ಆ್ಯಶಸ್ ಟೆಸ್ಟ್ ಪಂದ್ಯ: ಕಮಿನ್ಸ್ ಕರಾರುವಾಕ್ ಬೌಲಿಂಗ್, ಇಂಗ್ಲೆಂಡ್ 237 ರನ್ ಗೆ ಆಲೌಟ್
Photo: NDTV, sports
ಲೀಡ್ಸ್: ನಾಯಕ ಪ್ಯಾಟ್ ಕಮಿನ್ಸ್ ಕರಾರುವಾಕ್ ಬೌಲಿಂಗ್ ಗೆ (6-91) ತತ್ತರಿಸಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧದ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 237 ರನ್ ಗೆ ಆಲೌಟಾಯಿತು. ಆಸ್ಟ್ರೇಲಿಯವು ಕೇವಲ 26 ರನ್ ಅಲ್ಪ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಮೊದಲ ದಿನದಾಟವಾದ ಗುರುವಾರ ಆಸ್ಟ್ರೇಲಿಯವನ್ನು 263 ರನ್ ಗೆ ನಿಯಂತ್ರಿಸಿದ್ದ ಇಂಗ್ಲೆಂಡ್ ಶುಕ್ರವಾರ 3 ವಿಕೆಟ್ ನಷ್ಟಕ್ಕೆ 68 ರನ್ ನಿಂದ ತನ್ನ ಇನಿಂಗ್ಸ್ ಮುಂದುವರಿಸಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಬೆನ್ ಸ್ಟೋಕ್ಸ್(80 ರನ್, 108 ಎಸೆತ, 6 ಬೌಂಡರಿ, 5 ಸಿಕ್ಸರ್)ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು. ತಂಡದ ಪರ ಸರ್ವಾಧಿಕ ಸ್ಕೋರನ್ನು ಗಳಿಸಿದರು. ಆರಂಭಿಕ ಬ್ಯಾಟರ್ ಝಾಕ್ ಕ್ರಾವ್ಲೆ(33 ರನ್), ಮಾರ್ಕ್ ವುಡ್(24) ಹಾಗೂ ಮೊಯಿನ್ ಅಲಿ(21 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಕಮಿನ್ಸ್ ಯಶಸ್ವಿ ಬೌಲರ್ ಎನಿಸಿಕೊಂಡರು. ಮಿಚೆಲ್ ಸ್ಟಾರ್ಕ್(2-59)ಎರಡು ವಿಕೆಟ್ ಪಡೆದರು. 6ನೇ ವಿಕೆಟ್ ನ ಸ್ಟೋಕ್ಸ್ ಹಾಗೂ ಅಲಿ ಸೇರಿಸಿದ 44 ರನ್ ಇಂಗ್ಲೆಂಡ್ ಇನಿಂಗ್ಸ್ ನ ಗರಿಷ್ಠ ಜೊತೆಯಾಟವಾಗಿದೆ.
2ನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯವು ಟೀ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದ್ದು ಒಟ್ಟು 55 ರನ್ ಮುನ್ನಡೆಯಲ್ಲಿದೆ. ಡೇವಿಡ್ ವಾರ್ನರ್(1) ಬೇಗನೆ ವಿಕೆಟ್ ಒಪ್ಪಿಸಿದರು. ಉಸ್ಮಾನ್ ಖ್ವಾಜಾ(20) ಹಾಗೂ ಲ್ಯಾಬುಶೇನ್(7 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.