×
Ad

ಜನಸಂಖ್ಯಾ ನೀತಿ: ಆಂಧ್ರದ ಮಹತ್ವದ ಹೆಜ್ಜೆ

Update: 2026-03-09 07:25 IST

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು | Photo Credit : PTI

 

ದೇಶದ ಮೊತ್ತ ಮೊದಲ ಕರಡು ಜನಸಂಖ್ಯೆ ನಿರ್ವಹಣೆ ನೀತಿಯನ್ನು ಅನಾವರಣಗೊಳಿಸಿದ ಹೆಗ್ಗಳಿಕೆಯನ್ನು ನೆರೆಯ ಆಂಧ್ರ ಪ್ರದೇಶ ತನ್ನದಾಗಿಸಿದೆ. ಜನಸಂಖ್ಯಾ ನೀತಿಯ ಅನುಷ್ಠಾನದ ಕುರಿತಂತೆ ದೇಶದ ರಾಜಕಾರಣಿಗಳು ದಿನಕ್ಕೊಂದು ಮಾತುಗಳನ್ನಾಡುತ್ತಾ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿರುವ ಹೊತ್ತಿನಲ್ಲೇ ಆಂಧ್ರ ಪ್ರದೇಶ ಸರಕಾರವು, ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ 25,000 ರೂಪಾಯಿ ಪಾವತಿಸುವುದಾಗಿ ಘೋಷಿಸಿದೆ. ಗುರುವಾರ ವಿಧಾನಸಭೆಯಲ್ಲಿ ಕರಡು ನೀತಿಯನ್ನು ಪ್ರಕಟಿಸಿದ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು ಅವರು, ಎ.1ರಿಂದ ನೀತಿಯನ್ನು ಜಾರಿಗೊಳಿಸಲು ಪ್ರಯತ್ನಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮೂರನೇ ಮಗುವಿಗೆ 18 ವರ್ಷ ಪ್ರಾಯದವರೆಗೆ ಉಚಿತ ಶಿಕ್ಷಣ, ಸಬ್ಸಿಡಿ ದರಗಳಲ್ಲಿ ಐವಿಎಫ್ ಸೇವೆಗಳು, ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ವಿಶೇಷ ರಜೆಗಳ ಮಂಜೂರು, ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳು, ಮಕ್ಕಳ ಆರೈಕೆ ಕೇಂದ್ರಗಳ ನಿರ್ಮಾಣ ಇತ್ಯಾದಿಗಳನ್ನು ಅವರು ಪ್ರಕಟಿಸಿದ್ದಾರೆ. ಕರಡು ನೀತಿಯು ದಂಪತಿಯ ಮೂರನೇ ಅಥವಾ ಆನಂತರದ ಮಗುವಿನ ಜನನ ಸಮಯದಲ್ಲಿ 12 ತಿಂಗಳುಗಳ ಮಾತೃತ್ವ ರಜೆಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ತಂದೆಗೆ ಎರಡು ತಿಂಗಳ ಪಿತೃತ್ವ ರಜೆಯೂ ಸೇರಿದೆ. ನಿವೃತ್ತಿ ಸಮೀಪಿಸುತ್ತಿರುವ ಮೂವರು ಮಕ್ಕಳನ್ನು ಹೊಂದಿರುವ ಸರಕಾರಿ ನೌಕರರಿಗೆ 15 ದಿನಗಳ ಯೋಗಕ್ಷೇಮ ರಜೆಯ ಜೊತೆಗೆ 50,000 ರೂ. ಗಳ ಆರೋಗ್ಯ ನಿಧಿಯನ್ನು ಒದಗಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ದೇಶದಲ್ಲಿ ಹುಟ್ಟಿದ ಮೂರನೇ ಮಗುವಿನ ಹಣೆಗೆ ‘ದೇಶದ್ರೋಹಿ’ ಮೊಹರನ್ನು ಒತ್ತಿ, ಅವುಗಳನ್ನು ಸಂವಿಧಾನದ ಸವಲತ್ತುಗಳಿಂದ ಹೊರಗಿಡಲು ಒಂದಿಷ್ಟು ರಾಜಕೀಯ ನಾಯಕರು ಒತ್ತಾಯಿಸುತ್ತಿರುವ ಹೊತ್ತಿನಲ್ಲಿ ಆಂಧ್ರ ಪ್ರದೇಶ ಸರಕಾರವು ಜನಸಂಖ್ಯೆಯ ನಿರ್ವಹಣೆಯ ಬಗ್ಗೆ ದೂರದೃಷ್ಟಿಯ, ಮುತ್ಸದ್ದಿ ನಿಲುವುಗಳನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ. ಜನಸಂಖ್ಯೆಯ ಕುರಿತಂತೆ ಆಂಧ್ರ ತೆಗೆದುಕೊಂಡಿರುವ ನಿಲುವನ್ನು ಭವಿಷ್ಯದಲ್ಲಿ ಇತರ ರಾಜ್ಯಗಳೂ ಹಂತಹಂತವಾಗಿ ಅಳವಡಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತಿದೆ.

