ಏಶ್ಯ ಕಪ್ | ಪಂದ್ಯ ರೆಫರಿಯಾಗಿ ಪೈಕ್ರಾಫ್ಟ್‌ರನ್ನು ವಿರೋಧಿಸಿದ ಪಾಕ್ : ಯುಎಇ ವಿರುದ್ಧ ಆಡಲು ನಿರಾಕರಣೆ
PC : NDTV
ದುಬೈ, ಸೆ. 17: ಬುಧವಾರ ನಡೆಯಬೇಕಾಗಿದ್ದ ಪಾಕಿಸ್ತಾನ ಮತ್ತು ಯುಎಇ ತಂಡಗಳ ನಡುವಿನ ಏಶ್ಯ ಕಪ್ ಪಂದ್ಯವು ಅನಿಶ್ಚಿತತೆಯಿತ್ತ ಸಾಗಿದೆ. ತನ್ನ ವಿರೋಧದ ಹೊರತಾಗಿಯೂ ಆ್ಯಂಡಿ ಪೈಕ್ರಾಫ್ಟ್ ಪಂದ್ಯ ರೆಫರಿಯಾಗಿ ಮುಂದುವರಿದಿರುವುದನ್ನು ಪ್ರತಿಭಟಿಸಿರುವ ಪಾಕಿಸ್ತಾನಿ ತಂಡವು, ಆಟದ ಸಮಯ ಆರಂಭವಾದರೂ ಮೈದಾನಕ್ಕೆ ಇಳಿದಿಲ್ಲ.
ಪೈಕ್ರಾಫ್ಟ್‌ರನ್ನು ಪಂದ್ಯ ರೆಫರಿಯಾಗಿ ಮುಂದುವರಿಸಬಾರದು ಎಂದು ಕೋರಿ ಪಾಕಿಸ್ತಾನ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಮನವಿ ಮಾಡಿತ್ತು. ಅದನ್ನು ಪರಿಶೀಲಿಸಿದ ಐಸಿಸಿ, ಪೈಕ್ರಾಫ್ಟ್ ಯಾವುದೇ ದುರ್ವರ್ತನೆ ತೋರಿಲ್ಲ ಎಂದು ಹೇಳಿತ್ತು. ಅದೂ ಅಲ್ಲದೆ, ಪಂದ್ಯದ ಅಧಿಕಾರಿಗಳ ನೇಮಕಾತಿಯು ಕೇಂದ್ರೀಕೃತ ಐಸಿಸಿ ನಿರ್ಧಾರವಾಗಿದ್ದು, ಅದರ ಮೇಲೆ ಯಾವುದೇ ಸದಸ್ಯ ದೇಶದ ನಿಲುವುಗಳು ಪರಿಣಾಮ ಬೀರಬಾರದು ಎಂದು ಹೇಳಿತ್ತು.
ಬುಧವಾರದ ಪಂದ್ಯದ ಆರಂಭದ ವೇಳೆಗೆ ಪೈಕ್ರಾಫ್ಟ್ ಸ್ಟೇಡಿಯಮ್‌ನಲ್ಲಿ ಉಪಸ್ಥಿತರಿದ್ದರು. ವಿವಾದ ಆರಂಭಗೊಂಡ ಬಳಿಕ ಅವರು ಐಸಿಸಿ ಪ್ರಧಾನ ಕಚೇರಿಗೆ ತೆರಳಿದರು.
ತನ್ನ ಹೊಟೇಲ್‌ನಲ್ಲೇ ಉಳಿದುಕೊಂಡ ಪಾಕಿಸ್ತಾನ ಕ್ರಿಕೆಟ್ ತಂಡವು ಮೈದಾನಕ್ಕೆ ತೆರಳಲಿಲ್ಲ. ಆದರೆ, ಯುಎಇ ತಂಡವು ಸಮಯಕ್ಕೆ ಸರಿಯಾಗಿ ಮೈದಾನ ತಲುಪಿದೆ.
ಈ ನಡುವೆ, ಪಂದ್ಯ ನಡೆಯಬೇಕಾಗಿರುವ ದುಬೈ ಕ್ರಿಕೆಟ್ ಸ್ಟೇಡಿಯಮ್‌ಗೆ ಹೋಗುವಂತೆ ಪಾಕಿಸ್ತಾನಿ ತಂಡಕ್ಕೆ ಸೂಚಿಸಲಾಗಿದೆ ಎಂದು ಏಶ್ಯ ಕ್ರಿಕೆಟ್ ಮಂಡಳಿ (ಎಸಿಸಿ)ಯ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಸಿ)ಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಯುಎಇ-ಪಾಕಿಸ್ತಾನ ಪಂದ್ಯವು ಸ್ಥಳೀಯ ಸಮಯ ಸಂಜೆ 7:30 (ಭಾರತೀಯ ಕಾಲಮಾನ ರಾತ್ರಿ 9 ಗಂಟೆ)ಗೆ ಆರಂಭಗೊಳ್ಳಲು ಮರು ನಿಗದಿಯಾಗಿದೆ. ಪೈಕ್ರಾಫ್ಟ್ ಸರಿಯಾಗಿಯೇ ನಡೆದುಕೊಂಡಿದ್ದಾರೆ ಎಂದು ಐಸಿಸಿ ಹೇಳಿದೆ. ಅವರು ಯಾವುದೇ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ, ವಾಸ್ತವಿಕವಾಗಿ, ಟಾಸ್ ಸಂದರ್ಭದಲ್ಲಿನ ಕೈಕುಲುಕುವಿಕೆಯನ್ನು ರದ್ದುಗೊಳಿಸಲು ಸಂಘಟಕರು ನಿರ್ಧರಿಸಿದ್ದಾರೆ ಎಂಬುದಾಗಿ ಉಭಯ ನಾಯಕರಿಗೆ ಹೇಳುವ ಮೂಲಕ ಅವರು ಸಂಭಾವ್ಯ ಮುಜುಗರವನ್ನು ತಪ್ಪಿಸಲು ನೆರವಾಗಿದ್ದಾರೆ ಎಂದು ಅದು ಹೇಳಿದೆ.