×
Ad

ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿ ‌ʼಟೈಮ್ಡ್‌ ಔಟ್ʼ ಗೆ ಬಲಿಯಾದ ಆಟಗಾರ ಆ್ಯಂಜೆಲೊ ಮ್ಯಾಥ್ಯೂಸ್‌

Update: 2023-11-06 16:42 IST

Photo credit: cricketworldcup.com

ಹೊಸದಿಲ್ಲಿ: ಕ್ರಿಕೆಟಿನಲ್ಲಿ ಬ್ಯಾಟರ್ ಹಲವು ರೀತಿಗಳಲ್ಲಿ ಔಟ್‌ ಆಗುತ್ತಾರೆ, ಆದರೆ “ಟೈಮ್ಡ್‌ ಔಟ್”‌ ಕಾರಣ ಔಟ್‌ ಆಗುವುದು ಅಪರೂಪದಲ್ಲೇ ಅಪರೂಪ.

ಸೋಮವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ರಾಜಧಾನಿಯಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ, “ಟೈಮ್ಡ್‌ ಔಟ್”‌ ಆದ ಶ್ರೀಲಂಕಾದ ಆಟಗಾರ ಆ್ಯಂಜೆಲೊ ಮ್ಯಾಥ್ಯೂಸ್‌, ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಮೊದಲ ಬಾರಿ “ಟೈಮ್ಡ್‌ ಔಟ್”‌ ಆದ ಕ್ರಿಕೆಟಿಗ ಆಗಿದ್ದಾರೆ.

ಶ್ರೀಲಂಕಾ ತಂಡದ ನಂ. 6 ಬ್ಯಾಟರ್ ಆಗಿ ಕ್ರೀಸ್‌ನತ್ತ ನಡೆಯುತ್ತಿದ್ದ ಮ್ಯಾಥ್ಯೂಸ್‌ ಅವರಿಗೆ ಅವರ ಹೆಲ್ಮೆಟ್‌ನಲ್ಲಿನ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಕ್ರೀಸ್‌ ತಲುಪಲು ಸಾಧ್ಯವಾಗಲಿಲ್ಲ.

ಈ ಕಾರಣ ಔಟ್‌ ಅಪೀಲನ್ನು ಬಾಂಗ್ಲಾದೇಶ ತಂಡ ಮಾಡಿತು. ನಂತರ ಅಂಪೈರ್‌ಗಳು ಮ್ಯಾಥ್ಯೂಸ್‌ ಮತ್ತು ಬಾಂಗ್ಲಾದೇಶ ತಂಡದ ಆಟಗಾರರ ಜೊತೆ ಸಮಾಲೋಚನೆ ನಡೆಸಿ ಕೊನೆಗೆ ಮ್ಯಾಥ್ಯೂಸ್‌ ಅವರನ್ನು ಔಟ್‌ ಎಂದು ಘೋಷಿಸಿದರು.

ಟೈಮ್ಡ್‌ ಔಟ್‌ ಎಂದರೇನು?

ಐಸಿಸಿ ಪ್ರಕಾರ ಈ ಕೆಳಗಿನ ಸನ್ನಿವೇಶಗಳಲ್ಲಿ ಬ್ಯಾಟರ್ ಒಬ್ಬರನ್ನು ಟೈಮ್ಡ್‌ ಔಟ್‌ ಎಂದು ಘೋಷಿಸಲಾಗುತ್ತದೆ.

ಒಂದು ವಿಕೆಟ್‌ ಪತನಗೊಂಡಾಗ ಅಥವಾ ಬ್ಯಾಟರ್ ಒಬ್ಬರು ಯಾವುದೋ ಕಾರಣಕ್ಕೆ ಮೈದಾನದಿಂದ ಹೊರಹೋಗಲು ನಿರ್ಧರಿಸಿದಲ್ಲಿ ಹಾಗಾದ ಮೂರು ನಿಮಿಷಗಳೊಳಗೆ ಹೊಸ ಬ್ಯಾಟ್ಸ್‌ಮೆನ್‌ ಕ್ರೀಸಿಗೆ ಬಂದು ಮುಂದಿನ ಬಾಲ್‌ ಎದುರಿಸಲು ಸಜ್ಜಾಗಬೇಕು. ಇಲ್ಲದೇ ಹೋದಲ್ಲಿ ಟೈಮ್ಡ್‌ ಔಟ್‌ ಘೋಷಿಸಲಾಗುತ್ತದೆ.

ಆದರೆ ನಿಯಮಗಳ ಪ್ರಕಾರ ಈ ರೀತಿ ಟೈಮ್ಡ್‌ ಔಟ್‌ ಆದಾಗ ಅದರ ಶ್ರೇಯ ಬೌಲರ್‌ಗೆ ಹೋಗುವುದಿಲ್ಲ.

ಆದರೆ ಐಸಿಸಿ ವಿಶ್ವ ಕಪ್‌ 2023 ನಿಯಮಗಳ ಪ್ರಕಾರ ಕ್ರೀಸಿಗೆ ಬರಲು ಬ್ಯಾಟರ್ ಗೆ ಇರುವ ಸಮಯಾವಕಾಶ 2 ನಿಮಿಷಗಳಾಗಿವೆ. ಒಬ್ಬ ಬ್ಯಾಟರ್ ಔಟ್‌ ಆದರೆ ಅಥವಾ ಆಟದಿಂದ ನಿವೃತ್ತರಾಗಿ ಹೊರಹೋದ ಎರಡು ನಿಮಿಷಗಳಲ್ಲಿ ಹೊಸ ಬ್ಯಾಟರ್ ಕ್ರೀಸಿಗೆ ಬಂದು ಬಾಲ್‌ ಎದುರಿಸಬೇಕು ಎಂದು ವಿಶ್ವಕಪ್‌ ನಿಯಮಗಳು ತಿಳಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News