ಭಾರತದಲ್ಲಿ ಗೋವು, ಮತಾಂತರಕ್ಕೆ ಒದಗಿದ ಗತಿಯೇ ಜನಸಂಖ್ಯೆಗೂ ಒದಗಿದೆ. ಇಲ್ಲಿ ಜನಸಂಖ್ಯಾ ನೀತಿಯೂ ಒಂದು ರಾಜಕೀಯ ವಿಷಯವೇ ಆಗಿದೆ. ಆದುದರಿಂದ, ಅದರ ಕುರಿತಂತೆ ಒಂದು ಸ್ಪಷ್ಟ ಧೋರಣೆಯನ್ನು ಹೊಂದಲು ರಾಜಕಾರಣಿಗಳಿಗೆ ಸಾಧ್ಯವಾಗಿಲ್ಲ. ಒಂದೆಡೆ ಈ ದೇಶದಲ್ಲಿ ಮುಸ್ಲಿಮರಿಂದ ಜನಸಂಖ್ಯೆ ಹೆಚ್ಚುತ್ತಿದೆ ಎನ್ನುವ ವದಂತಿಯನ್ನು ರಾಜಕೀಯ ಕಾರಣಗಳಿಗಾಗಿ ಕೆಲವು ರಾಜಕೀಯ ಪಕ್ಷಗಳು ಹರಿಯ ಬಿಡುತ್ತಿವೆ. ದೇಶದಲ್ಲಿ ಕಠಿಣ ಜನಸಂಖ್ಯಾ ನೀತಿಯನ್ನು ಜಾರಿಗೊಳಿಸಬೇಕು ಎಂದೂ ಒತ್ತಾಯಿಸುತ್ತಿವೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ‘ಹಿಂದೂಗಳು ಐದು ಮಕ್ಕಳನ್ನು ಹುಟ್ಟಿಸಬೇಕು, ಹತ್ತು ಮಕ್ಕಳನ್ನು ಹುಟ್ಟಿಸಬೇಕು’ ಎಂದೂ ಕರೆಗಳನ್ನು ನೀಡುತ್ತವೆ. ಈ ವಿರೋಧಾಭಾಸಗಳೇ ಜನಸಂಖ್ಯೆ ಬಗ್ಗೆ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಲು ಸರಕಾರಕ್ಕೆ ಬಹುದೊಡ್ಡ ಅಡ್ಡಿಯಾಗಿದೆ. ಎರಡು ಮಕ್ಕಳನ್ನಷ್ಟೇ ಹೊಂದಬೇಕು ಎನ್ನುವ ನೀತಿಯು ಭವಿಷ್ಯದಲ್ಲಿ ಹಲವು ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡಬಹುದು ಎನ್ನುವ ಎಚ್ಚರಿಕೆಯನ್ನು ಈಗಾಗಲೇ ತಜ್ಞರು ನೀಡಿದ್ದಾರೆ. ಕಠಿಣ ಜನಸಂಖ್ಯಾ ನೀತಿ ಮತ್ತು ಫರ್ಟಿಲಿಟಿ ಕುಸಿತ ನಿಧಾನಕ್ಕೆ ವಿಶ್ವದಲ್ಲಿ ವೃದ್ಧರ ಸಂಖ್ಯೆಯನ್ನು ಹೆಚ್ಚಿಸಲಿವೆ ಮತ್ತು ಯುವಕರ ಸಂಖ್ಯೆಯನ್ನು ಇಳಿಸಲಿವೆ ಎಂದು ವರದಿ ತಿಳಿಸಿದೆ. ಚೀನಾದಲ್ಲಿ 2000ದಲ್ಲಿ ಒಟ್ಟು ಜನಸಂಖ್ಯೆಯ ಶೇ. 22.9ರಷ್ಟಿದ್ದ 15ರಿಂದ 59 ವರ್ಷ ವಯೋಮಾನದವರ ಪ್ರಮಾಣ 2020ರಲ್ಲಿ ಶೇ. 9.8ಕ್ಕೆ ಕುಸಿದಿತ್ತು. ಹಾಗೆಯೇ 2010ರಲ್ಲಿ ಒಟ್ಟು ಜನಸಂಖ್ಯೆಯ ಶೇ. 13.26ರಷ್ಟಿದ್ದ ವೃದ್ಧರ ಪ್ರಮಾಣ 2020ರಲ್ಲಿ 18.70ಗೆ ಏರಿಕೆಯಾಗಿತ್ತು. ಇದು ಪಾಪ್ಯುಲೇಶನ್ ಆಫ್ ಇಂಡಿಯಾ ನೀಡಿದ ವರದಿ. ಭಾರತವೂ ಶೀಘ್ರದಲ್ಲೇ ಈ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ವರದಿಯು ಎಚ್ಚರಿಸಿದೆ.

