ಸುಪ್ರೀಂಕೋರ್ಟ್ ಬುಡಕ್ಕೆ ಬೆಂಕಿಯಿಟ್ಟ ಎನ್‌ಸಿಇಆರ್‌ಟಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಎನ್‌ಸಿಇಆರ್‌ಟಿಯು ಪಠ್ಯಪುಸ್ತಕದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಕೊನೆಗೂ ನ್ಯಾಯಾಲಯದ ಗಮನಕ್ಕೆ ಬಂದಿದೆ. ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಎಂಬ ಅಧ್ಯಾಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ವಿವಾದಿತ ಪಠ್ಯ ಪುಸ್ತಕವನ್ನು ನಿಷೇಧಿಸಿದೆ ಮಾತ್ರವಲ್ಲ, ವಿವರಣೆಯನ್ನು ಕೋರಿ ಎನ್‌ಸಿಇಆರ್‌ಟಿ ನಿರ್ದೇಶಕರಿಗೆ ನೋಟಿಸ್ ನೀಡಿದೆ. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಎನ್‌ಸಿಇಆರ್‌ಟಿಯು ಪಠ್ಯಪುಸ್ತಕದಲ್ಲಿ ನಡೆಸುತ್ತಿರುವ ಹಸ್ತಕ್ಷೇಪಗಳ ಬಗ್ಗೆ ಹಲವು ಶಿಕ್ಷಣ ತಜ್ಞರು, ಇತಿಹಾಸ ತಜ್ಞರು, ವಿಚಾರವಾದಿಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಎನ್‌ಸಿಇಆರ್‌ಟಿಯ ಬೇಜವಾಬ್ದಾರಿಯ ಬಗ್ಗೆ ತೀವ್ರವಾಗಿ ಸ್ಪಂದಿಸಿದೆ. ಸುಪ್ರೀಂಕೋರ್ಟ್ ನ ಸಿಟ್ಟಿಗೆ ಕೇಂದ್ರ ಸರಕಾರವೂ ಬೆಚ್ಚಿ ಬಿದ್ದಿದ್ದು, ಪಠ್ಯದಲ್ಲಾಗಿರುವ ಅಚಾತುರ‌್ಯಕ್ಕೆ ಕ್ಷಮೆಯಾಚನೆ ಮಾಡಿದೆ. ಪ್ರಧಾನಿ ಮೋದಿಯವರೂ ಈ ಬಗ್ಗೆ ಪ್ರತ್ರಿಕಿಯಿಸಿದ್ದಾರೆ.
ಯಾವಾಗ ತನ್ನ ಬುಡಕ್ಕೇ ಬೆಂಕಿ ಇಡುವುದಕ್ಕೆ ಎನ್‌ಸಿಇಆರ್‌ಟಿ ಮುಂದಾಯಿತೋ ಆಗ ಸುಪ್ರೀಂಕೋರ್ಟ್‌ಗೆ ಪಠ್ಯ ಪುಸ್ತಕದ ಬಗ್ಗೆ ಕಾಳಜಿ ಬಂದು ಬಿಟ್ಟಿತು. ಇಷ್ಟಕ್ಕೂ ಎನ್‌ಸಿಇಆರ್‌ಟಿಯು ವಿಜ್ಞಾನ, ಇತಿಹಾಸ ವಿಷಯಗಳಿಗೆ ಸಂಬಂಧಿಸಿ ಪಠ್ಯದಲ್ಲಿ ಮಾಡಿದ ರಾದ್ಧಾಂತಕ್ಕೆ ಹೋಲಿಸಿದರೆ, ಅಷ್ಟೇನೂ ಗಾಬರಿ ಪಡಬೇಕಾದ ಅಧ್ವಾನ ಇದಾಗಿರಲಿಲ್ಲ. ಎಂಟನೇ ತರಗತಿಯ ಪಠ್ಯ ಪುಸ್ತಕದಲ್ಲಿ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯವನ್ನು ಎನ್‌ಸಿಇಆರ್‌ಟಿಯು ಸೇರಿಸಿತ್ತು. ವಿದ್ಯಾರ್ಥಿಗಳಿಗೆ ನ್ಯಾಯಾಂಗ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶವನ್ನು ಈ ಪಠ್ಯ ಹೊಂದಿದೆ. ಆದರೆ ಎನ್‌ಸಿಇಆರ್‌ಟಿಯು