Photo Credit: RITU RAJ KONWAR

ಜಕಾರ್ತ: ಮೂರನೇ ಶ್ರೇಯಾಂಕದ ಅನ್ಮೋಲ್ ಖರ್ಬ್ 2026ರ ಆವೃತ್ತಿಯ ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್‌ನಲ್ಲಿ ಚೀನಾದ ಕ್ಸು ವೆನ್ ಜಿಂಗ್ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಶನಿವಾರ ನಡೆದ ಅಂತಿಮ-4ರ ಪಂದ್ಯದಲ್ಲಿ ಅನ್ಮೋಲ್ ಅವರು ಜಿಂಗ್ ವಿರುದ್ಧ 16-21, 19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಜಿಂಗ್ ಫೈನಲ್ ಪಂದ್ಯದಲ್ಲಿ ಮಾನ್ಸಿ ಸಿಂಗ್ರನ್ನು ಎದುರಿಸಲಿದ್ದಾರೆ. ಮಾನ್ಸಿ ಮತ್ತೊಂದು ಸೆಮಿ ಫೈನಲ್‌ನಲ್ಲಿ ಕೆನಡಾದ ರಾಚೆಲ್ ಚಾನ್ರನ್ನು 21-16, 18-21, 21-18 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

4-1 ಮುನ್ನಡೆ ಪಡೆದ ಅನ್ಮೋಲ್ ಉತ್ತಮ ಆರಂಭ ಪಡೆದರು. ಆದರೆ ಕ್ಸು ವೆನ್ ಜಿಂಗ್ 4-4ರಿಂದ ಸಮಬಲಗೊಳಿಸಿ ತಿರುಗೇಟು ನೀಡಿದರು. ಮಧ್ಯಂತರದ ವೇಳೆಗೆ 11-9 ಮುನ್ನಡೆ ಪಡೆದರು. ಬ್ರೇಕ್ ನಂತರ ಅನ್ಮೋಲ್ 12-12ರಿಂದ ಸಮಬಲಗೊಳಿಸಿ ಪ್ರತಿ ಹೋರಾಟ ನೀಡಿದರು. 13-13 ಹಾಗೂ 14-14ರಿಂದ ಸಮಬಲ ಸಾಧಿಸಿದ ವೆನ್ ಜಿಂಗ್ 18-16ರಿಂದ ಮುನ್ನಡೆ ಸಾಧಿಸಿದರು. 21 ನಿಮಿಷಗಳಲ್ಲಿ ಮೊದಲ ಗೇಮ್ ಅನ್ನು 21-16 ಅಂತರದಿಂದ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಅನ್ಮೋಲ್ 13-12ರಿಂದ ಲೀಡ್ ಪಡೆದರು. ಆಗ ಮತ್ತೊಮ್ಮೆ ಪುಟಿದೆದ್ದ ವೆನ್ ಜಿಂಗ್ 16-16ರಿಂದ ಸಮಬಲಗೊಳಿಸಿದರು. 17-17 ಹಾಗೂ 19-19ರಿಂದ ಸರಿಸಮಾನದ ಹೋರಾಟ ನೀಡಿದ ವೆನ್ ಜಿಂಗ್ 20-19 ರಿಂದ ಗೆಲುವು ದಾಖಲಿಸಿದರು. 49 ನಿಮಿಷಗಳಲ್ಲಿ ನೇರ ಗೇಮ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor