×
Ad

ಭೋಪಾಲ್ ನಲ್ಲಿ ರಸ್ತೆ ಅಪಘಾತ | 2024ರ ಏಶ್ಯಕಪ್ ವಿಜೇತ ವಿಷ್ಣು ರಘುನಾಥನ್ ಸೇರಿ ಇಬ್ಬರು ನೌಕಾದಳದ ನಾವಿಕರು ಮೃತ್ಯು

Update: 2025-11-10 22:37 IST

ಸಾಂದರ್ಭಿಕ ಚಿತ್ರ

ಭೋಪಾಲ್: ರವಿವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ನೌಕಾದಳದ ಇಬ್ಬರು ಪ್ರತಿಭಾವಂತ ನಾವಿಕರು ಮೃತಪಟ್ಟಿದ್ದು, ಈ ಪೈಕಿ ಏಶ್ಯ ಕಪ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ವಿಷ್ಣು ರಘುನಾಥನ್ ಕೂಡಾ ಸೇರಿದ್ದಾರೆ. ಈ ಇಬ್ಬರೂ ಕೂಡಾ ಕೇರಳ ಮೂಲದವರಾಗಿದ್ದಾರೆ.

ಭೋಪಾಲ್ ನ ಬೋಟ್ ಕ್ಲಬ್ ನಲ್ಲಿ ಆಯೋಜನೆಗೊಂಡಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಮೋಟಾರ್ ಸೈಕಲ್ ನಲ್ಲಿ ತೆರಳುವಾಗ ರವಿವಾರ ಬೆಳಗ್ಗೆ ಭೋಪಾಲ್ ನ ಪರ್ವಾಲಿಯ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 2024ರ ಏಶ್ಯ ಕಪ್ ನ ಚಿನ್ನದ ಪದಕ ವಿಜೇತ ವಿಷ್ಣು ರಂಗನಾಥನ್ (27) ಹಾಗೂ ಕಿರಿಯ ಅಧಿಕಾರಿ ಅನಂತ್ ಕೃಷ್ಣನ್ ಮೃತಪಟ್ಟಿದ್ದಾರೆ.

ಭೋಪಾಲ್ ನಲ್ಲಿ ಆಯೋಜನೆಗೊಂಡಿದ್ದ ನೌಕಾದಳ ಘಟಕದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಈ ಇಬ್ಬರು ಆಗಮಿಸಿದ್ದರು. ಈ ಪೈಕಿ 18 ವರ್ಷದ ಅನಂತ್ ಕೃಷ್ಣನ್ ಇತ್ತೀಚೆಗಷ್ಟೇ ನೌಕಾದಳ ಸೇರ್ಪಡೆಯಾಗಿದ್ದರು.

ರಕ್ಷಾ ವಿಹಾರ ಕಾಲನಿಯಲ್ಲಿ ವೇಗವಾಗಿ ಬಂದ ಭಾರಿ ವಾಹನವೊಂದು ಈ ಇಬ್ಬರು ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಭಾರಿ ವಾಹನ ಹಾಗೂ ಆ ವಾಹನದ ಚಾಲಕನನ್ನು ಪತ್ತೆ ಹಚ್ಚಲು ಡಿಫೆನ್ಸ್ ಕಾಲನಿ ಬಳಿ ಅಳವಡಿಸಲಾಗಿರುವ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಇಬ್ಬರ ಸಾವಿನಿಂದ ಆಘಾತಕ್ಕೀಡಾದ ಮಧ್ಯಪ್ರದೇಶದಾದ್ಯಂತ ಇರುವ ಎಲ್ಲ ನಾವಿಕ-ದೋಣಿ ಚಾಲನಾ ಕ್ಲಬ್ ಗಳು ತಮ್ಮ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News