ಒಂದು ಹೆಜ್ಜೆ ಮುಂದೆ ಹೋಗಿ, ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಉಪಶೀರ್ಷಿಕೆಯನ್ನು ಇದರಲ್ಲಿ ಸೇರಿಸಿತು. ಅಲ್ಲಿ, ‘‘ನ್ಯಾಯಾಂಗದ ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರ ಮತ್ತು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನು ಕಾರ್ಯ ವಿಧಾನಗಳು, ಕಳಪೆ ಮೂಲ ಸೌಕರ್ಯ’’ ಇತ್ಯಾದಿಗಳನ್ನು ಚರ್ಚಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯ ವಿವಿಧ ಸವಾಲುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಭ್ರಷ್ಟಾಚಾರದಿಂದಾಗಿ ಬಡವರು ನ್ಯಾಯ ಪಡೆಯುವಲ್ಲಿ ತೊಡಕುಗಳು ಎದುರಾಗಬಹುದು ಎನ್ನುವುದನ್ನೂ ಈ ಪಠ್ಯ ಹೇಳುತ್ತದೆ. ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಪ್ರತಿದಿನ ಚರ್ಚೆಯ ವಿಷಯವಾಗುತ್ತಿದೆ. ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ನೀಡುವ ತೀರ್ಪುಗಳಲ್ಲಿರುವ ವಿರೋಧಾಭಾಸಗಳು, ನಿವೃತ್ತಿಯ ಬಳಿಕ ಅವರು ಸರಕಾರದಿಂದ ಪಡೆಯುತ್ತಿರುವ ಸವಲತ್ತುಗಳು ಭಾರೀ ಟೀಕೆಗಳಿಗೆ ಕಾರಣವಾಗಿವೆ. ಹೊರಗಿನ ಒತ್ತಡಗಳಿಗೆ ನ್ಯಾಯಾಧೀಶರು ಬಲಿಯಾಗುತ್ತಿದ್ದಾರೆ ಎನ್ನುವ ಆರೋಪಗಳೂ ಹೆಚ್ಚುತ್ತಿವೆ. ಇತ್ತೀಚೆಗೆ ಓರ್ವ ನ್ಯಾಯಾಧೀಶರ ನಿವಾಸದಲ್ಲಿ ಪತ್ತೆಯಾದ ಹಣವೂ ಕೂಡ ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನೆಗೊಳಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎನ್‌ಸಿಆರ್‌ಟಿಯು ಪಠ್ಯದಲ್ಲಿ ಪ್ರಸ್ತಾಪಿಸಿದ ವಿಷಯ ಸತ್ಯಕ್ಕೆ ದೂರವಾದುದೇನೂ ಅಲ್ಲ. ಆದರೆ ಸುಪ್ರೀಂಕೋರ್ಟ್ ಮಾತ್ರ ಕುಂಬಳಕಾಯಿ ಕದ್ದವನಂತೆ ಹೆಗಲು ಮುಟ್ಟಿ ನೋಡಿಕೊಂಡಿದೆ.
