ಆ್ಯಶಸ್ ಸರಣಿ | ನಿವೃತ್ತಿಯಿಂದ ಹಿಂದೆ ಸರಿದಿರುವ ಟೊಂಗ್ ವೀರೋಚಿತ ಪ್ರದರ್ಶನ
ಜೋಶ್ ಟೊಂಗ್ | Photo Credit : AP \ PTI
ಮೆಲ್ಬರ್ನ್, ಡಿ.27: ಕೆಲವು ವರ್ಷಗಳ ಹಿಂದೆ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿಯಾಗಲು ಮುಂದಾಗಿದ್ದ ಇಂಗ್ಲೆಂಡ್‌ನ ವೇಗದ ಬೌಲರ್ ಜೋಶ್ ಟೊಂಗ್ ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತನ್ನ ತಂಡಕ್ಕೆ ನಾಲ್ಕು ವಿಕೆಟ್‌ಗಳ ಅಂತರದಿಂದ ಗೆಲುವು ತಂದುಕೊಟ್ಟ ಸಂಭ್ರಮದಲ್ಲಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಟೊಂಗ್ ಅವರು ಆಸ್ಟ್ರೇಲಿಯ ತಂಡವನ್ನು 152 ರನ್‌ಗೆ ನಿಯಂತ್ರಿಸಿದ್ದರು. ಸಹ ವೇಗದ ಬೌಲರ್ ಅಟ್ಕಿನ್ಸನ್ ಗಾಯದಿಂದಾಗಿ ಮೈದಾನ ತೊರೆದ ನಂತರ ಟೊಂಗ್ ಅವರು ಆಸ್ಟ್ರೇಲಿಯದ ತಂಡದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು.
‘‘ನನ್ನ ಕನಸು ನನಸಾಯಿತು. ಬಾಕ್ಸಿಂಗ್ ಡೇ ಪಂದ್ಯದಲ್ಲಿ ಆಡುವಾಗ ಭಯವಾಗುವುದು ಸಹಜ. ಐದು ವಿಕೆಟ್‌ಗಳನ್ನು ಪಡೆದು ಗೌರವ ಫಲಕದಲ್ಲಿ ನನ್ನ ಹೆಸರನ್ನು ನೋಂದಾಯಿಸಿದ್ದಕ್ಕೆ ನಿಜವಾಗಿಯೂ ವಿಶೇಷ ಅನುಭವವಾಗುತ್ತಿದೆ’’ ಎಂದು ‘ಪಂದ್ಯಶ್ರೇಷ್ಠ’ ಪ್ರಶಸ್ತಿ ವಿಜೇತ ಟೊಂಗ್ ಹೇಳಿದ್ದಾರೆ.
ವೃತ್ತಿಜೀವನದ ಆರಂಭದಲ್ಲಿ ಗಾಯದ ಸಮಸ್ಯೆಗೀಡಾಗಿದ್ದ 28ರ ವಯಸ್ಸಿನ ಟೊಂಗ್ 2023ರಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಆಸ್ಟ್ರೇಲಿಯದಲ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಿದ್ದ ಟೊಂಗ್ ಅವರು ಮೂರನೇ ಪಂದ್ಯದಲ್ಲಿ ಅಟ್ಕಿನ್ಸನ್ ಬದಲಿಗೆ ಆಡಿದ್ದರು. ಅಡಿಲೇಡ್‌ನಲ್ಲಿ ಎರಡನೇ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದರು.
ಟೊಂಗ್ ವೀರೋಚಿತ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯದಲ್ಲಿ 15 ವರ್ಷಗಳ ನಂತರ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಆ್ಯಂಡ್ರೂ ಸ್ಟ್ರಾಸ್ ನಾಯಕತ್ವದ ಇಂಗ್ಲೆಂಡ್ ತಂಡವು 2010-11ರಲ್ಲಿ ಆ್ಯಶಸ್ ಸರಣಿಯ ಐದನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 83 ರನ್‌ಗಳ ಅಂತರದಿಂದ ಜಯಶಾಲಿಯಾಗಿತ್ತು.