5,401 ಶಿಕ್ಷಕರ ಕೊರತೆಯ ನಡುವೆ ರಾಯಚೂರು ಜಿಲ್ಲೆಯಲ್ಲಿ ಇಂದಿನಿಂದ ಶಾಲೆ ಆರಂಭೋತ್ಸವ
ರಾಯಚೂರು, ಮೇ 28: ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ, ನೂರಾರು ಶಾಲೆಗಳ ಕೊಠಡಿ ಶಿಥಿಲಾವಸ್ಥೆ ಹಾಗೂ ಕೋವಿಡ್ ಸೋಂಕಿನ ಆತಂಕದ ನಡುವೆ ಮೇ 29ರಿಂದ ಬೇಸಿಗೆ ರಜೆ ಮುಗಿದು ಶಾಲೆಗಳು ಪುನರ್ ಆರಂಭವಾಗಲಿದೆ.
ಈ ಬಾರಿ ಮುಂಗಾರು ಅವಧಿಗೂ ಮುನ್ನವೇ ಆರಂಭವಾಗಿದ್ದು, ಕಳೆದ ವಾರದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲ ಶುರುವಾಗಿದ್ದರಿಂದ ಅನೇಕ ಕೊಠಡಿಗಳು ಸೋರುತ್ತಿವೆ, ಮಕ್ಕಳು ಹಾಗೂ ಶಿಕ್ಷಕರು ಆತಂಕದಲ್ಲಿಯೇ ಬೋಧನೆ ಮಾಡುವಂತಾಗಿದೆ.
ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯೂ ದೊಡ್ಡ ತಲೆನೋವಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮೂಲಭೂತ ಸೌಲಭ್ಯ ಹಾಗೂ ಖಾಲಿ ಹುದ್ದೆಗಳನ್ನು ಬೋಧನೆ ಮಾಡದೇ ಶಿಕ್ಷಣ ಅಧಿಕಾರಿಗಳು ಎಸೆಸೆಲ್ಸಿ, ಪಿಯುಸಿಯ ಫಲಿತಾಂಶ ಟಾಪ್ 10ನಲ್ಲಿ ಬರಬೇಕು ಎಂದು ಬಿ.ಇಒ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಸರಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಣೆಗೆ ಪ್ರಯತ್ನಿಸುತ್ತಿಲ್ಲ ಎನ್ನುವುದು ಇಲ್ಲಿನ ಶಿಕ್ಷಣ ಪ್ರೇಮಿಗಳ, ಪ್ರಗತಿಪರರ ಆರೋಪ.ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡದ ರಾಜ್ಯ ಸರಕಾರ ರಜೆ ದಿನಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿಗೆ ಮುಂದಾಗಿಲ್ಲ, ಇದೀಗ ಶಿಥಿಲ ಶಾಲೆಗಳಿಂದಲೇ ಶಾಲಾ ಪ್ರಾರಂಭ ಮಾಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಅತಿಹೆಚ್ಚು ಶಿಕ್ಷಕರ ಹುದ್ದೆ ಖಾಲಿ: ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆ 32ನೇ ಸ್ಥಾನ ಪಡೆದಿತ್ತು. ಇದಕ್ಕೆ ಕಾರಣ ಶಿಕ್ಷಕರ ಕೊರತೆ ಹಾಗೂ ಶಾಲೆಗಳ ಕೊಠಡಿಗಳ ಅವ್ಯವಸ್ಥೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿಯೇ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿದ್ದು ರಾಯಚೂರು ಜಿಲ್ಲೆ ಎನ್ನುವುದು ದುರ್ದೈವದ ಸಂಗತಿ. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 4,343 ಹಾಗೂ ಪ್ರೌಢಶಾಲೆಗಳಲ್ಲಿ 1,040 ಸೇರಿ ಒಟ್ಟು 5,401 ಶಿಕ್ಷಕರ ಹುದ್ದೆ ಖಾಲಿ ಇದೆ. ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡದೇ ರಾಜ್ಯ ಸರಕಾರ ಕೇವಲ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಿಕೊಂಡು ತೃಪ್ತಿ ಪಡಿಸುವ ಕೆಲಸ ಮಾಡುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 1,517 ಸರ್ಕಾರಿ ಪ್ರಾಥಮಿಕ ಶಾಲೆಗಳು, 213 ಸರಕಾರಿ ಪ್ರೌಢಶಾಲೆಗಳಿವೆ. 7 ತಾಲೂಕುಗಳಲ್ಲಿ 10,519 ಪ್ರಾಥಮಿಕ ಶಾಲಾ ಕೊಠಡಿಗಳಿದ್ದು ಈ ಪೈಕಿ 930 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.
