‘ಸಂಪುಟ ವಿಸ್ತರಣೆ’ ಹೈಕಮಾಂಡ್ ತೀರ್ಮಾನವೇ ಅಂತಿಮ: ಕೆ.ಎಚ್.ಮುನಿಯಪ್ಪ
ಶಿವಮೊಗ್ಗ : ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ಈ ಬಗ್ಗೆ ಯಾವುದೇ ಉತ್ತರ ನೀಡುವುದಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ನವೆಂಬರ್ ಕ್ರಾಂತಿ, ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು 30-35 ವರ್ಷಗಳಿಂದ ಪಾರ್ಲಿಮೆಂಟ್ ಬಗ್ಗೆ ತಿಳಿದವನಾಗಿದ್ದೇನೆ. ಹೀಗಾಗಿ ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಏನೋ ಹೇಳಿದರೆ, ಮತ್ತೇನೋ ಬರೆದರೆ ಕಷ್ಟವಾಗುತ್ತದೆ. ಸಚಿವ ಸಂಪುಟದ ಬಗ್ಗೆ ಸಿಎಂ ಹೇಳಿದ್ದಾರೆಂದರೆ ಸಂಪುಟ ಬದಲಾವಣೆ ಆಗುತ್ತೆ ಎಂದೇ ಅರ್ಥ ಎಂದರು.
ಸಂಪುಟ ವಿಸ್ತರಣೆಗೆ ಯಾರು ನೇತೃತ್ವ ವಹಿಸುತ್ತಾರೋ ಅವರೇ ಸಿಎಂ ಅಭ್ಯರ್ಥಿ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ರದ್ದತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ.ಆದರೆ ಅವರು ಅನರ್ಹ ಆಗಿದ್ದರೆ ಎಪಿಎಲ್ ಕಾರ್ಡ್ ಮಾಡುತ್ತೇವೆ ಎಂದರು.
ಪಡಿತರ ವಿತರಕರಿಗೆ ಕಮಿಷನ್ ಹಣವನ್ನು ಒಂದು ವಾರದಲ್ಲಿ ಕೊಡುತ್ತೇವೆ. ಕೇಂದ್ರದಿಂದ ಸ್ವಲ್ಪ ಹಣ ಬರುವುದು ತಡ ಆಗಿದೆ. ವಾರದೊಳಗೆ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ 1,25,95,000 ದಷ್ಟು ಅಂತೋದ್ಯಯ ಮತ್ತು ಬಿಪಿಎಲ್ ಕಾರ್ಡ್ ಇವೆ. ನಾಲ್ಕುವರೆ ಕೋಟಿ ಜನ ಇದರ ಉಪಯೋಗ ಪಡೆಯುತ್ತಾರೆ. ಶಿವಮೊಗ್ಗದಲ್ಲಿ 3.81 ಲಕ್ಷ ಕಾರ್ಡ್‌ಗಳಿದ್ದು, 17 ಲಕ್ಷ ಜನ ಸೌಲಭ್ಯ ಪಡೆಯುತ್ತಿದ್ದಾರೆ. ಬಿಪಿಎಲ್ ಕಾರ್ಡ್‌ನ ಮಾನದಂಡಗಳ ವಿಚಾರದಲ್ಲೂ ಪರಿಶೀಲನೆ ನಡೆಯುತ್ತಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪ್ರಣಾಳಿಕೆಯಲ್ಲಿ ಹೇಳಿದಂತೆ ಅಕ್ಕಿಯನ್ನು ರಾಜ್ಯ ಸರಕಾರ ಕೊಡುತ್ತಿದೆ. ಇತ್ತೀಚೆಗೆ ಅಕ್ಕಿಯ ಉಪಯೋಗ ಕಡಿಮೆಯಾಗಿದೆ ಎಂದು ತಿಳಿದುಬಂತು. ಅಷ್ಟೇ ಅಲ್ಲದೆ ಅಕ್ಕಿ ಕಾಳಸಂತೆಗೂ ಹೋಗುವುದು ತಿಳಿಯಿತು. ಹೀಗಾಗಿ ಅಕ್ಕಿ ಬದಲಾಗಿ ಬೇರೆ ಬೇರೆ ಧಾನ್ಯ ಕೊಡಲು ತೀರ್ಮಾನ ಮಾಡಿದ್ದೇವೆ. ಮುಂದಿನ ಒಂದೆರಡು ತಿಂಗಳಲ್ಲೇ ಟೆಂಡರ್ ಕರೆದು ಕೊಡುತ್ತೇವೆ. ರಾಗಿ, ಬೇಳೆ, ಎಣ್ಣೆಯನ್ನು ತೂಕ ಹಾಗೂ ಗುಣಮಟ್ಟದಂತೆ ನೀಡುತ್ತೇವೆ.ಆ ಮೂಲಕ ಪ್ರತಿ ಕುಟುಂಬಕ್ಕೆ ಪೌಷ್ಟಿಕ ಆಹಾರ ಕೊಡುತ್ತೇವೆ.
-ಕೆ.ಎಚ್.ಮುನಿಯಪ್ಪ, ಸಚಿವ