ಏಶ್ಯ ಕಪ್ ಟ್ರೋಫಿ ಹಸ್ತಾಂತರ ವಿವಾದ | ಎಸಿಸಿ ವಾರ್ಷಿಕ ಮಹಾಸಭೆಯಲ್ಲಿ ಭಾರತದಿಂದ ಬಲವಾದ ಆಕ್ಷೇಪ
PC | ANI
ದುಬೈ,ಸೆ. 30: ಟಿ20 ಏಶ್ಯ ಕಪ್ ವಿಜಯದ ಟ್ರೋಫಿಯನ್ನು ಭಾರತಕ್ಕೆ ನೀಡದಿರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಮಂಗಳವಾರ ನಡೆದ ಏಶ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ)ಯ ವಾರ್ಷಿಕ ಮಹಾಸಭೆಯಲ್ಲಿ ‘‘ಬಲವಾದ ಆಕ್ಷೇಪ’’ ವ್ಯಕ್ತಪಡಿಸಿತು. ಆದರೆ, ಆದರೆ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತನ್ನ ಹಠವನ್ನು ಸಡಿಲಿಸಿಲ್ಲ.
ಎಸಿಸಿ ವಾರ್ಷಿಕ ಮಹಾಸಭೆಯಲ್ಲಿ ಬಿಸಿಸಿಐ ಪರವಾಗಿ ಅದರ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಮಾಜಿ ಖಜಾಂಚಿ ಆಶಿಶ್ ಶೇಲರ್ ಭಾಗವಹಿಸಿದ್ದರು.
ಏಶ್ಯ ಕಪ್ ಟ್ರೋಫಿಯು ಈಗಲೂ ಎಸಿಸಿ ಕಚೇರಿಯಲ್ಲಿದೆ. ಅದು ವಿಜೇತ ತಂಡಕ್ಕೆ ಯಾವಾಗ ತಲುಪುವುದು ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.
‘‘ಏಶ್ಯ ಕಪ್ ಟ್ರೋಫಿಯನ್ನು ವಿಜೇತ ತಂಡಕ್ಕೆ ಹಸ್ತಾಂತರಿಸದಿರುವ ಬಗ್ಗೆ ಮತ್ತು ಪಂದ್ಯಾನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಎಸಿಸಿ ಅಧ್ಯಕ್ಷರು ನಡೆಸಿದ ನಾಟಕದ ಬಗ್ಗೆ ಇಂದು ನಡೆದ ಎಸಿಸಿ ವಾರ್ಷಿಕ ಸಭೆಯಲ್ಲಿ ಭಾರತವು ಬಲವಾದ ಆಕ್ಷೇಪ ವ್ಯಕ್ತಪಡಿಸಿತು’’ ಎಂದು ಎಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ.
‘‘ಟ್ರೋಫಿಯನ್ನು ವಿಜೇತ ತಂಡಕ್ಕೆ ಹಸ್ತಾಂತರಿಸಬೇಕು ಎಂಬುದಾಗಿ ಶುಕ್ಲಾ ಸ್ಪಷ್ಟವಾಗಿ ಹೇಳಿದರು. ಅದು ಎಸಿಸಿ ಟ್ರೋಫಿಯಾಗಿದ್ದು, ಯವುದೇ ವ್ಯಕ್ತಿಗೆ ಸೇರಿದ್ದಲ್ಲ ಎಂದು ಅವರು ಹೇಳಿದರು’’ ಎಂದು ಮೂಲ ಹೇಳಿದೆ.
ಆದರೆ, ಟ್ರೋಫಿಯನ್ನು ಕೊಡಲು ನಖ್ವಿ ಈಗಲೂ ಒಪ್ಪಿಲ್ಲ ಎಂದು ಅದು ತಿಳಿಸಿದೆ.