×
Ad

ಬಾಬಾ ಬುಡಾನ್‌ಗಿರಿ ಗೋರಿಗಳ ಉತ್ಖನನ ಹೇಳಿಕೆ; ಬಿಜೆಪಿ ಮುಖಂಡರಿಂದ ಕೋಮು ಗಲಭೆ ಷಡ್ಯಂತ್ರ : ಫ್ರಕುದ್ದೀನ್ ಶಾಖಾದ್ರಿ ಆರೋಪ

Update: 2025-08-14 00:15 IST

ಚಿಕ್ಕಮಗಳೂರು, ಆ.13 : ಧರ್ಮಸ್ಥಳದಲ್ಲಿ ಸಮಾಧಿಗಳ ಉತ್ಖನನ ಮಾಡುತ್ತಿರುವಂತೆಯೇ ಗುರು ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದ ಆವರಣದಲ್ಲಿರುವ ಗೋರಿಗಳಲ್ಲೂ ಉತ್ಖನ ಮಾಡಬೇಕು ಎಂದು ಬಿಜೆಪಿ ಮುಖಂಡರು ಕೋಮ ಸಾಮರಸ್ಯ ಹದಗೆಡಿಸುವ ಹೇಳಿಕೆ ನೀಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಬಾಬಾ ಬುಡಾನ್ ವಂಶಸ್ಥ ಸೈಯದ್ ಫ್ರಕುದ್ದೀನ್ ಶಾಖಾದ್ರಿ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರ ಮತ್ತು ಎಸ್‌ಐಟಿ ತಂಡ ತನಿಖೆ ಮೂಲಕ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಅತ್ಯಾಚಾರ ಪ್ರಕರಣಗಳ ಸತ್ಯ ಹೊರ ತರಲು ಮುಂದಾಗಿರುವ ಹೊತ್ತಿನಲ್ಲಿ ಜಿಲ್ಲೆಯ ಕೆಲ ಮುಖಂಡರು ಪ್ರಕರಣದ ದಿಕ್ಕು ತಪ್ಪಿಸುವ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಉತ್ಖನನದಂತೆ ಬಾಬಾ ಬುಡಾನ್‌ಗಿರಿಯಲ್ಲಿರುವ ಗೋರಿಗಳನ್ನೂ ಉತ್ಖನನ ಮಾಡಬೇಕು ಎನ್ನುವ ಮೂಲಕ ಧರ್ಮಸ್ಥಳ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದ ಅವರು, ಬಿಜೆಪಿಯವರ ಈ ಹೇಳಿಕೆಯಿಂದ ಒಂದು ಸಮುದಾಯದವರ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ನೋವುಂಟಾಗಿದೆ. ಧರ್ಮಸ್ಥಳದ ಉತ್ಖನಕ್ಕೂ, ಬಾಬಾ ಬುಡಾನ್ ದರ್ಗಾದ ಆವರಣದಲ್ಲಿರುವ ಗೋರಿಗಳ ಉತ್ಖನಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.

ಗೋರಿಗಳ ಉತ್ಖನನ ಮಾಡುವುದೇ ಆದರೆ ಔದಂಬರ ವೃಕ್ಷ ಎಷ್ಟು ವರ್ಷಗಳ ಪುರಾತನ ಕಾಲದ್ದು ಎಂಬ ಬಗ್ಗೆ ಇತಿಹಾಸ ಹೊರ ತೆಗೆಯಲಿ, ಬಾಬಾ ಬುಡಾನ್ ದರ್ಗಾದಲ್ಲಿರುವ ಪಾದುಕೆಗಳು ಅಲ್ಲಿಗೆ ಹೇಗೆ ಬಂತು?, ಆ ಪಾದುಕೆಗಳನ್ನು ನೀಡಿದವರು ಯಾರು? ಎಂಬ ಇತಿಹಾಸದ ಬಗ್ಗೆ ಅಧ್ಯಯನ ನಡೆಯಲಿ. ಇದಕ್ಕೆ ನಾವೂ ಸಹಕಾರ ನೀಡುವುದರೊಂದಿಗೆ ರಾಜ್ಯ ಸರಕಾರವನ್ನೂ ಆಗ್ರಹಿಸುತ್ತೇವೆ. ಇದರ ಹೊರತಾಗಿ ಗೋರಿಗಳ ಉತ್ಖನನ ನಡೆಯಲಿ ಎಂಬ ಬಿಜೆಪಿಯವರ ಹೇಳಿಕೆ ಸಮುದಾಯದವರ ಭಾವನೆಗಳನ್ನು ಕೆರಳಿಸಿ ಕೋಮುಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರ ಷಡ್ಯಂತ್ರವನ್ನು ಜಿಲ್ಲೆಯ ಜನರು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ಸಾಮರಸ್ಯ ಹಾಳು ಮಾಡುವ ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಜನತೆ ಸೊಪ್ಪು ಹಾಕಬಾರದು ಎಂದು ಸೈಯದ್ ಫ್ರಕುದ್ದೀನ್ ಶಾಖಾದ್ರಿ ಮನವಿ ಮಾಡಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವ ರಘು ಸಕಲೇಶಪುರ ಎಂಬಾತ ಗಡಿಪಾರು ಆಗಿರುವ ವ್ಯಕ್ತಿ. ಈತ ಚಿಕ್ಕಮಗಳೂರು ಜಿಲ್ಲೆಗೆ ಬಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಜನರ ಭಾವನೆ ಕೆರಳಿಸುವ ಕೃತ್ಯ ಎಸಗುತ್ತಿದ್ದಾನೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಆದ್ದರಿಂದ ಪೊಲೀಸ್ ಇಲಾಖೆ ಈತನ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು.

ಸೈಯದ್ ಫಕ್ರುದ್ದೀನ್ ಶಾಖಾದ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News