×
Ad

ಶರಾವತಿ ಮುಳುಗಡೆ ಸಂತ್ರಸ್ತರ ಸಾಗುವಳಿ ಭೂಮಿ ತೆರವು: ಆರೋಪ

Update: 2025-07-21 22:52 IST

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಗಳು ಕಳೆದ 25 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವ ಘಟನೆ ತಾಲೂಕಿನ ಚಿತ್ರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶರಾವತಿ ಮುಳುಗಡೆ ಸಂತ್ರಸ್ತ ರೈತರಾದ ನಿಡುಗೋಡು ರಾಮಪ್ಪ ಹಾಗೂ ಹಡಕೇವಿ ಈಶ್ವರ ಎಂಬವರ ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ತೆರವು ಮಾಡಿದ್ದಾರೆ. ರೈತ ನಿಡುಗೋಡು ರಾಮಪ್ಪ ತಮ್ಮ ಸಾಗುವಳಿ ಭೂಮಿಯಲ್ಲಿ 350 ಅಡಿಕೆ ಗಿಡ, 100 ಕಾಫಿ ಗಿಡ, 25 ತಾಳೆ ಗಿಡ, 50 ಬಾಳೆ ಗಿಡವನ್ನು ನೆಟ್ಟಿದ್ದರು. ರೈತ ಹಡಕೇವಿ ಈಶ್ವರ ಕುಟುಂಬ 250ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಟ್ಟಿದ್ದರು.

ನಿಡುಗೋಡು ರಾಮಪ್ಪ ಹಾಗೂ ಹಡಕೇವಿ ಈಶ್ವರ ಎಂಬವರು ಫಾರಂ ನಂಬರ್ 53/57 ಅರ್ಜಿ ಸಲ್ಲಿಸಿದ್ದರು.ಅರ್ಜಿ ಇತ್ಯರ್ಥ ಬಾಕಿ ಇರುವಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅರಣ್ಯ ಭೂಮಿ ಸಾಗುವಳಿ ಕುರಿತು 2017ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶರಾವತಿ ಮುಳುಗಡೆ ಸಂತ್ರಸ್ತರಾದ ನಿಡುಗೋಡು ರಾಮಪ್ಪ ಹಾಗೂ ಹಡಕೇವಿ ಈಶ್ವರ ಎಂಬವರ ಮೇಲೆ ಪ್ರಕರಣ ದಾಖಲಿಸಿದ್ದರು. ಅರಣ್ಯ ಇಲಾಖೆ ಪ್ರಕರಣವನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ರೈತರನ್ನು ಆರೋಪ ಮುಕ್ತ ಮಾಡಿತ್ತು ಎಂದು ಸಂತ್ರಸ್ತ ರೈತ ನಿಡಗೋಡು ರಾಮಪ್ಪ ತಿಳಿಸಿದರು.

ಸಾಗುವಳಿ ಭೂಮಿಯಲ್ಲಿ ಶುಂಠಿ, ಜೋಳ, ಭತ್ತ ಬೆಳೆಯುತ್ತಿದ್ದೆವು. ಪ್ರಸಕ್ತ ಅಡಿಕೆ, ಕಾಫಿ, ಬಾಳೆ, ತಾಳೆ ಗಿಡ ನೆಟ್ಟಿದ್ದೆವು. ಈಗ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಭೂಮಿಯಲ್ಲಿ ನೆಟ್ಟಿದ್ದ ಗಿಡಗಳನ್ನು ತೆರವು ಮಾಡಿದ್ದಾರೆ.ಆಗಿರುವ ಬೆಳೆ ನಷ್ಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತುಂಬಿಕೊಡಬೇಕು ಎಂದು ಸಂತ್ರಸ್ತ ರೈತ ಸುಧಾಕರ್ ನಿಡಗೋಡು ಆಗ್ರಹಿಸಿದ್ದಾರೆ.

ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ಇತ್ಯರ್ಥವಾಗುವವರೆಗೂ ಯಾವುದೇ ರೈತರ ಸಾಗುವಳಿ ಭೂಮಿ ತೆರವು ಮಾಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News