ತಾಲೂಕುವಾರು ದೇವದುರ್ಗ ತಾಲೂಕಿನಲ್ಲಿ 191 ಶಾಲಾ ಕೊಠಡಿಗಳು ಶಿಥಿಗೊಂಡಿವೆ, ಲಿಂಗಸೂಗೂರಿನಲ್ಲಿ 143, ಮಾನವಿ 92, ರಾಯಚೂರು ಗ್ರಾಮೀಣ 114, ರಾಯಚೂರು ನಗರ 66, ಸಿಂಧನೂರಿನಲ್ಲಿ 159, ಮಸ್ಕಿಯಲ್ಲಿ 165 ಸೇರಿ ಒಟ್ಟು 930 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ.
ಪ್ರೌಢಶಾಲೆಗಳ ಕೊಠಡಿಗಳೂ ಸಹ ಇದಕ್ಕಿಂತ ಬಿನ್ನವಾಗಿಲ್ಲ, ಜಿಲ್ಲೆಯಲ್ಲಿ ಒಟ್ಟು 3,549 ಪ್ರೌಢಶಾಲಾ ಕೊಠಡಿಗಳಿವೆ. ಇವುಗಳಲ್ಲಿ ಸುಮಾರು 217 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ, ಶೈಕ್ಷಣಿಕವಾಗಿ ಅತಿ ಹಿಂದುಳಿದ ದೇವದುರ್ಗ ತಾಲೂಕಿನಲ್ಲಿ ಒಟ್ಟು ಪ್ರೌಢಶಾಲೆಗಳಲ್ಲಿ 18 ಕೊಠಡಿಗಳು ಶಿಥಿಲಗೊಂಡಿವೆ, ಲಿಂಗಸೂಗುರು ತಾಲೂಕಿನಲ್ಲಿ 41, ಮಾನ್ವಿ ತಾಲೂಕಿನಲ್ಲಿ 33, ರಾಯಚೂರು ಗ್ರಾಮೀಣದಲ್ಲಿ 38, ರಾಯಚೂರು ನಗರದಲ್ಲಿ 9, ಸಿಂಧನೂರಿನಲ್ಲಿ 45 ಸೇರಿ ಜಿಲ್ಲೆಯಲ್ಲಿ 217 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ.
ಕೋವಿಡ್ ಭಯ; ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ಹಾಗೂ ವಯೋವೃದ್ಧರೂ, ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಶೀತ ಜ್ವರ ನೆಗಡಿ ಕಾಣಿಸುವ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಶಿಕ್ಷಣ ಇಲಾಖೆ ಅದೇಶಿಸಿದೆ. ಈ ನಡುವೆ ಮಳೆ ಶುರುವಾಗಿದ್ದು ಮಕ್ಕಳಲ್ಲಿ ಶೀತ,ಜ್ವರ ಕಾಣಿಸುವ ಕಾರಣ ಪಾಲಕರು ಮಕ್ಕಳಿಗೆ ಶಾಲೆಗೆ ಕಳಿಸಲು ಹಿಂದೇಟು ಹಾಕುವಂತಾಗಿದೆ. ಇದಕ್ಕೆ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಸ್ವಚ್ಛತೆ ಕೈಗೊಂಡು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡು ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಮುಂದಾಗಿದ್ದಾರೆ.
ಶಿಕ್ಷಣ ಇಲಾಖೆಯಿಂದ ಸಭೆ ಮಾಡಿದ್ದು ಮಕ್ಕಳಿಗೆ ಶಾಲೆಗೆ ಕರೆತರಲು ಕಸರತ್ತು ನಡೆಸಲಾಗುತ್ತಿದೆ. ಪಾಲಕರ ಸಭೆ ಮಾಡಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮನೆಮನೆಗೆ ಭೇಟಿ ನೀಡಿ ಶಿಕ್ಷಕರು ಮನ ಒಲಿಸುತ್ತಿದ್ದಾರೆ.
ಸರಕಾರದಿಂದ ಶೇ.80ರಷ್ಟು ಪಠ್ಯಪುಸ್ತಕ ಸರಬರಾಜು ಮಾಡಲಾಗಿದ್ದು, ಎಲ್ಲ ಶಾಲೆಗಳಿಗೆ ರವಾನಿಸಲಾಗಿದೆ. ಮೇ 29ರಂದು ಮಕ್ಕಳಿಗೆ ಪಠ್ಯಪುಸ್ತಕ ನೀಡಿ ಸಿಹಿ ಭೋಜನ ನೀಡಿ ಕಳಿಸಿ ಮೇ 30ರಿಂದ ತರಗತಿ ಆರಂಭವಾಗಲಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಂತಹ ಕೊಠಡಿಗಳಲ್ಲಿ ಭೋಧನೆ ಮಾಡದಂತೆ ಎಚ್‌ಎಂಗಳಿಗೆ, ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ರಾಯಚೂರು ತಾಲೂಕಿನಲ್ಲಿ 638 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು.
-ಈರಣ್ಣ ಕೋಸಗಿ, ಬಿಇಒ, ರಾಯಚೂರು