ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ: ಈಶ್ವರಪ್ಪ ಆರೋಪ

Update: 2024-04-15 18:17 GMT

ಶಿವಮೊಗ್ಗ: ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯವ ಪ್ರಶ್ನೆಯೇ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬ್ರಹ್ಮ -ಮೋದಿ ಹೇಳಿದರೂ ನಾಮಪತ್ರ ವಾಪಸ್ ಪಡೆಯೋದಿಲ್ಲ ಎಂದು ಹೇಳಿದರೂ ಮತ್ತೆ ಮತ್ತೆ ವಾಪಸ್ಸು ಪಡೆಯುವ ಸಾಧ್ಯತೆ ಎಂದು ವದಂತಿ ಹರಡಿಸುತ್ತಾರೆ. ಇದು ನನ್ನ ಬೆಂಬಲಿತ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡುವ ಯತ್ನ. ಆದರೆ ಇಂತಹ ಯತ್ನ ಸಫಲವಾಗುದಿಲ್ಲ. ನಾನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಎಂಬ ನನ್ನ ಮಾತಿಗೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬೇರೇನು ಹೇಳಬೇಕೆಂದು ಅವರೇ ಹೇಳಲಿ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ. ಹೀಗಾಗಿಯೇ ಕಾಂಗ್ರೆಸ್ ಎಲ್ಲಿಯೂ ಸರಿಯಾದ ಪ್ರಚಾರ ಮಾಡುತ್ತಿಲ್ಲ. ಅವರ ಹೊಂದಾಣಿಕೆಯ ರಾಜಕಾರಣ ಢಾಳಾಗಿ ಕಾಣಿಸುತ್ತಿದೆ. ಮಧು ಬಂಗಾರಪ್ಪ ಮತ್ತು ರಾಘವೇಂದ್ರ ಎಲ್ಲಿಯೂ ಪರಸ್ಪರ ಟೀಕಿಸುತ್ತಿಲ್ಲ. ಇಬ್ಬರೂ ನನ್ನನ್ನು ಟೀಕಿಸುತ್ತಿದ್ದಾರೆ. ಇಂತಹ ಯಾವುದೇ ಟೀಕೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ರಾಘವೇಂದ್ರ ಅವರಿಗೆ ಡಮ್ಮಿ ಅಭ್ಯರ್ಥಿ ಭಯವೇ ಇಲ್ಲ. ಬದಲಾಗಿ ನನ್ನ ಬಗ್ಗೆ ಭಯ ಶುರುವಾಗಿದೆ. ಹೀಗಾಗಿ ನನ್ನ ಬಗ್ಗೆ ಟೀಕಿಸುತ್ತಿದ್ದಾರೆ. ನನ್ನ ಕುರಿತು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಟಿಕೆಟ್ ಹಿಂದೆ ಪಡೆದು ಚುನಾವಣಾ ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದೇನೆ.

ಉತ್ಸಾಹಿ ನಾಯಕ ಗೂಳಿಹಟ್ಟಿ ಶೇಖರ್ ಸ್ವಯಂಪ್ರೇರಿತರಾಗಿ ನನ್ನ ಬೆಂಬಲಕ್ಕೆ ಬಂದು ನಿಂತಿದ್ದಾರೆ. ಕಳೆದ 10 ದಿನಗಳಿಂದ ರಣೋತ್ಸಾಹದಲ್ಲಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಭೋವಿ, ದಲಿತ ಮತ್ತು ಹಿಂದುಳಿದ ವರ್ಗದವರನ್ನು ಸಂಪರ್ಕಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಇನ್ನೊಮ್ಮೆ ಪ್ರಧಾನಿಯಾಗಬೇಕೆಂಬ ಗುರಿ ಅವರದೂ ಕೂಡ ಆಗಿದೆ ಎಂದರು.

ಆರೆಸ್ಸೆಸ್ ಎಂದೂ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ. ಆ ಸಂಘಟನೆಯಲ್ಲಿ ಇರುವವರು ಯಾವುದೇ ಪಕ್ಷ ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ರಾಷ್ಟ್ರೀಯತೆಯ ಗುರಿ ಹೊಂದಿರುವವರಿಗೆ ಸಂಘ ಪರಿವಾರದ ಕಾರ್ಯಕರ್ತರು ಬೆಂಬಲಿಸುತ್ತಾರೆ. ಈ ಚುನಾವಣೆಯಲ್ಲಿ ನನ್ನ ನಿಲುವನ್ನು ಸಾಕಷ್ಟು ಸಂಘ ಪರಿವಾರದ ಕಾರ್ಯಕರ್ತರು ಒಪ್ಪಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪರಿಶುದ್ಧವಾಗಿರಬೇಕು ಎಂಬುದು ಆರೆಸ್ಸೆಸ್ ಹೇಳುತ್ತದೆ. ನಾನೂ ಕೂಡ ಆರೆಸ್ಸೆಸ್ ಕಾರ್ಯಕರ್ತನಾಗಿದ್ದು, ಈ ಪರಿಶುದ್ಧತೆಯ ತತ್ವದ ಹಿನ್ನೆಲೆಯಲ್ಲಿ ಬಿಜೆಪಿ ಶುದ್ಧೀಕರಣದ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದರು.

ಗೋಷ್ಟಿಯಲ್ಲಿ ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗ ಶಾಸ್ತ್ರಿ, ಗಂಗಾಧರ್ ಮಂಡೇನಕೊಪ್ಪ, ಶಿವಾಜಿ, ರಾಜಣ್ಣ, ತಿಪ್ಪೆಸ್ವಾಮಿ, ವಿಶ್ವಾಸ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News