ದುಲೀಪ್ ಟ್ರೋಫಿ | ಫೈನಲ್ ಪಂದ್ಯಕ್ಕೆ ಕೆ.ಎಲ್.ರಾಹುಲ್ ಅಲಭ್ಯ
ಚೆನ್ನೈ: ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ದಕ್ಷಿಣ ವಲಯವನ್ನು ಪ್ರತಿನಿಧಿಸಲಿದ್ದಾರೆಂದು ಈ ಹಿಂದೆ ವರದಿಯಾಗಿತ್ತು. ಆದರೆ ದಕ್ಷಿಣ ವಲಯ ತಂಡದ ನಾಯಕ ತಿಲಕ್ ವರ್ಮಾ ಅವರು ಭಾರತದ ಬ್ಯಾಟರ್ ರಾಹುಲ್ ನಮ್ಮ ತಂಡದ ಭಾಗವಾಗಿರುವುದಿಲ್ಲ ಎಂದು ದೃಢಪಡಿಸಿದ್ದಾರೆ.
ದಕ್ಷಿಣ ವಲಯವು ಟೀಮ್ ಇಂಡಿಯಾದ ಆಟಗಾರರಾದ ದೇವದತ್ತ ಪಡಿಕ್ಕಲ್ ಹಾಗೂ ಮುಹಮ್ಮದ್ ಸಿರಾಜ್‌ರನ್ನು ಸೇರಿಸಿಕೊಂಡಿದೆ. ಪಡಿಕ್ಕಲ್ ಇತ್ತೀಚೆಗೆ ಕೊನೆಗೊಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 109.33ರ ಸರಾಸರಿಯಲ್ಲಿ ಒಟ್ಟು 328 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
‘‘ಪಡಿಕ್ಕಲ್ ಆಗಮನವು ನಮ್ಮ ಬ್ಯಾಟಿಂಗ್ ಸರದಿಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸಿದೆ. ಕಳೆದ ಮೂರು ಪಂದ್ಯಗಳಲ್ಲಿ ಅವರ ಪ್ರಚಂಡ ಫಾರ್ಮ್ ಅನ್ನು ನಾವೆಲ್ಲರೂ ನೋಡಿದ್ದೇವೆ. ಯುವ ಆಟಗಾರರನ್ನು ಒಳಗೊಂಡಿರುವ ದಕ್ಷಿಣ ವಲಯ ತಂಡಕ್ಕೆ ಪಡಿಕ್ಕಲ್ ಹಾಗೂ ಸಿರಾಜ್ ಅನುಭವ ನೀಡಲಿದ್ದಾರೆ’’ಎಂದು ತಿಲಕ್ ಹೇಳಿದ್ದಾರೆ.
‘‘ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸೆಮಿ ಫೈನಲ್‌ನಲ್ಲಿ ರಿಕಿ ಭುಯಿ ಇನಿಂಗ್ಸ್ ಆರಂಭಿಸಿದ್ದು, ಎನ್.ಜಗದೀಶನ್ರೊಂದಿಗೆ ಅಗ್ರ ಸರದಿಯಲ್ಲಿ ಮುಂದುವರಿಯಲಿದ್ದಾರೆ’’ ಎಂದು ತಿಲಕ್ ವಿವರಿಸಿದರು.