ಯುಎಸ್ ಓಪನ್ | ನಾಲ್ಕನೇ ಸುತ್ತು ತಲುಪಿದ ಕಾರ್ಲೊಸ್ ಅಲ್ಕರಾಝ್
ಕಾರ್ಲೊಸ್ ಅಲ್ಕರಾಝ್ | Photo Credit : PTI
ನ್ಯೂಯಾರ್ಕ್: ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಚೀನಾದ ಯು ಯಿಬಿಂಗ್ರನ್ನು ನೇರ ಸೆಟ್‌ಗಳಿಂದ ಮಣಿಸಿ ಯು.ಎಸ್.ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಮೂರನೇ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಲ್ಕರಾಝ್ ಅವರು ಯಿಬಿಂಗ್ ವಿರುದ್ಧ 6-3, 6-4, 6-1 ಸೆಟ್‌ಗಳ ಅಂತರದಿಂದ ಜಯಶಾಲಿಯಾದರು. ಈ ಮೂಲಕ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು 17ನೇ ಪಂದ್ಯಕ್ಕೆ ವಿಸ್ತರಿಸಿದರು.
ಮಣಿಕಟ್ಟು ನೋವಿನಿಂದಾಗಿ ಸುಮಾರು ಐದು ತಿಂಗಳ ವಿರಾಮದ ನಂತರ ನ್ಯೂಯಾರ್ಕ್‌ಗೆ ಆಗಮಿಸಿದ್ದ ಸ್ಪೇನ್ ಆಟಗಾರ ಅಲ್ಕರಾಝ್ ಪ್ರತಿಯೊಂದು ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ವೃತ್ತಿಪರ ಟೆನಿಸ್‌ನ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತು ತಲುಪಿದ ಚೀನಾದ ಮೊದಲ ಆಟಗಾರನಾಗುವ ಕನಸು ಕಂಡಿದ್ದ ವಿಶ್ವದ ನಂ.113ನೇ ಆಟಗಾರ ಯಿಬಿಂಗ್ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಲ್ಕರಾಝ್ ದಿಟ್ಟ ಪ್ರದರ್ಶನದಿಂದ ಗೆಲುವು ದಕ್ಕಿಸಿಕೊಂಡರು.
23ರ ವಯಸ್ಸಿನ ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಅಮೆರಿಕದ 21ನೇ ಶ್ರೇಯಾಂಕದ ಟಾಮ್ಮಿ ಪೌಲ್ರನ್ನು ಎದುರಿಸಲಿದ್ದಾರೆ.
ಪ್ರಿ-ಕ್ವಾರ್ಟರ್ ಫೈನಲ್‌ಗೆ ಸಿಟ್ಸಿಪಾಸ್: ಮಾಜಿ ಟಾಪ್ ಫೈವ್ ಆಟಗಾರ ಸ್ಟೆಫನೊಸ್ ಸಿಟ್ಸಿಪಾಸ್ 18ನೇ ಶ್ರೇಯಾಂಕದ ಜಿರಿ ಲೆಹೆಕಾ ವಿರುದ್ಧ ಜಯ ಗಳಿಸಿ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಗ್ರೀಸ್ ಆಟಗಾರ ಸಿಟ್ಸಿಪಾಸ್ ತನ್ನ ಝೆಕ್ ಎದುರಾಳಿಯ ವಿರುದ್ಧ 2-6, 6-1, 7-6(7/3), 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಎರಡು ವರ್ಷಗಳ ನಂತರ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದರು.
ಪಂದ್ಯದಲ್ಲಿ ಮೊದಲ ಸೆಟ್ಟನ್ನು ಲೆಹೆಕಾ ಗೆದ್ದುಕೊಂಡರು. ಎರಡನೇ ಸೆಟ್ಟನ್ನು ಗೆದ್ದ ಸಿಟ್ಸಿಪಾಸ್ ತಿರುಗೇಟು ನೀಡಿದರು. ಮೂರನೇ ಸೆಟ್ ಟೈ-ಬ್ರೇಕರ್‌ನಲ್ಲಿ ಕೊನೆಗೊಂಡಿದ್ದು, ಎದುರಾಳಿಯ ತಪ್ಪಿನ ಲಾಭ ಪಡೆದ ಸಿಟ್ಸಿಪಾಸ್ ಮೇಲುಗೈ ಸಾಧಿಸಿದರು.
ಈ ಹಿಂದೆ ಎರಡು ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ 28ರ ವಯಸ್ಸಿನ ಸಿಟ್ಸಿಪಾಸ್ 2025ರಲ್ಲಿ ತನ್ನನ್ನು ಕಾಡಿದ್ದ ಬೆನ್ನುನೋವಿನ ಸಮಸ್ಯೆಯಿಂದ ಮುಕ್ತವಾಗಿದ್ದೇನೆ ಎಂದು ಹೇಳಿದ್ದಾರೆ.