ಶಿವಮೊಗ್ಗ: ಕರ್ತವ್ಯ ಲೋಪ ಆರೋಪ; ಜೈಲು ಅಧಿಕಾರಿಯ ವಿರುದ್ಧ ಪ್ರಕರಣ ದಾಖಲು
ಶಿವಮೊಗ್ಗ: ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಸೋಗಾನೆ ಸೆಂಟ್ರಲ್ ಜೈಲಿನ ಮುಖ್ಯ ವೀಕ್ಷಕರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯನ ಉಸ್ತುವಾರಿ ಹೊತ್ತಿದ್ದ ಶಿವಮೂರ್ತಿ ಬಸವರಾಜ ಕಂಕಣವಾಡಿ ಎಂಬವರು ಕರ್ತವ್ಯ ಲೋಪ ಎಸಗಿದ ಜೈಲು ಅಧಿಕಾರಿ ಎಂದು ಗುರುತಿಸಲಾಗಿದೆ.
ಚಿನ್ನಯ್ಯನ ಬಿಗಿಭದ್ರತೆಗೆ ನಿಯೋಜನೆಗೊಂಡಿದ್ದ ಶಿವಮೂರ್ತಿ ಬಸವರಾಜ ಕಂಕಣವಾಡಿ ಅವರು ಜೈಲಿನಲ್ಲಿರುವ ಶಿಕ್ಷಾ ಬಂಧಿಗೆ ಮೊಬೈಲ್ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ . ಅ.26 ರಿಂದ ನವೆಂಬರ್ 1ರವರೆಗೆ ಹಗಲು ಪಹರೆ ಕರ್ತವ್ಯಕ್ಕೆ ಜೈಲು ಅಧೀಕ್ಷಕರು ಬಸವರಾಜ ಅವರನ್ನು ನಿಯೋಜಿಸಿದ್ದರು.
ಕಾರಾಗೃಹದ ಮುಖ್ಯ ದ್ವಾರದ ಕೇಜ್ ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಅವರು,ತನ್ನ ಕರ್ತವ್ಯ ಸ್ಥಳದಿಂದ 'ಬಿ' ಗೇಟ್ ಗೆ ಹೋಗಿ ಶಿಕ್ಷಾ ಬಂಧಿ ಫಯಾಝ್ (01870) ಗೆ ಪೇಪರ್ ನಲ್ಲಿ ಸುತ್ತಿ ಮೊಬೈಲ್ ನೀಡಿದ್ದರು ಎಂದು ಎಫ್ಐಆರ್ ನಲ್ಲಿ ದೂರಲಾಗಿದೆ.
ಅ.28 ರ ಬೆಳಿಗ್ಗೆ 8.20 ರ ಸುಮಾರಿಗೆ ತೆರಳಿ ಮೊಬೈಲ್ ನೀಡಿರುವುದು ಜೈಲಿನ ಸಿಸಿಟಿವಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಜೈಲಿನ ಸಿಸಿ ಟಿವಿ ವಿಭಾಗದ ವೀಕ್ಷಕರಾದ ಸುಪ್ರಿಯಾ ವಾಗ್ಮೋರೆ ಅವರು ಪರಿಶೀಲಿಸಿ ಜೈಲಿನ ಮುಖ್ಯ ಅಧೀಕ್ಷಕರಿಗೆ ತಿಳಿಸಿದ್ದಾರೆ. ಈ ವೇಳೆ ಫೈಯಾಜ್ ನನ್ನು ವಿಚಾರಣೆ ಮಾಡಿರುವ ಜೈಲು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ವಿಚಾರಣೆ ವೇಳೆ ಇನ್ನೋರ್ವ ಶಿಕ್ಷಾ ಬಂಧಿ ಕೆ.ಅನಿಲ್ ಕುಮಾರ್(01829) ಗೆ ಮೊಬೈಲ್ ನೀಡಿದ್ದಾಗಿ ಫಯಾಜ್ ತಿಳಿಸಿದ್ದಾನೆ. ವಿಚಾರಣೆ ನಂತರ ಜೈಲಿನ ಕೊಠಡಿ ಸಂಖ್ಯೆ 2 ಮತ್ತು 22ನ್ನು ಶೋಧ ನಡೆಸಿದಾಗ ಕೊಠಡಿ ಸಂಖ್ಯೆ 22 ರಲ್ಲಿ ಮುಖ್ಯ ವೀಕ್ಷಕ ಶಿವಮೂರ್ತಿ ಬಸವರಾಜ ಕಂಕಣವಾಡಿ ನೀಡಿದ ಮೊಬೈಲ್ ಪತ್ತೆಯಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಗೆ ಜೈಲು ಸೂಪರಿಂಟೆಂಡೆಂಟ್ ಪಿ.ರಂಗನಾಥ್ ಅವರು ನೀಡಿದ ದೂರಿನ ಮೇಲೆ ಜೈಲಿನ ಮುಖ್ಯ ವೀಕ್ಷಕ ಶಿವಮೂರ್ತಿ ಬಸವರಾಜ್ ಕಂಕಣವಾಡಿ, ಶಿಕ್ಷಾ ಬಂಧಿಗಳಾದ ಫಯಾಜ್ ಮತ್ತು ಅನಿಲ್ ಕುಮಾರ್ ವಿರುದ್ಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಬಸವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.