ಕೆಂಪುಕೋಟೆ ಬಳಿ ಸ್ಫೋಟ : ಶಿವಮೊಗ್ಗದಲ್ಲಿ ಕಟ್ಟೆಚ್ಚರ; ಬಸ್ ನಿಲ್ದಾಣ ಸೇರಿ ಹಲವೆಡೆ ತಪಾಸಣೆ
ಶಿವಮೊಗ್ಗ: ಕಳೆದ ರಾತ್ರಿ ದೆಹಲಿಯಲ್ಲಿ ಸ್ಪೋಟ ಸಂಭವಿಸಿದ ಬೆನ್ನಲ್ಲೇ ಶಿವಮೊಗ್ಗದಲ್ಲಿಯು ಕಟ್ಟೆಚ್ಚರ ವಹಿಸಲಾಗಿದೆ.
ಸೋಮವಾರ ರಾತ್ರಿಯಿಂದಲೇ ಶಿವಮೊಗ್ಗದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ನಗರದ ಖಾಸಗಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಿಟಿ ಸೆಂಟರ್ ಮಾಲ್, ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಬಾಂಬ್ ಪತ್ತೆ ದಳ ಮತ್ತು ಶ್ವಾನದಳದವರು ದಿಢೀರ್ ತಪಾಸಣೆ ನಡೆಸಿದರು.
ಇದೇ ವೇಳೆ ವಾಹನಗಳು, ತಳ್ಳುಗಾಡಿಗಳು, ಲಗೇಜ್‌ಗಳ ತಪಾಸಣೆ ನಡೆಸಲಾಯಿತು. ರೈಲ್ವೆ ನಿಲ್ದಾಣದಲ್ಲಿಯು ಅಲರ್ಟ್ ಪ್ರಕಟಿಸಲಾಗಿದೆ. ನಿಲ್ದಾಣಕ್ಕೆ ಪ್ರವೇಶಿಸುವ ಪ್ರಯಾಣಿಕರು, ಲಗೇಜ್‌ಗಳ ತಪಾಸಣೆ ನಡೆಸುವಂತೆ ರೈಲ್ವೆ ಪೊಲೀಸರಿಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಕಳೆದ ರಾತ್ರಿಯಿಂದಲೇ ತಪಾಸಣೆ ನಡೆಸುತ್ತಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಪ್ರತಿ ವಾಹನ, ಪ್ರಯಾಣಿಕರು ಮತ್ತು ಲಗೇಜ್‌ಗಳನ್ನು ಪೂರ್ಣ ಪರಿಶೀಲಿಸಿಯೆ ಒಳಗೆ ಬಿಡಲು ಸೂಚಿಸಲಾಗಿದೆ.
ದೆಹಲಿ ಸ್ಪೋಟದ ಬೆನ್ನಿಗೆ ದೇಶಾದ್ಯಂತ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿಯು ಕಟ್ಟೆಚ್ಚರ ವಹಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡು ಬಂದಲ್ಲಿ ತಕ್ಷಣ 112 ಅಥವಾ ಕಂಟ್ರೋಲ್ ನಂಬರ್ 9480803300, 08182 261413 ಗೆ ಸಂಪರ್ಕಿಸಬಹುದು.