ಜನಸಂಖ್ಯಾ ನಿರ್ವಹಣೆ ನೀತಿಯನ್ನು ಆಂಧ್ರ ಪ್ರದೇಶ ಅನಾವರಣಗೊಳಿಸಲು ಮುಖ್ಯ ಕಾರಣ, ಆಂಧ್ರ ಪ್ರದೇಶದಲ್ಲಿ ಇಳಿಕೆಯಾಗುತ್ತಿರುವ ಫಲವಂತಿಕೆ ಅಥವಾ ಫರ್ಟಿಲಿಟಿ ದರ. ಇಲ್ಲಿ 1993ರಲ್ಲಿ 3.0ಯಷ್ಟಿದ್ದ ಫಲವಂತಿಕೆ ದರವು 1.4ಕ್ಕೆ ಇಳಿದಿದೆ. ಇದು ರಾಜ್ಯದಲ್ಲಿ ಯುವಕರ ಸಂಖ್ಯೆಯನ್ನು ಇಳಿಕೆ ಮಾಡುತ್ತಿದೆ ಎಂದು ಸರಕಾರ ಆತಂಕಕ್ಕೀಡಾಗಿದೆ. ಇದು ಹೀಗೇ ಮುಂದುವರಿದರೆ ರಾಜ್ಯದಲ್ಲಿ 2047ರ ವೇಳೆಗೆ ಶೇ. 23ರಷ್ಟು ವೃದ್ಧರೇ ತುಂಬಬಹುದು. ಈ ಹಿನ್ನೆಲೆಯಲ್ಲಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಅಲ್ಲಿ ನ ಸರಕಾರ ಪ್ರೋತ್ಸಾಹ ನೀಡುತ್ತಿದೆ. ವಿಪರ್ಯಾಸವೆಂದರೆ, ದೇಶದ ಹಲವೆಡೆ ಜನಸಂಖ್ಯೆಯ ಕುರಿತು ಕಠಿಣ ನೀತಿ ಜಾರಿಯಲ್ಲಿದೆ. ಈ ನೀತಿಯ ಕಾರಣದಿಂದ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಪಂಚಾಯತ್ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಅಸ್ಸಾಂ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಹರ್ಯಾಣಗಳಲ್ಲಿ ಈ ನೀತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ. ಅಸ್ಸಾಂ 2021ರಿಂದ ಈ ನೀತಿಯನ್ನು ಜಾರಿಗೆ ತಂದಿದ್ದು, ಸರಕಾರಿ ಕೆಲಸಕ್ಕೂ ಎರಡು ಮಕ್ಕಳ ನೀತಿಯನ್ನು ಅನ್ವಯಗೊಳಿಸಿದೆ. ಮಹಾರಾಷ್ಟ್ರದಲ್ಲಿ ಗ್ರಾಮಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹಾಗೂ ಕೆಲವು ನಾಗರಿಕ ಸೇವಾ ಹುದ್ದೆಗಳಿಗೂ ಅವರು ಅನರ್ಹರಾಗುತ್ತಾರೆ. ಈ ನೀತಿಯು ಹಲವು ಅನಾಹುತಗಳಿಗೆ ಕಾರಣವಾಗಿವೆ. ಕಳೆದ ಜನವರಿಯಲ್ಲಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ ಎಂಬಾತ ತನ್ನ ಆರು ವರ್ಷದ ಪುತ್ರಿಯನ್ನು ಕಾಲುವೆಯೊಂದಕ್ಕೆ ತಳ್ಳಿ ಕೊಂದು ಹಾಕಿದ್ದಾನೆ. ಪಾಂಡುರಂಗನಿಗೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿತ್ತು. ಆದರೆ ಜನಸಂಖ್ಯಾ ನಿಯಮ ಆತ ಸ್ಪರ್ಧಿಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಯಾಕೆಂದರೆ ಈತ ಮೂರು ಮಕ್ಕಳನ್ನು ಹೊಂದಿದ್ದ. ಹಾಗೆ ನೋಡಿದರೆ ಈತನಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಉದ್ದೇಶವಿರಲಿಲ್ಲ. ಆದರೆ ಒಂದು ಗಂಡು ಮಗುವಿನ ಬಳಿಕ ಅವಳಿ ಮಕ್ಕಳಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂದಾಗ ಊರಿನ ಸರಪಂಚ ನೀಡಿದ ಸಲಹೆಯಂತೆ ಒಬ್ಬ ಹೆಣ್ಣು ಮಗುವನ್ನೇ ಕೊಂದು ಹಾಕಿ ಜೈಲು ಪಾಲಾದ. ಹಲವು ವರ್ಷಗಳ ಹಿಂದೆ ಗುಜರಾತ್‌ನ ಅಮ್ರೇಲಿ ಎಂಬಲ್ಲಿ ಇಂತಹದೇ ಒಂದು ಕೃತ್ಯ ನಡೆಯಿತು. ಅಲ್ಲಿನ ಮಹಿಳಾ ಸರಪಂಚರೊಬ್ಬರು ತನ್ನ ಮೂರನೇ ಮಗುವನ್ನು ಮುಚ್ಚಿಟ್ಟು ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಅಂತಿಮವಾಗಿ ಡಿಎನ್‌ಎ ಪರೀಕ್ಷೆ ನಡೆದು ಆಕೆ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಕೆಲವು ರಾಜ್ಯಗಳಲ್ಲಿರುವ ಈ ನಿಯಮ ಹಲವು ಅವಘಡಗಳಿಗೆ ಕಾರಣವಾಗುತ್ತಿವೆ. ಮೂರನೇ ಮಗುವನ್ನು ಹೊಂದಿದ ಗರ್ಭಿಣಿಯರು ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡಿಸಲು ಮುಂದಾಗಿ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದೊಳಗೇ ಮೂರನೇ ಮಗು ತನ್ನದಲ್ಲದ ಕಾರಣಕ್ಕೆ ಪೋಷಕರ ಅಸಹನೆಗೆ ಬಲಿಯಾಗಬೇಕಾಗುತ್ತದೆ. ಈ ನಿಯಮದ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರಾದರೂ ಯಾವ ಪ್ರಯೋಜನವೂ ಆಗಿಲ್ಲ. ಇದೇ ಸಂದರ್ಭದಲ್ಲಿ, ಪಂಚಾಯತ್ ಚುನಾವಣೆಗೆ ಈ ನಿಯಮ ಅನ್ವಯವಾಗುತ್ತದೆಯಾದರೆ, ಶಾಸಕ, ಸಂಸದರಿಗೂ ಅನ್ವಯವಾಗಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ.