ಮುಖ್ಯವಾಗಿ ಎಂಟನೇ ತರಗತಿಯ ಪಠ್ಯದಲ್ಲಿ ಇವುಗಳನ್ನು ಚರ್ಚಿಸುವ ಅಗತ್ಯವಿದೆಯೇ ಎನ್ನುವುದು ಸಂವಿಧಾನ ತಜ್ಞರ ಮೊದಲ ಆಕ್ಷೇಪವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಪಠ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ಎದುರಿಸುವ ಭ್ರಷ್ಟಾಚಾರಗಳನ್ನು ಪ್ರಸ್ತಾಪಿಸುವುದಾದರೆ, ಕಾರ್ಯಾಂಗ ಮತ್ತು ಶಾಸಕಾಂಗಗಳ ವಿಷಯಗಳಲ್ಲೂ ಇವುಗಳನ್ನು ಚರ್ಚಿಸಬೇಡವೆ? ಎನ್ನುವುದು ಇನ್ನೊಂದು ವಾದ. ಇಂದು ಭ್ರಷ್ಟಾಚಾರ ನ್ಯಾಯ ವ್ಯವಸ್ಥೆಗೆ ಮಾತ್ರ ಸವಾಲಾಗಿರುವುದಲ್ಲ, ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯವೈಖರಿಯಲ್ಲೂ ಇದು ಪರಿಣಾಮವನ್ನು ಬೀರುತ್ತಿದೆ. ಆದರೆ ವಿದ್ಯಾರ್ಥಿಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾತ್ರ ತಪ್ಪು ತಿಳುವಳಿಕೆಯನ್ನು ಬಿತ್ತಿದಂತಾಗುತ್ತದೆ ಎನ್ನುವುದು ಸುಪ್ರೀಂಕೋರ್ಟ್‌ನ ಆತಂಕ. ಈ ಪಠ್ಯದಿಂದ ನ್ಯಾಯಾಂಗದ ಮಾನಹರಣವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ನ್ಯಾಯಾಲಯವು ಈ ಪಠ್ಯಕ್ಕೆ ನಿಷೇಧ ಹೇರಿದ್ದು ಮಾತ್ರವಲ್ಲ, ಎಲ್ಲ ಪ್ರತಿಗಳನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್‌ನ ಆತಂಕ, ಕಳವಳ, ಆಕ್ರೋಶವನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದಿಲ್ಲ. ಆದರೆ, ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವ ಸಾಲುಗಳಿವೆ ಎಂದು ಗದ್ದಲ ಎಬ್ಬಿಸಿರುವ ಸುಪ್ರೀಂಕೋರ್ಟ್ ವಿಜ್ಞಾನ, ಇತಿಹಾಸಗಳಲ್ಲಿ ಎನ್‌ಸಿಇಆರ್‌ಟಿ ಮಾಡಿರುವ ಅಧ್ವಾನಗಳ ಬಗ್ಗೆ ಮಾತ್ರ ಯಾಕೆ ಕುರುಡಾಗಿದೆೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಒಂದೆಡೆ ವಿಜ್ಞಾನ ಪಠ್ಯದಲ್ಲಿ ವಿಜ್ಞಾನೇತರ ವಿಷಯಗಳನ್ನು ತುರುಕುವ ಪ್ರಯತ್ನ ನಡೆಯುತ್ತಿದೆ. ಪುರಾಣಗಳನ್ನು ವಿಜ್ಞಾನದೊಳಗೆ ತುರುಕಿ ಅದನ್ನು ವಿಜ್ಞಾನದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಸುಪ್ರೀಂಕೋರ್ಟ್‌ಗೆ ಇದು ಈ ದೇಶದ ವೈಜ್ಞಾನಿಕ, ವೈಚಾರಿಕ ಚಿಂತನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಈವರೆಗೆ ಅನ್ನಿಸಿಲ್ಲ. ಎನ್‌ಸಿಇಆರ್‌ಟಿಯ ಈ ನಡೆಯು ಶಿಕ್ಷಣದ ಗುಣಮಟ್ಟವನ್ನು ಕುಗ್ಗಿಸುತ್ತಿರುವ ಬಗ್ಗೆ ಯಾವ ಆತಂಕವೂ ಸುಪ್ರೀಂಕೋರ್ಟ್‌ಗೆ ಇಲ್ಲ. ಇತಿಹಾಸ ಪಠ್ಯದಲ್ಲಿ ಎನ್‌ಸಿಇಆರ್‌ಟಿ ಮಾಡುತ್ತಿರುವ ದಾಳಿಯು ಭಾರತದ ಇತಿಹಾಸದ ಮೇಲೆ ಮಾತ್ರವಲ್ಲ, ವರ್ತಮಾನದ ಮೇಲೂ ಪರಿಣಾಮಗಳನ್ನು ಬೀರುತ್ತಿದೆ. ಸಂಘಪರಿವಾರದ ಅಜೆಂಡಾಗಳಿಗೆ ಪೂರಕವಾಗಿ ಇತಿಹಾಸವನ್ನು ಪಠ್ಯದಲ್ಲಿ ತಿರುಚಲಾಗುತ್ತಿದೆ. ಮಾತ್ರವಲ್ಲ, ಕೆಲವು ಪಠ್ಯಗಳಿಗೇ ಕತ್ತರಿ ಹಾಕಲಾಗುತ್ತಿದೆ. ಈ ಹಿಂದೆ ಎಂಟನೇ ತರಗತಿ ಪಠ್ಯ ಪುಸ್ತಕಗಳಿಂದ ಟಿಪ್ಪು ಸುಲ್ತಾನ್, ರಝಿಯಾ ಸುಲ್ತಾನ್ ಹಾಗೂ ನೂರ್ ಜಹಾನ್‌ರಂತಹ ಚಾರಿತ್ರಿಕ ವ್ಯಕ್ತಿಗಳನ್ನು ಕೈ ಬಿಡಲಾಗಿತ್ತು. ಸರಕಾರ ಈ ಕೃತ್ಯವನ್ನು ಸಮರ್ಥಿಸಿಕೊಂಡಿತ್ತು. ಭಾರತದ ಇತಿಹಾಸದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೈದರಲಿ, ಟಿಪ್ಪು ಸುಲ್ತಾನ್‌ರ ಬದುಕಿನ ತುಣುಕುಗಳನ್ನು ಕೈ ಬಿಟ್ಟು ಬೋಧಿಸುವ ಇತಿಹಾಸ ಈ ದೇಶದ ಚಿತ್ರಣವನ್ನು ಪೂರ್ಣವಾಗಿ ತೆರೆದಿಡಲಾರದು ಎಂದು ಈವರೆಗೆ ಸುಪ್ರೀಂಕೋರ್ಟ್‌ಗೆ ಅನ್ನಿಸದೇ ಇರುವುದು ಖೇದಕರವಾಗಿದೆ. ‘ಭ್ರಷ್ಟಾಚಾರ’ವನ್ನು ಪ್ರಸ್ತಾಪಿಸಿದ ಕಾರಣಕ್ಕೇ ನ್ಯಾಯಾಂಗ ವ್ಯವಸ್ಥೆಯ ಮಾನಹರಣವಾಯಿತು ಎಂದು ಆತಂಕಪಡುವ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಆಗಿಹೋಗಿರುವ ಭಾರತದ ಮಹತ್ವದ ಘಟನೆಗಳನ್ನು, ಮಹತ್ವದ ವ್ಯಕ್ತಿಗಳನ್ನು ರಾಜಕೀಯ ಕಾರಣಗಳಿಗಾಗಿ ಕಿತ್ತು ಹಾಕುತ್ತಿರುವುದರ ಬಗ್ಗೆ ಯಾಕೆ ಮೌನವಾಗಿದೆ ಎನ್ನುವ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಆದುದರಿಂದ ಎನ್‌ಸಿಇಆರ್‌ಟಿಯು ಇತಿಹಾಸ, ವಿಜ್ಞಾನ ಸೇರಿದಂತೆ ಇತರ ಭಾಗಗಳಲ್ಲಿ ಮಾಡಿರುವ ಅಧ್ವಾನಗಳನ್ನೂ ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಂಡು ಅವುಗಳ ಕುರಿತಂತೆಯೂ ತೀರ್ಪುಗಳನ್ನು ನೀಡುವುದು ಶಿಕ್ಷಣದ ಗುಣಮಟ್ಟವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ತನ್ನ ಮಾನದ ಕುರಿತಂತೆ ಇರುವ ಕಾಳಜಿಯನ್ನು ವಿಜ್ಞಾನ, ಇತಿಹಾಸ ಕ್ಷೇತ್ರಗಳಿಗೆ ಸಂಬಂಧಿಸಿಯೂ ಸುಪ್ರೀಂಕೋರ್ಟ್ ಪ್ರದರ್ಶಿಸಬೇಕಾಗಿದೆ. ಇದು ಒಟ್ಟು ಭಾರತದ ಶಿಕ್ಷಣದ ಮಾನದ ಪ್ರಶ್ನೆಯಾಗಿದೆ.