ಶಿವಮೊಗ್ಗ | ಆತ್ಮಹತ್ಯೆಗೆ ಮುಂದಾಗಿದ್ದ ಯುವಕ : ಮನಃಪರಿವರ್ತಿಸಿ ಊರಿಗೆ ಕಳಿಸಿದ ಎಸ್‌ಐ
ಶಿವಮೊಗ್ಗ : ಜಿಲ್ಲೆಯ ಪ್ರವಾಸಿ ತಾಣ ಜೋಗ ಜಲಪಾತದಲ್ಲಿ ಜಿಗಿದು ಅತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಾಪಾರಿಯೊಬ್ಬರಿಗೆ ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ಬುದ್ದಿ ಹೇಳಿ ಆತ್ಮಹತ್ಯೆ ನಿರ್ಧಾರ ಬದಲಿಸುವಂತೆ ಮಾಡಿ ಆತನನ್ನು ಊರಿಗೆ ಕಳುಹಿಸಿದ ಘಟನೆ ವರದಿಯಾಗಿದೆ.
ಎಸ್‌ಐ ನಾಗರಾಜ್ ಜೋಗ ಜಲಪಾತದ ಹತ್ತಿರ ರೌಂಡ್ಸ್ ನಲ್ಲಿ ಇದ್ದಾಗ ಒಬ್ಬ ವ್ಯಕ್ತಿಯು ಜೋಗ ಜಲಪಾತದಲ್ಲಿರುವ ಇರುವ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದಾರೆ ಎಂಬ ಮಾಹಿತಿ ಪಡೆದಿದ್ದರು.
ಬಳಿಕ ಅನುಮಾನ ಬಂದು ವಿಚಾರಿಸಿದ್ದರು. ಆಗ ಆತ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಎನ್ನುವುದು ಗೊತ್ತಾಗಿದೆ. ಈ ವೇಳೆ ವಿಚಾರಿಸಿದಾಗ ʼವ್ಯಾಪಾರದಲ್ಲಿ ನಷ್ಟವಾಗಿದೆ. ತನ್ನ ಪೋಷಕರ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ, ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆ ಹೊಂದಿದ್ದೇನೆ. ಬೇಸರದಿಂದ ಸುಮಾರು 20 ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದೇನೆ. ಈಗ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾಗಿ ವಿವರಿಸಿದ್ದನು. ಜೋಗ ಜಲಪಾತಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿದ್ದಾಗಿ ತಿಳಿಸಿದ್ದನು. ಬಳಿಕ ಆತನಿಗೆ ಧೈರ್ಯ ತುಂಬಿ ಮನವೊಲಿಸಿ ಅವರ ಪೋಷಕರನ್ನು ಫೋನ್ ಮುಖಾಂತರ ಸಂಪರ್ಕಿಸಿ, ವಾಪಸ್ ಬೆಂಗಳೂರಿನ ಅವನ ಮನೆಗೆ ಕಳಿಸಿ ಕೊಟ್ಟಿದ್ದಾರೆ.