ಭಾರತದ ಸಂಪನ್ಮೂಲಕ್ಕೆ ಹೋಲಿಸಿದರೆ ಜನಸಂಖ್ಯೆ ಯಾವತ್ತೂ ಸಮಸ್ಯೆಯಲ್ಲ. ನೈಸರ್ಗಿಕ ಸಂಪನ್ಮೂಲದ ಅಸಮಾನ ಹಂಚಿಕೆಯೇ ಎಲ್ಲ ಸಮಸ್ಯೆಗಳಿಗೆ ಕಾರಣ. ನಮ್ಮ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಸರಕಾರ ಭಾವಿಸಬೇಕು. ಎರಡು ಮಗುವಿಗೆ ಬದ್ಧರಾದರೆ ಭವಿಷ್ಯದಲ್ಲಿ ಯುವಕರು-ವೃದ್ಧರ ನಡುವಿನ ಅನುಪಾತದಲ್ಲಿ ಏರುಪೇರುಗಳಾಗಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಜನಸಂಖ್ಯಾ ನೀತಿಯ ಬಗ್ಗೆ ಸ್ಪಷ್ಟ ನಿಲುವೊಂದನ್ನು ತಳೆಯಲು ಸಮಯ ಬಂದಿದೆ. ಮುಖ್ಯವಾಗಿ ಜನಸಂಖ್ಯಾ ವಿಷಯವನ್ನು ರಾಜಕೀಯ ದುರುದ್ದೇಶಗಳಿಗೆ ಬಳಕೆಯಾಗಲು ಅವಕಾಶ ನೀಡದೆ, ದೇಶದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಗಂಭೀರ ಚರ್ಚೆಗೆ ಒಳಪಡಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News