×
Ad

ತರಬೇತಿ ವೇಳೆ ಪ್ಯಾರಾಚೂಟ್‌ ವೈಫಲ್ಯ; ಶಿವಮೊಗ್ಗ ಮೂಲದ ವಾಯು ಪಡೆಯ ಅಧಿಕಾರಿ ಮೃತ್ಯು

Update: 2025-02-08 11:37 IST

ಮಂಜುನಾಥ್ ಜಿ.ಎಸ್

ಶಿವಮೊಗ್ಗ: ತರಬೇತಿ ವೇಳೆ ಪ್ಯಾರಾಚೂಟ್‌ ತೆರೆದುಕೊಳ್ಳದ ಪರಿಣಾಮ ವಾಯು ಪಡೆಯ ವಾರೆಂಟ್ ಅಧಿಕಾರಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಕೂರು ಗ್ರಾಮದ ಮಂಜುನಾಥ್ ಜಿ.ಎಸ್(36) ಮೃತ ವಾಯು ಪಡೆಯ ಅಧಿಕಾರಿ ಎಂದು ಗುರುತಿಸಲಾಗಿದೆ.

ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್‌ ಡ್ರಾಪ್‌ ಝೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್‌ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್‌ ಬಳಸಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ಆದರೆ ವಾರೆಂಟ್‌ ಆಫೀಸರ್‌ ಮಂಜುನಾಥ್‌ ಜಿ.ಎಸ್‌ ನಾಪತ್ತೆಯಾಗಿದ್ದರು ಎನ್ನಲಾಗಿದೆ.

ಮಂಜುನಾಥ್‌ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಂಜುನಾಥ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಮಾನದಿಂದ ಹಾರಿದ ನಂತರ ಪ್ಯಾರಾಚೂಟ್‌ ತೆರೆದುಕೊಳ್ಳದೆ ಮಂಜುನಾಥ್‌ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಂಜುನಾಥ್‌ ಅವರು ಮೂಲತಃ ಹೊಸನಗರ ತಾಲೂಕು ಸಂಕೂರು ಗ್ರಾಮದ ಕೃಷಿಕ ಕುಟುಂಬದವರಾಗಿದ್ದು, ತಂದೆ ಸುರೇಶ್‌, ತಾಯಿ ನಾಗರತ್ನ ಇಬ್ಬರು ಸಹೋದರಿಯರು, ಓರ್ವ ಸಹೋದರ ಇದ್ದಾರೆ.

ತಮ್ಮೂರಿನ ಸಮೀಪದ ಶಾಲೆಯಲ್ಲಿ ಪ್ರೌಢಶಾಲೆ ಓದಿದ್ದ ಮಂಜುನಾಥ್‌ ಅವರು ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಭಾರತೀಯ ವಾಯು ಸೇನೆಗೆ ಸೇರಿದ್ದ ಇವರು ವೈ ಗ್ರೇಡ್‌ ಅಧಿಕಾರಿಯಾಗಿದ್ದ ವಾರಂಟ್‌ ಅಫೀಸರ್‌ ಆಗಿ  ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಾಗಿದ್ದು, ಒಂದು ಮಗು ಇದೆ.

ಘಟನೆ ಕುರಿತು ಶುಕ್ರವಾರ ಮಧ್ಯಾಹ್ನ ಮಂಜುನಾಥ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಶನಿವಾರ ರಾತ್ರಿ ಮಂಜುನಾಥ್‌ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಿಸಲಿದೆ. ಮಧ್ಯರಾತ್ರಿ ಹೊತ್ತಿಗೆ ಹೊಸನಗರಕ್ಕೆ ಪಾರ್ಥೀವ ಶರೀರ ರವಾನೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News