ವಿಶ್ವ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಸಿಲ್ವರ್ ಕ್ರೀಡಾಕೂಟ | ಪದಕ ವಂಚಿತರಾದ ಅನಿಮೇಶ್ ಕುಜೂರ್
ಅನಿಮೇಶ್ ಕುಜೂರ್ | PC : @OlympicKhel
ಲೂಸರ್ನ್, ಜು. 16: ಸ್ವಿಟ್ಸರ್ ಲ್ಯಾಂಡ್‌ನ ಲೂಸರ್ನ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಸಿಲ್ವರ್ ಕ್ರೀಡಾಕೂಟದಲ್ಲಿ ಬುಧವಾರ ಭಾರತದ ಅನಿಮೇಶ್ ಕುಜೂರ್ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಉತ್ತಮ ನಿರ್ವಹಣೆ ನೀಡಿದ್ದಾರೆ.
ಈ ವಿಭಾಗಗಳಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಅನಿಮೇಶ್, 100 ಮೀಟರ್ ಓಟವನ್ನು 10.28 ಸೆಕೆಂಡ್ ಗಳಲ್ಲಿ ಮುಗಿಸಿದರೆ, 200 ಮೀಟರ್ ಸ್ಪರ್ಧೆಯನ್ನು 20.79 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದರು.
ಅವರು ಪದಕ ಗೆಲ್ಲುವಲ್ಲಿ ವಿಫಲವಾದರೂ, ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಆರು ಪುರುಷ ಅತ್ಲೀಟ್ ಗಳ ಪೈಕಿ ಅಗ್ರಗಣ್ಯರಾಗಿ ಹೊರಹೊಮ್ಮಿದರು. ಅವರು 100 ಮೀಟರ್ ಓಟದಲ್ಲಿ 8ನೇ ಸ್ಥಾನ ಗಳಿಸಿದರೆ, 200 ಮೀಟರ್ ಓಟದಲ್ಲಿ 9ನೇ ಸ್ಥಾನ ಪಡೆದರು.
ನ್ಯಾಶನಲ್ ರಿಲೇ ಕಾರ್ನಿವಲ್ ನಲ್ಲಿ ಅವರ 4x100 ಮೀಟರ್ ರಿಲೇ ತಂಡದ ಸದಸ್ಯರಾಗಿರುವ ಮಣಿಕಂಟ ಹೋಬ್ಳಿದಾರ್ ಮತ್ತು ಅಮ್ಲನ್ ಬೊರ್ಗೊಹೈನ್ ನಿರಾಶಾದಾಯಕ ನಿರ್ವಹಣೆ ನೀಡಿದಿರು. ಹೋಬ್ಳಿದಾರ್ 200 ಮೀಟರ್ ಓಟವನ್ನು 21.36 ಸೆಕೆಂಡ್ ಗಳಲ್ಲಿ ಪೂರೈಸಿದರು.
ಐವರು ಭಾರತೀಯರು 100 ಮೀ. ಓಟದಲ್ಲಿ ಭಾಗವಹಿಸಿದರು: ಅನಿಮೇಶ್ ಕುಜೂರ್, ಮಣಿಕಂಟ ಹೋಬ್ಳಿದಾರ್, ಜಯರಾಮ್ ಡಿ.ಎಮ್., ಲಾಲು ಭೋಯಿ ಮತ್ತು ಗುರಿಂದರ್ವಿರ್ ಸಿಂಗ್. 22 ವರ್ಷದ ಅನಿಮೇಶ್ 8ನೇ ಸ್ಥಾನ ಪಡೆದರೆ, ಉಳಿದವರು ಅಗ್ರ 15ರ ಹೊರಗಿನ ಸ್ಥಾನಗಳನ್ನು ಪಡೆದರು.
ಮಹಿಳೆಯರ ಲಾಂಗ್ ಜಂಪ್ ನಲ್ಲಿ, ಮೌಮಿತಾ ಮೊಂಡಲ್ 6.34 ಮೀಟರ್ ದೂರ ಹಾರಿ ಏಳನೇ ಸ್ಥಾನ ಪಡೆದರು. ಎರಡು ಬಾರಿಯ ಏಶ್ಯನ್ ಚಾಂಪಿಯನ್ ಶಿಪ್ಸ್ ಪದಕ ವಿಜೇತೆ ಶೈಲಿ ಸಿಂಗ್ ಕೇವಲ 6.13 ಮೀಟರ್ ದೂರ ಹಾರಿ 10ನೇ ಸ್ಥಾನ ಪಡೆದು ನಿರಾಶೆ ಮೂಡಿಸಿದರು.
ಮೌಮಿತಾ ಮಹಿಳೆಯರ 100 ಮೀಟರ್ ಹರ್ಡಲ್ಸ್ ಹೀಟ್ ನಲ್ಲಿ 13.48 ಸೆಕೆಂಡ್ ನೊಂದಿಗೆ 13ನೇ ಸ್ಥಾನ ಪಡೆದರು.
ಪುರುಷರ ಜಾವೆಲಿನ್ ಎಸೆತದಲ್ಲಿ, 2018ರ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಸಾಹಿಲ್ ಸಿಲ್ವಲ್ ಗ್ರೂಪ್ ಬಿಯಲ್ಲಿ 77.52 ಮೀ. ಈಟಿ ಎಸೆದು ಮೂರನೇ ಸ್ಥಾನ ಗಳಿಸಿದರು.
ಭಾರತದ ಏಕೈಕ ಮಹಿಳಾ ಜಾವೆಲಿನ್ ಎಸೆತಗಾರ್ತಿ ಕರಿಶ್ಮಾ ಸನಿಲ್ ಫೈನಲ್‌ನಲ್ಲಿ 12ನೇ ಸ್ಥಾನ ಗಳಿಸಿದರು. ಅವರು 53.93 ಮೀಟರ್ ದೂರ ಈಟಿ ಎಸೆದರು.