ಮಹಿಳೆಯರ ಏಶ್ಯಕಪ್ | ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸುಲಭ ಜಯ
ಶ್ರೀಚರಣಿ, ಪ್ರೇಮಾ ರಾವತ್ ಶಿಸ್ತುಬದ್ಧ ಬೌಲಿಂಗ್
Photo Credit : X@BCCIWomen
ದುಬೈ, ಸೆ. 5: ಏಶ್ಯಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್ಗಳಿಂದ ಸುಲಭವಾಗಿ ಮಣಿಸಿತು. ಸತತ ಮೂರು ಗ್ರೂಪ್ ಪಂದ್ಯಗಳನ್ನು ಜಯಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಿತು.
ಶನಿವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡವು ಭಾರತ ತಂಡದ ಸ್ಪಿನ್ನರ್ಗಳಾದ ಶ್ರೀಚರಣಿ (3–7) ಹಾಗೂ ಪ್ರೇಮಾ ರಾವತ್ (3–9) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 18.1 ಓವರ್ಗಳಲ್ಲಿ ಕೇವಲ 55 ರನ್ ಗಳಿಸಿ ಆಲೌಟ್ ಆಯಿತು.
ಗೆಲ್ಲಲು ಸುಲಭ ಗುರಿ ಪಡೆದ ಭಾರತ ತಂಡವು 8.4 ಓವರ್ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 57 ರನ್ ಗಳಿಸಿತು. ನಾಯಕಿಯಾಗಿ 150ನೇ ಪಂದ್ಯವನ್ನಾಡಿದ ಹರ್ಮನ್ಪ್ರೀತ್ ಕೌರ್ ಸಿಕ್ಸರ್ ಸಿಡಿಸಿ ಗೆಲುವಿನ ವಿಧಿವಿಧಾನ ಪೂರೈಸಿದರು. ಈಗಾಗಲೇ ಸೆಮಿಫೈನಲ್ ಗೆ ತಲುಪಿರುವ ಭಾರತಕ್ಕೆ ಈ ಗೆಲುವು ಹೊಸ ಹುಮ್ಮಸ್ಸು ತಂದಿದೆ.
ಭಾರತ ತಂಡವು ಪಾಕಿಸ್ತಾನ ವಿರುದ್ಧ ಆಡಿರುವ 18 T20ಪಂದ್ಯಗಳಲ್ಲಿ 15ನೇ ಗೆಲುವು ದಾಖಲಿಸಿತು. ಮಹಿಳೆಯರ T20ಏಶ್ಯಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಎಂಟು ಪಂದ್ಯಗಳಲ್ಲಿ ಏಳನೇ ಗೆಲುವು ದಾಖಲಿಸಿ ತನ್ನ ಪ್ರಾಬಲ್ಯ ಮುಂದುವರಿಸಿತು.
ಭಾರತ ತಂಡವು 29 ರನ್ ಗಳಿಸುವಷ್ಟರಲ್ಲಿ ಶೆಫಾಲಿ ವರ್ಮಾ (12 ರನ್), ಪ್ರತಿಕಾ ರಾವಲ್ (4 ರನ್) ಹಾಗೂ ಸ್ಮೃತಿ ಮಂಧಾನ (9 ರನ್) ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಆಗ ನಾಯಕಿ ಹರ್ಮನ್ ಪ್ರೀತ್ ಕೌರ್ (ಔಟಾಗದೆ 18, 18 ಎಸೆತ) ಹಾಗೂ ದೀಪ್ತಿ ಶರ್ಮಾ (ಔಟಾಗದೆ 12 ರನ್, 14 ಎಸೆತ) ಇನ್ನೂ 68 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು 4.3 ಓವರ್ ಗಳಲ್ಲಿ 27 ರನ್ ಗಳಿಸಿದ ಪಾಕ್ ತಂಡವು ಆ ಬಳಿಕ ಪತನದ ಹಾದಿ ಹಿಡಿಯಿತು. ಭಾರತ ತಂಡದ ಗೆಲುವಿಗೆ ಸುಲಭ ಸವಾಲು ನೀಡಿತು. ಪಾಕ್ ಪರ ಶವಾಲ್ ಝುಲ್ಫಿಕರ್ (14 ರನ್) ಸರ್ವಾಧಿಕ ಸ್ಕೋರ್ ಗಳಿಸಿದರು.
ಶ್ರೀಚರಣಿ ಹಾಗೂ ಪ್ರೇಮಾ ತಲಾ ಮೂರು ವಿಕೆಟ್ ಗಳನ್ನು ಪಡೆದರೆ, ದೀಪ್ತಿ ಶರ್ಮಾ (2–5) ಎರಡು ವಿಕೆಟ್ ಪಡೆದರು.