಿ ಕೇಸರಿ ಸಂಘಟನೆಗಳು ದೇಶದ ವಿಚ್ಛಿದ್ರಕಾರಿ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂತು. ಆದರೆ ಈ ಭಯೋತ್ಪಾದಕ ಸಂಘಟನೆಗಳ ಹೆಸರುಗಳನ್ನು ಬಯಲು ಮಾಡಿದ ಇಡೀ ತನಿಖಾ ತಂಡವೇ ಬಳಿಕ ಶಂಕಿತ ಉಗ್ರರಿಂದ ಹತ್ಯೆಗೀಡಾಯಿತು. ಮುಂಬೈ ರೈಲು ಸ್ಫೋಟದಲ್ಲಿ ಪೊಲೀಸರು ಬಂಧಿಸಿದ ಆರೋಪಿಗಳು ಅಮಾಯಕರು ಎಂದ ಮೇಲೆ ಆ ದಾಳಿಯನ್ನು ಸಂಘಟಿಸಿದವರು ಯಾರು? ಎನ್ನುವ ಪ್ರಶ್ನೆ ಇಂದಿಗೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಮಾಲೆಗಾಂವ್, ಮಕ್ಕಾ ಸ್ಫೋಟಗಳ ಹಿಂದಿರುವ ಶಕ್ತಿಗಳು ಯಾವುವು ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಶ್ರೀಲಂಕಾದಲ್ಲಿ ಈಸ್ಟರ್ ಸ್ಫೋಟಗಳಿಗೆ ಸಂಬಂಧಿಸಿದ ಪ್ರಾಮಾಣಿಕ ತನಿಖೆ ಭಾರತದಲ್ಲೂ ನಡೆದರೆ, ಪುಲ್ವಾಮಾ ಸೇರಿದಂತೆ ಹಲವು ಸ್ಫೋಟಗಳು ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.